“ಮೆಟ್ರೋಸಿಟಿಗಳೂ ಸೆಲೆಬ್ರಿಟಿಗಳೂ”

Most read

ಮಹಾನಗರಗಳ ಭವಿಷ್ಯವನ್ನು ಈಗಾಗಲೇ ಒಂದು ಮಟ್ಟಿಗೆ ಅರಿತಿರುವ ಭಾರತದ ಮಧ್ಯಮ ವರ್ಗಕ್ಕೆ ಮಹಾನಗರಗಳ ಹಲವು ಮುಖಗಳು ಇಂದಿಗೂ ಗಗನಕುಸುಮವೇ. ಹೀಗಾಗಿ ಇಲ್ಲಿಯ ಕೆಲವು ಮಾರುಕಟ್ಟೆಗಳು ಮತ್ತು ಹೂಡಿಕೆಯ ಆಯ್ಕೆಗಳು ಮಧ್ಯಮವರ್ಗದ ಕೈಗೆ ಸದ್ಯಕ್ಕಂತೂ ನಿಲುಕಲಾರದವು. ಇದರಿಂದಾಗಿ ಕೋಟಿಗಳ ಲೆಕ್ಕದಲ್ಲಿ ಹೂಡಿಕೆಯನ್ನು ಮಾಡಬಲ್ಲ ಮೇಲ್ಮಧ್ಯಮ ಅಥವಾ ಮೇಲ್ವರ್ಗಕ್ಕೆಂದೇ ರೂಪಿಸಲಾಗುತ್ತಿರುವ ಹೊಸ ಯೋಜನೆಗಳು ಇನ್ನಿಲ್ಲದ ವೇಗದಲ್ಲಿ ತಲೆಯೆತ್ತುತ್ತಿವೆ – ಪ್ರಸಾದ್‌ ನಾಯ್ಕ್‌, ದೆಹಲಿ

“ಅಪಾರ ಖ್ಯಾತಿ ಮತ್ತು ಸಿರಿವಂತಿಕೆಯ ಅನುಭವವನ್ನು ಒಮ್ಮೆ ಎಲ್ಲರೂ ಪಡೆಯಬೇಕು ಎಂಬುದು ನನ್ನ ಆಸೆ. ಅಲ್ಲಿರುವ ಪೊಳ್ಳುತನವು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು”

ಹೀಗೆ ಹೇಳಿರುವುದು ಖ್ಯಾತ ಹಾಲಿವುಡ್ ನಟ ಜಿಮ್ ಕ್ಯಾರಿ. ಇತ್ತೀಚೆಗೆ ಬಾಲಿವುಡ್ ನಟಿಯೊಬ್ಬರು ಕೂಡ ಇದೇ ಅರ್ಥದ ಒಂದು ಮಾತನ್ನು ಹೇಳಿ ಒಂದಿಷ್ಟು ಸದ್ದು ಮಾಡಿದರು.

ಮಹಾನಗರಗಳಿಗೂ ಸೆಲೆಬ್ರಿಟಿಗಳಿಗೂ ಇರುವ ನಂಟು ಬಹಳ ಹಳೆಯದ್ದು. ಯಶಸ್ಸನ್ನು ಹುಡುಕುತ್ತಾ ಬರುವ ಸಾಮಾನ್ಯರು ದೊಡ್ಡ ಹೆಸರು, ಖ್ಯಾತಿ, ಸಂಪತ್ತನ್ನು ಗಳಿಸಿ ಮಹಾನಗರಗಳಲ್ಲೇ ನೆಲೆಯೂರುವುದು ಸಾಮಾನ್ಯ. ಹಾಗೆ ನೋಡಿದರೆ ಸಮಾಜದ ಎಲೀಟ್ ವರ್ಗಗಳು ಹಂಬಲಿಸುವ ಕಂಫರ್ಟ್ ಮತ್ತು ಗ್ಲಾಮರ್ ಸಿಗುವುದೇ ಮಹಾನಗರಗಳಲ್ಲಿ. ಮಾನವನಿರ್ಮಿತ, ಕೃತಕಗಳೆಂದು ಅದೆಷ್ಟು ಗೊಣಗಿಕೊಂಡರೂ ಬಹುತೇಕರು ಬಯಸುವುದು ಈ ಆರಾಮವನ್ನೇ. ಅತ್ಯಂತ ಬಡರಾಷ್ಟ್ರಗಳಿಂದ ಹಿಡಿದು ಸಿರಿವಂತ ದೇಶಗಳವರೆಗೆ ನೋಡಿದರೂ ಆಯಾ ದೇಶಗಳ ಅಥವಾ ಇತರ ದೇಶಗಳ ಬಹುತೇಕ ಸಿರಿವಂತರು ಸುಸಜ್ಜಿತ ಮಹಾನಗರಗಳಲ್ಲೇ ಬೀಡುಬಿಟ್ಟಿರುವುದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ಇನ್ನು ಅಭಿವೃದ್ಧಿಯ ನಿಟ್ಟಿನಲ್ಲಿ ಬಹಳ ಹಿಂದುಳಿದಿರುವ ಕೆಲ ಆಫ್ರಿಕನ್ ದೇಶಗಳಿಂದ ಬರುವ ಸಾಹಸಿಗಳು ಕೂಡ ಖ್ಯಾತಿಯನ್ನು ಗಳಿಸಿಕೊಂಡ ನಂತರ ನೆಲೆಯೂರಲು ಬಯಸುವುದು ಪ್ಯಾರಿಸ್, ನ್ಯೂಯಾರ್ಕ್ ಮತ್ತು ಲಂಡನ್ ನಂತಹ ಶಹರಗಳಲ್ಲೇ.

