ಬೆಂಗಳೂರು, ಅ 21: ಧರ್ಮಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಎಸ್ ಐ ಟಿ ವ್ಯಾಪ್ತಿಗೆ ತರಬೇಕು ಎಂದು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ʼಕೊಂದವರು ಯಾರುʼ ಆಂದೋಲನದ ಮುಂದಾಳುಗಳು ಆಗ್ರಹಿಸಿದರು.
‘ಕೊಂದವರು ಯಾರು- Who Killed Women In Dharmadthala?’ ಆಂದೋಲನದ 10 ಮಂದಿ ಪ್ರತಿನಿಧಿಗಳ ತಂಡವು ಮುಖ್ಯಮಂತ್ರಿಗಳನ್ನು ಭೇಟಿಮಾಡಿ, ಹಕ್ಕೊತ್ತಾಯ ಸಲ್ಲಿಸಿ, ಚರ್ಚೆ ನಡೆಸಿತು. ಆಂದೋಲನದ ಚಂಪಾವತಿ, ಮಧು ಭೂಷಣ್, ಶಕುನ್, ಮಾಯಾರಾವ್, ಗೌರಮ್ಮ, ಜ್ಯೋತಿ ಎ, ಮಮತಾ ಯಜಮಾನ್, ಮಲ್ಲಿಗೆ ಸಿರಿಮನೆ, ಗೀತಾ, ಸುಜಾತಾ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
- ಮಹಿಳೆಯರು ಮತ್ತು ಕಾಳಜಿಯುಳ್ಳವರು ಸೇರಿ ರೂಪಿಸಿರುವ ಆಂದೋಲನ ‘ಕೊಂದವರು ಯಾರು’ ಎಂಬುದನ್ನು ತಂಡ ವಿವರಿಸಿತು. ರಾಜ್ಯದಲ್ಲಿ ಧರ್ಮಸ್ಥಳದ ನೊಂದ ಮಹಿಳೆಯರ ಪರವಾಗಿ ದನಿಯೆತ್ತುತ್ತಿರುವ ಆಂದೋಲನ ಇದು ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
- ಧರ್ಮಸ್ಥಳದ ಎಲ್ಲ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಎಸ್.ಐ.ಟಿ ವ್ಯಾಪ್ತಿಗೆ ತರಬೇಕು ಎಂಬುದನ್ನು ಆಗ್ರಹಿಸಲಾಯಿತು.
- ಸಿಬಿಐ ಕೋರ್ಟು ಹೇಳಿರುವ ತಪ್ಪಿತಸ್ಥ ಅಧಿಕಾರಿಗಳ ಮೇಲಿನ ಕ್ರಮದ ವಿಚಾರವನ್ನೂ ಚರ್ಚಿಸಲಾಯಿತು.
- ಎಸ್ ಐ ಟಿ ತನಿಖೆ ಸಮಗ್ರವಾಗಿ ನಡೆದು ತಾರ್ಕಿಕ ಅಂತ್ಯ ಮುಟ್ಟುವ ತನಕ ಮುಚ್ಚಬಾರದು ಎಂದು ಒತ್ತಾಯಿಸಿದೆವು.
ಮುಖ್ಯಮಂತ್ರಿಗಳು ಹಕ್ಕೊತ್ತಾಯ ಪಡೆದು, ಎಸ್ ಐ ಟಿ ಜೊತೆಗೆ ಈ ವಿಷಯಗಳನ್ನು ಚರ್ಚಿಸುವುದಾಗಿ ಭರವಸೆ ನೀಡಿದರು.