ನಮ್ಮ ಸರ್ಕಾರ ಬಂದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ಕಡಿಮೆಯಾಗಿದೆ: ಸಿಎಂ ಸಿದ್ದರಾಮಯ್ಯ

Most read

ದಕ್ಷಿಣ ಕನ್ನಡ:  ಜಾತಿ, ಧರ್ಮದ ಹೆಸರಿನಲ್ಲಿ ಕೋಮು ಸಂಘರ್ಷ ನಡೆಸುವುದರಲ್ಲಿ ದಕ್ಷಿಣ ಕನ್ನಡ  ನಂ1 ಆಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಪೂರ್ಣ ಕಡಿವಾಣ ಹಾಕಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  ಶಾಸಕ ಅಶೋಕ್‌ ಕುಮಾರ್‌ ರೈ ನೇತೃತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಶೋಕ ಜನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಎತ್ತಿಕಟ್ಟುವವರ ಮಕ್ಕಳು ಕೋಮುಗಲಭೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮೇಲ್ಜಾತಿ, ಶ್ರೀಮಂತರ ಮಕ್ಕಳು ಯಾರೂ ಸಾಯುವುದಿಲ್ಲ. ಹಾಗಾಗಿ ನಾನು ಯಾರ ಮಾತನ್ನೂ ಕೇಳದೆ ದಕ್ಷ ಕಮಿಷನರ್ ಅವರನ್ನು ನೇಮಕ ಮಾಡಿದ್ದೇನೆ. ಈಗ ಸುಧಾರಣೆ ಆಗಿಲ್ಲವೇ ಎಂದು ಅವರು ಪ್ರಶ್ನಿಸಿದರು.

ದಕ್ಷ ಅಧಿಕಾರಿಗಳು ಇದ್ದರೆ ಬದಲಾವಣೆ ಸಾಧ್ಯ. ಯಾವತ್ತಿಗೂ ಅಮಾಯಕರ ಮಕ್ಕಳನ್ನು ಬಲಿ ಕೊಡುವ ಕೆಲಸ ಮಾಡಬಾರದು. ಬೇರೆ ಧರ್ಮದವರನ್ನು ದ್ವೇಷಿಸಬಾರದು ಎಂದರು.

ಸಮಾಜದಲ್ಲಿ ಅನೇಕ ಜಾತಿ ಮತ್ತು ಧರ್ಮಗಳಿವೆ. ಯಾವ ಧರ್ಮವೂ ದ್ವೇಷ ಮಾಡಿ ಎಂದು ಬೋಧಿಸುವುದಿಲ್ಲ. ಪ್ರತಿಯೊಬ್ಬರನ್ನೂ ಪ್ರೀತಿಸಿ ಎಂದೇ ಹೇಳುತ್ತದೆ. ವೈವಿಧ್ಯತೆಯಲ್ಲಿ ಏಕತೆ ಇರಬೇಕು. ಧರ್ಮದ ತತ್ವ, ಆದರ್ಶ ಪಾಲನೆ ಮಾಡಲಿ. ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣವಾಗಬೇಕೇ ಹೊರತು ದ್ವೇಷ, ಕಚ್ಚಾಟ ಇರಬಾರದು ಎಂದು ಕಿವಿ ಮಾತು ಹೇಳಿದರು.

ಕೋಮು ಸೌಹಾರ್ದತೆ ಇದ್ದರೆ ಜಿಲ್ಲೆ ರಾಜ್ಯ ಅಭಿವೃದ್ಧಿಯಾಗುತ್ತದೆ. ಅದಕ್ಕಾಗಿಯಾದರೂ ನಾವು ಕೋಮು ಸೌಹಾರ್ದ ಕಾಪಾಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೌಹಾರ್ದಕ್ಕೆ ವಿಶೇಷ ಗಮನ ಕೊಡಬೇಕು. ಸುಳ್ಳು ಹೇಳಿದರೆ ಕಾನೂನು ಕ್ರಮ ಜರುಗಿಸಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮಾಜದಲ್ಲಿ ಶ್ರೀಮಂತ, ಬಡವ, ಮೇಲ್ಜಾತಿ, ಕೆಳ ಜಾತಿ ಎಲ್ಲರೂ ಇದ್ದಾರೆ. ಸಮಾನತೆಯ ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದೇ ಇರುವವರಿಗೆ ಸಹಾಯ ಮಾಡಬೇಕು. ಬಸವಣ್ಣ ಕೂಡ ಕಾಯಕ ಮತ್ತು ದಾಸೋಹದ ಬಗ್ಗೆ ಹೇಳಿದ್ದಾರೆ. ನಮ್ಮಲ್ಲಿ ಅಸಮಾನತೆ, ತಾರತಮ್ಯ ಇದೆ, ಇಲ್ಲಿ ಸಮ ಸಮಾಜ ನಿರ್ಮಾಣ ಆಗಬೇಕು. ನಾನು ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದಿಸಲು ಆದೇಶ ಮಾಡಿದ್ದೇನೆ. ಸಂವಿಧಾನ ಅರಿಯದೇ ಇದ್ದರೆ ಸಮ ಸಮಾಜ ನಿರ್ಮಾಣ ಅಸಾಧ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ  ಸಿಎಂ ಸಿದ್ದರಾಮಯ್ಯ  ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಿಸಿದರು.

More articles

Latest article