ಹಾಲಿವುಡ್ ನಟ ಜಿಮ್ ಕ್ಯಾರಿ

ನಮ್ಮಲ್ಲಿ ಮುಖ್ಯವಾಹಿನಿಯ ಮನರಂಜನೆಯಾಗಿ ಬಾಲಿವುಡ್ ಹೆಚ್ಚು ಸದ್ದು ಮಾಡುವುದರಿಂದಾಗಿ ಮುಂಬೈ ಮಹಾನಗರಕ್ಕೆ ಈ ಸ್ಟಾರ್ ಗಿರಿ ಸಿಕ್ಕಿದೆ. ಮುಂಬೈ ತಲುಪಿರುವ ಹೊಸಬರಿಗೆ ಅಲ್ಲಿಯ ಸ್ಥಳೀಯರು ಬೇರೇನು ತೋರಿಸದಿದ್ದರೂ ಶಾರೂಖ್ ಖಾನನ “ಮನ್ನತ್” ತೋರಿಸುತ್ತಾರೆ. ಬಚ್ಚನ್ ಸಾಹೇಬರ “ಜಲ್ಸಾ” ಅಲ್ಲಿದೆ ನೋಡಿ ಎಂದು ಹೇಳಿ ಕಣ್ಣರಳಿಸುತ್ತಾರೆ. ಇನ್ನು ಮಲಬಾರ್ ಹಿಲ್ಸ್ ಪ್ರದೇಶದಲ್ಲಿ ಓಡಾಡಿದರಂತೂ ಹೆಜ್ಜೆಗೊಂದು ಖ್ಯಾತನಾಮರ ಮನೆಗಳು ಸಿಗುತ್ತವೆ. ಬಹುಷಃ ಮುಂಬೈಯನ್ನು ಹೊರತುಪಡಿಸಿದರೆ ಬಾಲಿವುಡ್ ಮಂದಿಯ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಟ್ರಾವೆಲ್ ಏಜೆಂಟರು ಕಾಣಸಿಗುವುದು ಗೋವಾದಲ್ಲಿ. ಇವೆಲ್ಲದರ ನಡುವೆ ಸ್ಟಾರ್ ಗಿರಿಯು ಈ ಖ್ಯಾತನಾಮರಿಂದ ಶಹರಗಳಿಗೆ ಸಿಕ್ಕಿದ್ದೋ, ಅಥವಾ ಶಹರಗಳಿಂದ ಇವರಿಗೆ ದಕ್ಕಿದ್ದೋ ಎಂಬ ಉತ್ತರವಿಲ್ಲದ ಗೊಂದಲಗಳು ನನ್ನಂಥವರದ್ದು.

