ಬೆಂಗಳೂರು: ದೀಪಾವಳಿ ಆರಂಭದ ದಿನವೇ ಬೆಳ್ಳಂಬೆಳಗೆ ದುರಂತವೊಂದು ಸಂಭವಿಸಿದೆ. ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ನ 3ನೇ ಮಹಡಿಯಿಂದ ಯುವಕನೊಬ್ಬ ಬಿದ್ದು ಮೃತಪಟ್ಟಿದ್ದಾನೆ. ಇಂದು ಬೆಳಗ್ಗೆ ಮಾಲ್ ತೆರೆಯುತ್ತಿದ್ದಂತೆ ಕಟ್ಟಡದಿಂದ ಬಿದ್ದು ಯುವಕ ಅಸು ನೀಗಿದ್ದಾನೆ. ಈತನಿಗೆ 40 ವರ್ಷಗಳಿರಬಹದು ಎಂದು ಊಹಿಸಲಾಗಿದೆ. ಇದು ಆತ್ಮಹತ್ಯೆಯೋ ಅಥವಾ ಆಯತಪ್ಪಿ ಬಿದ್ದಿರುವುದೋ ಎಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಕೆಪಿ ಅಗ್ರಹಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿಯಲು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಮಾಲ್ ಗೆ ಸಾರ್ವಜನಿಕರ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.
ಕಳೆದ ವರ್ಷ ಇದೇ ಮಾಲ್ ಗೆ ಪಂಚೆಯುಟ್ಟು ಬಂದಿದ್ದಕ್ಕೆ ಉತ್ತರ ಕರ್ನಾಟದ ವ್ಯಕ್ತಿಯೊಬ್ಬರಿಗೆ ಪ್ರವೇಶ ನಿರಾಕರಿಸಲಾಗಿತ್ತು.
ನಂತರ ಈ ವಿಷಯ ಬಾರಿ ಚರ್ಚೆಗೆ ಕಾರಣವಾಗಿತ್ತು. ವಿಧಾನಮಂಡಲ ಕಲಾಪದಲ್ಲೂ ಈ ವಿಷಯ ಪ್ರಸ್ತಾಪವಾಗಿ ಜಿಟಿ ಮಾಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಂತಿಮವಾಗಿ ತಪ್ಪೊಪ್ಪಿಕೊಂಡ ಮಾಲ್ ಆ ವ್ಯಕ್ತಿಯನ್ನು ಕರೆಸಿ ಸನ್ಮಾನಿಸಿತ್ತು.