ಬೈಕ್‌ ಗೆ ಕಾರು ಡಿಕ್ಕಿ; ಹಾಸನಾಂಬ ದರ್ಶನ ಪಡೆದು ಮರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Most read

ಹಾಸನ: ಹಾಸನದ ಹಾಸನಾಂಬ ದೇವಿ ದರ್ಶನ ಪಡೆದು ಬೆಂಗಳೂರಿಗೆ  ಹಿಂತಿರುಗುತ್ತಿದ್ದ ಬೈಕ್ ​ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲಿನಲ್ಲಿ ಭಾನುವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಿಂದ ಯಮಹಾ ಬೈಕ್‌ನಲ್ಲಿ ಬಸವರಾಜು, ಅನುಶ್ರೀ (19), ಛಾಯಾ (20) ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ್ದರು.  ದರ್ಶನ ಮುಗಿಸಿ ಒಂದೇ ಬೈಕ್‌ನಲ್ಲಿ ಮೂವರು ರಾಜಧಾನಿಗೆ ಮರಳುತ್ತಿದ್ದರು. ಕಗ್ಗಲಿಕಾವಲು ಅರಣ್ಯ ಪ್ರದೇಶದಲ್ಲಿ ಚನ್ನರಾಯಪಟ್ಟಣ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು, ಹೌಸಿಂಗ್ ಬೋರ್ಡ್ ಬಳಿ ಮೊದಲು ಆ್ಯಕ್ಟಿವ್ ಹೋಂಡಾಗೆ ಡಿಕ್ಕಿ ಹೊಡೆದು ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ ನಲ್ಲಿದ್ದ ಬಸವರಾಜು ಹಾಗೂ ಅನುಶ್ರೀ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಛಾಯಾ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೋಂಡಾ ಸವಾರ ಮೊಹಮ್ಮದ್ ಶಾಹಿದ್‌ಗೂ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article