ಮನುಷ್ಯನ ಕನಸುಗಳು ದೊಡ್ಡದಾದಂತೆ ಮಹಾನಗರಗಳು ಬೆಳೆದಿವೆ. ಇಲ್ಲಿಯ ವೈಭವವೂ ಹೆಚ್ಚಿದೆ. ಇಂದು ಮಹಾನಗರಗಳೆಂದರೆ ಮಹಾತ್ವಾಕಾಂಕ್ಷೆಯ ತಾಣಗಳು. ಈ ಕಾರಣದಿಂದಾಗಿಯೇ ಎಲೀಟ್ ವರ್ಗವೆಂದು ತಮ್ಮನ್ನು ತಾವು ಕರೆದುಕೊಳ್ಳುವ ಸಿರಿವಂತರು ಮಹಾನಗರಗಳೊಂದಿಗೆ ಬೆಸೆಯುವುದು ಕೂಡ ಹಿಂದೆಂದಿಗಿಂತಲೂ ಹೆಚ್ಚಿದೆ. ಇಂದು ಮುಂಬೈ, ಬೆಂಗಳೂರು, ದಿಲ್ಲಿಯಂತಹ ನಗರಗಳು ಈ ವರ್ಗದ ಮಂದಿಗೆ ಕೇವಲ ವಾಸಸ್ಥಾನವಷ್ಟೇ ಅಲ್ಲ. ಅವುಗಳು ಹೂಡಿಕೆಯ ದೃಷ್ಟಿಕೋನದಲ್ಲಿ ಬಹುಮುಖ್ಯ ಜಾಗವೂ ಹೌದು. ಮಹಾನಗರಗಳೆಂದರೆ ಕಾರ್ಪೊರೆಟ್ ಕಚೇರಿಗಳಿಂದ ಹಿಡಿದು ರಿಯಲ್ ಎಸ್ಟೇಟಿನವರೆಗೂ ಒಂದು ಫಲವತ್ತಾದ ಭೂಮಿ. ಅಕ್ಷರಶಃ ಚಿನ್ನದ ಮೊಟ್ಟೆಯಿಡುವ ಕೋಳಿ.

ಈ ಕಾರಣದಿಂದಾಗಿಯೇ ಮುಂಬೈ ಒಂದನ್ನು ಬಿಟ್ಟು ಉಳಿದ ಮಹಾನಗರಗಳಲ್ಲಿ ನಡೆಯುವ ನಮ್ಮ ಖ್ಯಾತನಾಮರ ಹೆಚ್ಚಿನ ಚಟುವಟಿಕೆಗಳು ಸುದ್ದಿಯಾಗುವುದಿಲ್ಲ. ಹಾಗೆ ನೋಡಿದರೆ ದಿಲ್ಲಿ, ಗುರುಗ್ರಾಮದಂತಹ ಶಹರಗಳಲ್ಲಿ ಸಾಕಷ್ಟು ಸಂಖ್ಯೆಯ ಸೆಲೆಬ್ರಿಟಿಗಳ ನಿವಾಸಗಳಿವೆ. ಈ ಮಂದಿಯ ಒಡೆತನದಲ್ಲಿ ನಡೆಯುವ ಹಲವಾರು ಸಂಸ್ಥೆ, ಉದ್ಯಮಗಳಿವೆ. ಗುರುಗ್ರಾಮದ ಒಂದು ಪ್ರದೇಶವಂತೂ ಕೋಟ್ಯಾಧಿಪತಿಗಳ ಕಾಲೋನಿಯೆಂಬ ಹೆಸರಿನಿಂದಲೇ ಸಾಮಾನ್ಯವಾಗಿ ಕರೆಯಲ್ಪಡುವುದುಂಟು. ಹೀಗಿದ್ದೂ ಇಲ್ಲಿ ತೋರಿಕೆಯ ಶೋ-ಮ್ಯಾನ್ ಶಿಪ್ ಕಾಣುವುದಿಲ್ಲ. ಕ್ಯಾಮೆರಾ-ಪ್ಯಾಪರಾಝಿಗಳ ಅಬ್ಬರಗಳು ಕಾಣುವುದಿಲ್ಲ. ಅಪರೂಪಕ್ಕೊಮ್ಮೆ ಸೆಲೆಬ್ರಿಟಿಯೊಬ್ಬರ ಹೊಸದೊಂದು ಲಕ್ಸ್ಯುರಿ ಬ್ರಾಂಡ್ ಅಥವಾ ಐಷಾರಾಮಿ ಹೋಟೆಲ್ಲೋ, ರೆಸ್ಟೊರೆಂಟೋ ಲಾಂಚ್ ಆದಾಗ ಮಾಧ್ಯಮಗಳಲ್ಲಾಗುವ ಚಿಕ್ಕದೊಂದು ಸಂಚಲನವೊಂದನ್ನು ಬಿಟ್ಟರೆ, ಬೇರೆಲ್ಲವೂ ಎಂದಿನಂತಿರುವುದು ಇಲ್ಲಿ ಸಾಮಾನ್ಯ.

