ಆಳಂದ ಕ್ಷೇತ್ರ ಮತಕಳವು: ಬಿಜೆಪಿ ಮುಖಂಡ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ನಿವಾಸದ ಮೇಲೆ ಎಸ್​ಐಟಿ ದಾಳಿ

Most read

ಕಲಬುರಗಿ:ರಾಜ್ಯದಲ್ಲಿ ಮತಕಳ್ಳತನ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ವಿಶೇಷ ತನಿಖಾ ತಂಡ (ಎಸ್‌ ಐಟಿ) ಅಧಿಕಾರಿಗಳು ಇಂದು ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಬಿಜೆಪಿ ಮುಖಂಡ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಎಸ್​ಐಟಿ ಎಸ್​​ಪಿ ಶುಭಾನ್ವಿತಾ ನೇತೃತ್ವದ ತಂಡ ನಗರದ ಗುಬ್ಬಿ ಕಾಲೋನಿಯಲ್ಲಿರುವ ಸುಭಾಷ್ ಗುತ್ತೇದಾರ್ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಗುತ್ತೇದಾರ್‌ ಅವರ ಚಾರ್ಟೆಡ್‌ ಅಕೌಂಟೆಟ್‌  ಮಲ್ಲಿಕಾರ್ಜುನ ಮಹಾಂತಗೋಳ ಮನೆಯ ಮೇಲೂ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಮಲ್ಲಿಕಾರ್ಜುನ ಮಹಾಂತಗೋಳ ಅವರು  2023ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತದಾರರ ಸೇರ್ಪಡೆಗೆ ಅಕ್ರಂ ಎಂಬಾತನಿಗೆ  ಡೀಲ್ ಕೊಟ್ಟಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು. ಹೀಗಾಗಿ ಮಲ್ಲಿಕಾರ್ಜುನ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.

ಗುತ್ತೇದಾರ್ ಅವರ ಪುತ್ರ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ರಾಜರಾಜೇಶ್ವರಿ ನಗರ ನಿವಾಸಿ ಮತ್ತೊಬ್ಬ ಪುತ್ರ, ಉದ್ಯಮಿ ಸಂತೋಷ್ ಗುತ್ತೇದಾರ್ ಅವರುಗಳ ಮನೆಗಳ ಮೇಲೂ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.

ಮೂರು ದಿನಗಳಿಂದ ಕಲಬುರಗಿಯ ರೋಜಾ ಬಡಾವಣೆಯಲ್ಲಿರುವ ಕಂಪ್ಯೂಟರ್‌ ಆಪರೇಟರ್‌ ಅಶ್ಪಾಕ್ ಮನೆ ಹಾಗೂ ಇಜಮ್‌ ಜಮ್ಮೇ ಕಾಲೋನಿಯಲ್ಲಿರುವ ಮತ್ತೊಬ್ಬ ಕಂಪ್ಯೂಟರ್‌ ಆಪರೇಟರ್‌ ಅಕ್ರಮ್‌ ಮನೆಗಳ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಇವರ ಮನೆಗಳಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿಗಳು 15 ಮೊಬೈಲ್‌, 7 ಲ್ಯಾಪ್‌ ಟಾಪ್‌ ಸೇರಿದಂತೆ ಹಲವು ಮಹತ್ವದ ವಸ್ತುಗಳನ್ನು ಎಸ್‌ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು ಎನ್ನಲಾಗಿದೆ.

ಆಳಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಆರ್. ಪಾಟೀಲ್ ತಮ್ಮ ಕ್ಷೇತ್ರದ ಮತಗಳ್ಳತನ ಕುರಿತು ಗಂಭೀರ ಆರೋಪ ಮಾಡಿದ್ದರು. ನಂತರ ದೂರು ದಾಖಲಾಗಿತ್ತು. ಬಳಿಕ ಸರ್ಕಾರ ಈ ಪ್ರಕರಣವನ್ನು ಎಸ್ಐಟಿಗೆ ವಹಿಸಿತ್ತು.

More articles

Latest article