ಬೆಂಗಳೂರು: ಸರ್ಕಾರಿ ಶಾಲಾ ಕಾಲೇಜುಗಳ ಆವರಣಗಳಲ್ಲಿ ಖಾಸಗಿ ಅಥವಾ ಸರ್ಕಾರೇತರ ಸಂಘಸಂಸ್ಥೆಗಳ ಚಟುವಟಿಕೆಗಳನ್ನು ನಡೆಸಲು ಇನ್ನು ಮುಂದೆ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈ ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
2013ರ ಬಿಜೆಪಿ ಸರ್ಕಾರದ ಆದೇಶವನ್ನೇ ಮುಂದಿಟ್ಟು ಸಿದ್ದರಾಮಯ್ಯ ಸರ್ಕಾರ ಆರ್ ಎಸ್ ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿದೆ.
ಈ ಕ್ರಮದಿಂದ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಡೆಸಲು ಆತಂಕ ಎದುರಾಗಿದೆ. ಆರ್ ಎಸ್ ಎಸ್ ತನ್ನ ಬಹುತೇಕ ದೈನಂದಿನ ಶಾಖೆಗಳನ್ನು ನಡೆಸಲು ಶಾಲಾ ಕಾಲೇಜುಗಳ ಮೈದಾನವನ್ನು ಬಳಸುತ್ತಿತ್ತು. ಇದೀಗ ಸಂಘ ಪರಿವಾರದ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.
ಸರ್ಕಾರೇತರ ಅಥವಾ ಖಾಸಗಿ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ದವಾಗಿ ನಡೆಸಲು ಅನುಮತಿ ಪಡೆದುಕೊಳ್ಳಬೇಕಾಗಿರುತ್ತದೆ. ಈ ಸಂಬಂಧ ನಿಯಮಾವಳಿಗಳನ್ನು ರೂಪಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಕೆಲವೇ ದಿನಗಳಲ್ಲಿ ಈ ಬಗ್ಗೆ ವಿಸ್ತೃತವಾಗಿ ಸರ್ಕಾರಿ ಆದೇಶ ಹೊರಡಿಸಲಾಗುವುದು. ಇದಕ್ಕೂ ಮುನ್ನ ಕಾನೂನಿನಲ್ಲಿ ಗೊಂದಲ ಇತ್ತು. ಈ ಬಗ್ಗೆ ಸ್ಪಷ್ಟತೆ ನೀಡಲು, ಕೆಲ ನಿಯಮಗಳನ್ನು ಸೇರ್ಪಡಿಸಿ ನೀತಿ ನಿಯಮ ರೂಪಿಸಲಾಗುವುದು. ಒತ್ತಡದಿಂದ, ಅತಿಕ್ರಮ ಪ್ರವೇಶ ಮಾಡುವುದನ್ನು ತಡೆಯಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಕೇರಳ ಮತ್ತು ತಮಿಳುನಾಡಿನಲ್ಲಿಅಲ್ಲಿನ ಸರ್ಕಾರಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಅದೇ ಮಾದರಿಯನ್ನು ಕರ್ನಾಟಕದಲ್ಲಿ ಅಳವಡಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ತೀರ್ಮಾನ ಕೈಗೊಳ್ಳಲಾಗಿದೆ.