ಮಹಾನಗರಗಳ ಭವಿಷ್ಯವನ್ನು ಈಗಾಗಲೇ ಒಂದು ಮಟ್ಟಿಗೆ ಅರಿತಿರುವ ಭಾರತದ ಮಧ್ಯಮ ವರ್ಗಕ್ಕೆ ಮಹಾನಗರಗಳ ಹಲವು ಮುಖಗಳು ಇಂದಿಗೂ ಗಗನಕುಸುಮವೇ. ಹೀಗಾಗಿ ಇಲ್ಲಿಯ ಕೆಲವು ಮಾರುಕಟ್ಟೆಗಳು ಮತ್ತು ಹೂಡಿಕೆಯ ಆಯ್ಕೆಗಳು ಮಧ್ಯಮವರ್ಗದ ಕೈಗೆ ಸದ್ಯಕ್ಕಂತೂ ನಿಲುಕಲಾರದವು. ಇದರಿಂದಾಗಿ ಕೋಟಿಗಳ ಲೆಕ್ಕದಲ್ಲಿ ಹೂಡಿಕೆಯನ್ನು ಮಾಡಬಲ್ಲ ಮೇಲ್ಮಧ್ಯಮ ಅಥವಾ ಮೇಲ್ವರ್ಗಕ್ಕೆಂದೇ ರೂಪಿಸಲಾಗುತ್ತಿರುವ ಹೊಸ ಯೋಜನೆಗಳು ಇನ್ನಿಲ್ಲದ ವೇಗದಲ್ಲಿ ತಲೆಯೆತ್ತುತ್ತಿವೆ. ಲಕ್ಸ್ಯುರಿ ಎನ್ನುವುದೇ ಈ ಡೀಲುಗಳ ಬಹುದೊಡ್ಡ ಕರೆನ್ಸಿ. ನಮ್ಮ ಸೂಪರ್ ಸ್ಟಾರ್ ಚಿತ್ರನಟರು ಅಥವಾ ಕ್ರಿಕೆಟ್ ಆಟಗಾರರ ಮುಖಾರವಿಂದವೇ ಇಲ್ಲಿ ನಂಬಿಕೆಯ ನಾಣ್ಯ. ವಿಶೇಷವಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ, ಮೆಟ್ರೋಗಳಂತಹ ಹೊಸ ಸರಕಾರಿ ಯೋಜನೆಗಳು ಘೋಷಣೆಯಾದಾಗಲಂತೂ ಇವುಗಳಿಗೆ ಸುಗ್ಗಿ ಕಾಲ. ಹೆಚ್ಚಿನ ಹೂಡಿಕೆಯೊಂದಿಗೆ ಹತ್ತರಷ್ಟು ಲಾಭಾಂಶದ ಅಭಯದಾನ!

ತಾವು ಸಿನೆಮಾಗಳನ್ನು ಬಿಟ್ಟು ಯೂ-ಟ್ಯೂಬ್ ಅಥವಾ ಜನಪ್ರಿಯ ರೀಲುಗಳಲ್ಲಿ ಯಾಕೆ ಕಾಣಿಸಿಕೊಳ್ಳುವುದಿಲ್ಲ ಎಂಬ ಬಗ್ಗೆ ಯಶಸ್ವಿ ಯುವನಟಿಯೊಬ್ಬರು ಒಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದರು. ತನಗೆ ದಕ್ಕಿದ ಖ್ಯಾತಿಗೆ ನಿಜವಾದ ಮೌಲ್ಯ ಸಿಗುವುದು ತಾನು ಅಪರೂಪಕ್ಕೊಮ್ಮೆ ಕಾಣಿಸಿಕೊಂಡಾಗ ಮಾತ್ರ ಎಂಬುದು ಅವರ ಅಭಿಪ್ರಾಯವಾಗಿತ್ತು. ಸದಾ ರೀಲುಗಳಲ್ಲೋ, ಕೆಲಸಕ್ಕೆ ಬಾರದ ವೀಡಿಯೋಗಳಲ್ಲೋ ಕಾಣಿಸಿಕೊಳ್ಳುತ್ತಿದ್ದರೆ ಉಳಿದ ಇನ್‌ಫ್ಲುಯೆನ್ಸ್‌ರ್ ಗಳಿಗೂ, ಜನಪ್ರಿಯ ನಟಿಯಾಗಿರುವ ತನಗೂ ವ್ಯತ್ಯಾಸವೇ ಉಳಿಯುವುದಿಲ್ಲ ಅನ್ನುವುದು ಇವರ ವಾದ. ಸೆಲೆಬ್ರಿಟಿಯೆಂಬ ಪಟ್ಟವು ತಾನು ಉಳಿದವರಂತಲ್ಲ ಎಂಬ ವಿಶಿಷ್ಟತೆಯ ಪ್ರಭಾವಳಿಯನ್ನಿಟ್ಟುಕೊಂಡೇ ಹುಟ್ಟುವಂಥದ್ದು ಮತ್ತು ಉಳಿಯುವಂಥದ್ದು. ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ಮಹಾನಗರಗಳಿಗಿರುವುದು ಕೂಡ ಇಂತಹ ಪ್ರಭಾವಳಿಯೇ. ಹೀಗಾಗಿ ಇದನ್ನು ಉಳಿಸಿಕೊಳ್ಳಲು ಮಾಡಬೇಕಾಗಿರುವ ಕಸರತ್ತುಗಳು ಇಲ್ಲಿಯ ಅಲಿಖಿತ ಸಂಪ್ರದಾಯವೂ, ಸಹಜಗುಣವೂ ಹೌದು.    

