ಕೋಲಾರ: ಬಹುಜನ ಚಳುವಳಿಯ ನಾಯಕರೂˌ ಬೌದ್ಧ ಉಪಾಸಕರೂ ಆದ ಅಂಜನ್ ಬೌದ್ಧ ಸಿ. ( ಸಿ. ಆಂಜನಪ್ಪ ) ನಿಧನ ಹೊಂದಿದ್ದಾರೆ. ಅಂಜನ್ ಬೌದ್ಧ ಅವರು ಪತ್ನಿ, ಬಂಧುಗಳು ಹಾಗೂ ಅಪಾರ ಮಿತ್ರರನ್ನು ಅಗಲಿದ್ದಾರೆ.
42 ವರ್ಷದ ಅಂಜನ್ ಬೌದ್ಧ ಅವರು ಹೊಸಕೋಟೆಯ ತಮ್ಮ ನಿವಾಸದಲ್ಲಿ ಶುಕ್ರವಾರ ನಿರ್ವಾಣ ಹೊಂದಿರುತ್ತಾರೆ. ಕಳೆದ ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಬೌದ್ಧ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅಂಜನ್ ಬೌದ್ಧ ಅವರು ಹೊಸಕೋಟೆಗೆ ಮರಳಿದ್ದರು. ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಅಂಜನ್ ಬೌದ್ಧರ ಪಾರ್ಥಿವ ಶರೀರವನ್ನು ಹೊಸಕೋಟೆಯಿಂದ ರಾತ್ರಿ ಬಂಗಾರಪೇಟೆ ತಾಲ್ಲೂಕು ಮಲ್ಲಂಡಹಳ್ಳಿಗೆ ತರಲಾಗಿದ್ದು ಇಂದು ಮಲ್ಲಂಡಹಳ್ಳಿಯಲ್ಲಿ ಮೃತರ ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಇವರ ಅಂತ್ಯಕ್ರಿಯೆಯನ್ನು ಬೌದ್ಧ ಧರ್ಮ ಪದ್ಧತಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಆಪ್ತರು ತಿಳಿಸಿದ್ದಾರೆ.