ರಾಲ್ಫ್ ಡೊಬೆಲ್ಲಿ

ಅಷ್ಟಕ್ಕೂ ಈಗಿನ ಕಾಲಮಾನದಲ್ಲಿ “ಸೆಲೆಬ್ರಿಟಿ” ಎಂಬ ಪದಕ್ಕೆ ಅರ್ಥವೇ ಇಲ್ಲ ಎಂದು ತಮ್ಮ ಕೃತಿಯೊಂದರಲ್ಲಿ ಬರೆಯುತ್ತಾರೆ ಖ್ಯಾತ ಲೇಖಕ ರಾಲ್ಫ್ ಡೊಬೆಲ್ಲಿ. ಸಾಹಿತ್ಯ, ಕ್ರೀಡೆ, ಸಂಶೋಧನೆ, ಸಿನೆಮಾ, ವೈದ್ಯಕೀಯ, ವಿಜ್ಞಾನ… ಹೀಗೆ ಯಾವುದಾದರೊಂದು ಕ್ಷೇತ್ರದಲ್ಲಿ ವರ್ಷಗಟ್ಟಲೆ ಕೆಲಸ ಮಾಡಿ, ಅಸಾಮಾನ್ಯ ಸಾಧನೆಗಳನ್ನು ಮಾಡಿದವರಿಗಷ್ಟೇ ಈ ವಿಶೇಷ ಸ್ಥಾನಮಾನವು ಒಂದು ಕಾಲದಲ್ಲಿ ನಸೀಬಾಗುತ್ತಿತ್ತು. ಆದರೆ ಇಂದು ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ಅಚಾನಕ್ಕಾಗಿ ಹುಟ್ಟಿ ಮರೆಯಾಗುತ್ತಿರುವ ರೀಲು ಸ್ಟಾರುಗಳು, ರಿಯಾಲಿಟಿ ಶೋ ಸ್ಟಾರುಗಳು, ವೈರಲ್ ಸ್ಟಾರುಗಳು ಡೊಬೆಲ್ಲಿಯವರ ದೂರದೃಷ್ಟಿಯ ಮಾತುಗಳನ್ನು ನಿಜವಾಗಿಸುತ್ತಲೇ ಇದ್ದಾರೆ. ಇವೆಲ್ಲದರ ಹೊರತಾಗಿಯೂ ಖ್ಯಾತಿಯ ಉತ್ತುಂಗದಲ್ಲಿದ್ದುಕೊಂಡೂ ಎಲ್ಲರೊಳಗೊಂದಾಗಿ ಬದುಕನ್ನು ನಡೆಸುತ್ತಿರುವ ಬೆರಳೆಣಿಕೆಯ ಸೆಲೆಬ್ರಿಟಿಗಳೂ ನಮ್ಮ ನಡುವಿನಲ್ಲಿರುವುದು ವಿಶೇಷ. ತನಗೂ ಖ್ಯಾತಿಗೂ ಸಂಬಂಧವೇ ಇಲ್ಲ ಎಂಬಂತೆ ಖಾಸಗಿತನದ ತನ್ನದೇ ಪುಟ್ಟ ಗೂಡಿನಲ್ಲಿ ಹಾಯಾಗಿರುವ ಪ್ರಖ್ಯಾತ ಗಾಯಕ ಅರಿಜಿತ್ ಸಿಂಗ್ ಇದಕ್ಕೊಂದು ಚಂದದ ನಿದರ್ಶನ.

ಇದನ್ನೂ ಓದಿ- http://“ಮನೆಯಂಥಾ ಹಳ್ಳಿ, ವನದಂಥಾ ನಗರಿ” https://kannadaplanet.com/a-village-like-a-home-a-city-like-a-forest/

ಇತ್ತೀಚೆಗೆ ಕೋಲ್ಕತ್ತಾಗೆ ಹೋಗಬೇಕಾಗಿ ಬಂದಾಗ ಇಂಥದೊಂದು ವಿಚಿತ್ರ ಅನುಭವವಾಗಿತ್ತು. ಯಾವ ಹೊಸ ಪ್ರದೇಶಕ್ಕೆ ಹೋದರೂ ಅಲ್ಲಿಯ ಬೀದಿಗಳನ್ನು ಕಾಲ್ನಡಿಗೆಯಲ್ಲಿ ಸುತ್ತುತ್ತಾ ಅಲ್ಲಿಯ ಅನುಭವಗಳನ್ನು ತನ್ನದಾಗಿಸಿಕೊಳ್ಳುವುದು ನನ್ನ ಅಭ್ಯಾಸಗಳಲ್ಲೊಂದು. ಅದರಲ್ಲೂ ಕೋಲ್ಕತ್ತಾ ಎಂಬ ನಗರವನ್ನು ಟ್ಯಾಗೋರರ ಅಭಿಮಾನಿಗಳಾದ ನನ್ನಂಥವರೆಲ್ಲ ಹಲವು ವರ್ಷಗಳಿಂದ ಮಧುರ ಕನವರಿಕೆಯಂತೆ ಜೋಪಾನವಾಗಿಟ್ಟು ಕೊಂಡವರು. ಈ ಗುಂಗಿನಲ್ಲೇ ಕೋಲ್ಕತ್ತಾದ ಬೀದಿಗಳಲ್ಲಿ ಸುಮ್ಮನೆ ಅಲೆದಾಡುತ್ತಿದ್ದರೆ ಥಟ್ಟನೆ ಪರಿಚಿತ ಮುಖವೊಂದು ಕಂಡಂತಾಯಿತು. ಇದೇನು ಕನಸೋ ಮತ್ತೊಂದೋ ಎಂಬಂತೆ ಮತ್ತಷ್ಟು ಮೈಕೊಡವಿಕೊಂಡು ನೋಡಿದರೂ ಅದೇ ಮುಖ. ಹೀಗೆ ಕೋಲ್ಕತ್ತಾದ ಬೀದಿಯಲ್ಲಿ ನನಗಂದು ಅಚಾನಕ್ಕಾಗಿ ಕಂಡಿದ್ದು ಬೇರ್ಯಾರೂ ಅಲ್ಲ. ಈ ದೇಶದ ಖ್ಯಾತ ಟೆನಿಸ್ ಆಟಗಾರರಲ್ಲೊಬ್ಬರಾದ ಲಿಯಾಂಡರ್ ಪೇಸ್. ಅಸಲಿಗೆ ಲಿಯಾಂಡರ್ ಪೇಸ್-ಮಹೇಶ್ ಭೂಪತಿ, ಲಿಯಾಂಡರ್ ಪೇಸ್-ಮಾರ್ಟಿನಾ ಹಿಂಗಿಸ್, ಲಿಯಾಂಡರ್ ಪೇಸ್-ಮಾರ್ಟಿನಾ ನವ್ರಾಟಿಲೋವಾ ಜೋಡಿಗಳು ಒಂದು ರೀತಿಯಲ್ಲಿ ನಮ್ಮ ಬಾಲ್ಯವನ್ನೆಲ್ಲ ಟೆನಿಸ್ ದಂತಕತೆಗಳಿಂದ ಶ್ರೀಮಂತವಾಗಿಸಿದವರು. ಹೀಗೆ ಸೆಲೆಬ್ರಿಟಿಗಳ ವಿಚಾರದಲ್ಲಿ ಯಾವತ್ತೂ ಅಷ್ಟಾಗಿ ರೋಮಾಂಚನಕ್ಕೊಳಗಾಗದ ನಾನು ಅಂದು ಮಾತ್ರ ಲಿಯಾಂಡರ್ ಪೇಸ್ ರನ್ನು ಹೀಗೆ ಅಚಾನಕ್ಕಾಗಿ ಎದುರಾಗಿ ತಬ್ಬಿಬ್ಬಾಗಿದ್ದೆ. ಕೊನೆಗೂ ನಡುರಸ್ತೆಯಲ್ಲಿ ನನ್ನ ಗರಬಡಿದ ನೋಟ ಮತ್ತು ದಿಗ್ಭ್ರಮೆಯು ಅವರ ಖಾಸಗಿತನಕ್ಕೆ ಧಕ್ಕೆಯಾಗಬಾರದೆಂಬ ಕಾಳಜಿಯಲ್ಲಿ ನಾನೇ ಅಲ್ಲಿಂದ ಮುಂದೆ ನಡೆಯಬೇಕಾಯಿತು. ಅಂದಹಾಗೆ starstruck ಎಂಬ ಪದವನ್ನು ಈ ಹಿಂದೆ ಸಾಕಷ್ಟು ಬಾರಿ ಕೇಳಿದ್ದುಂಟು. ಅಂದು ಆ ಭಾವವನ್ನು ಜೀವಿಸಿದ್ದೂ ಆಯಿತು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ನಿಮಗಿದು ನೆನಪಿರಬಹುದು. ದಿಲ್ಲಿಯ ಹುಡುಗನೆಂದೇ ಜನಪ್ರಿಯವಾಗಿರುವ ವಿರಾಟ್ ಕೊಹ್ಲಿ ತಮ್ಮ ಸಂಸಾರದೊಂದಿಗೆ ಲಂಡನ್ನಿಗೆ ತೆರಳಿದಾಗ ಅದೊಂದು ದೊಡ್ಡ ಸುದ್ದಿಯಾಗಿತ್ತು. ಇದಾದ ಕೆಲಕಾಲದ ನಂತರ ಲಂಡನ್ನಿನ ಬೀದಿಯಲ್ಲಿ ಅವರು ಆರಾಮಾಗಿ ಸುತ್ತುತ್ತಿದ್ದ ಹಲವು ಚಿತ್ರಗಳೂ ವೈರಲ್ ಆದವು. ಅದರಲ್ಲೂ ಈ ಚಿತ್ರದಲ್ಲಿ ಅವರ ಗಡ್ಡದಲ್ಲಿದ್ದ ಬೆಳ್ಳಿಗೆರೆಗಳನ್ನು ನೋಡಿ ಲಕ್ಷಾಂತರ ಅಭಿಮಾನಿಗಳು ಬಹಳ ತಲೆಕೆಡಿಸಿಕೊಂಡರು. ತಮಾಷೆಯೆಂದರೆ 2025ರ ಅಕ್ಟೋಬರ್ ಎರಡನೇ ವಾರದಲ್ಲಿ ಆಸ್ಟ್ರೇಲಿಯಾ ಜೊತೆಗಿನ ಟೂರ್ನಮೆಂಟಿಗೆಂದು ಅವರು ದಿಲ್ಲಿಗೆ ಆಗಮಿಸಿದಾಗ ಎನ್.ಡಿ.ಟಿ.ವಿ ವರದಿಯೊಂದನ್ನು ಪ್ರಕಟಿಸಿತು: “ವಿರಾಟ್ ಕೊಹ್ಲಿ ತಮ್ಮ ಬಿಳಿಗಡ್ಡಕ್ಕೆ ಬಣ್ಣ ಹಚ್ಚಿಯೇ ಭಾರತಕ್ಕೆ ಬಂದಿಳಿದ್ದಾರೆ”, ಎಂಬ ಹೆಡ್‌ಲೈನಿನೊಂದಿಗೆ!

ಮಹಾನಗರಗಳು, ಇಲ್ಲಿಯ ಸೆಲೆಬ್ರಿಟಿಗಳು ಮತ್ತು ಖ್ಯಾತಿಯ ಕತೆ-ದಂತಕತೆಗಳು ಜೊತೆಯಾಗಿಯೇ ಹೆಜ್ಜೆಹಾಕಿ ಸಾಗುವುದು ಹೀಗೆ!

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article