ಅಲೆಮಾರಿಗಳಿಗೆ  ಶೇ. 1ರಷ್ಟು ಮೀಸಲಾತಿ, ಪ್ರತ್ಯೇಕ ಅಭಿವೃದ್ಧಿ ನಿಗಮ, ವಿಶೇಷ ಆರ್ಥಿಕ ಪ್ಯಾಕೇಜ್: ತಾತ್ವಿಕ ಒಪ್ಪಿಗೆ

Most read

ನವದೆಹಲಿ: ಅಲೆಮಾರಿಗಳಿಗೆ  ಶೇ. 1ರಷ್ಟು ಮೀಸಲಾತಿ, ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ವಿಶೇಷ ಆರ್ಥಿಕ ಪ್ಯಾಕೇಜ್ ಗೆ ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ವಿಧಾನಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ ಮಧ್ಯಸ್ಥಿಕೆಯಲ್ಲಿ ನಡದ ಸಂಧಾನದಲ್ಲಿ ಕಾಂಗ್ರೆಸ್‌ ಮುಖಂಡರಿಂದ ಈ ಭರವಸೆ ಸಿಕ್ಕಿದೆ ಎಂದು ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ತಿಳಿಸಿದೆ. ಎಐಸಿಸಿ ಕಚೇರಿ ಅವರಣದಲ್ಲಿ ಕಳೆದ 14 ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನೂ ಕೈಬಿಟ್ಟಿರುವುದಾಗಿ ಅಲೆಮಾರಿ ಮುಖಂಡರು ತಿಳಿಸಿದ್ದಾರೆ.

ಮೀಸಲಾತಿ ಸಂಬಂಧ ದೀಪಾವಳಿ ನಂತರ ಮುಖ್ಯಮಂತ್ರಿ ಸಿದ್ದರಾಮಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಣ್‌ದೀಪ್‌ ಸುರ್ಜೇವಾಲ, ಬಿ.ಕೆ. ಹರಿಪ್ರಸಾದ್‌ ಮತ್ತು ಸಚಿವ ಹೆಚ್.‌ ಸಿ ಮಹದೇವಪ್ಪ ಅವರ ಸಮ್ಮುಖದಲ್ಲಿ ಅಲೆಮಾರಿ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಯಲಿದೆ.

ದೆಹಲಿಯಲ್ಲಿ ಅಕ್ಟೋಬರ್‌ 2ರಿಂದ  ಅಲೆಮಾರಿ ಸಮುದಾಯದ ಸುಮಾರು 600 ಪ್ರತಿನಿಧಿಗಳು ಹಾಗೂ ಕಲಾವಿದರು ದೆಹಲಿಯ ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆ ನಡೆಸಿದ್ದರು. ತಮ್ಮ ಪಾರಂಪರಿಕ ವೇಷಭೂಷಣಗಳಿಂದ ಗಮನ ಸೆಳೆದಿದ್ದರು. ನಂತರ ಅಕ್ಟೋಬರ್‌ 15 ರಿಂದ AICC ಕಛೇರಿಯ ಆವರಣದಲ್ಲಿ ನಿರಂತರ ಧರಣಿ ಸತ್ಯಾಗ್ರವನನ್ನು ಮುಂದುವರೆಸಿತ್ತು.

ಅಲೆಮಾರಿ ಪ್ರತಿನಿಧಿಗಳ ತಂಡವು ಕಾಂಗ್ರೆಸ್ ಹೈಕಮಾಂಡ್‌ ನ ಅನೇಕ ಮುಖಂಡರುಗಳನ್ನು ಭೇಟಿ ಮಾಡಿ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಮನವರಿಕೆ ಮಾಡಿಸುವ ಪ್ರಯತ್ನ ನಡೆಸಿತ್ತು.

ಬಿ.ಕೆ. ಹರಿಪ್ರಸಾದ್‌ ಅವರು ದೆಹಲಿಯಿಂದಲೇ ಕೆ.ಸಿ. ವೇಣುಗೋಪಾಲ್‌, ಸುರ್ಜೆವಾಲ ಹಾಗೂ ಹೆಚ್.‌ ಸಿ. ಮಹದೇವಪ್ಪ ಅವರೊಡನೆ ಕಾನ್‌ ಕಾಲ್‌ ಮೂಲಕ ಕೂಲಂಕಷವಾಗಿ ಚರ್ಚಿಸಿದರು. ಅಲೆಮಾರಿ ಸಮುದಾಯಕ್ಕೆ ಶೇ. 1 ಪ್ರತ್ಯೇಕ ಮೀಸಲಾತಿ ನೀಡಲು ಕರ್ನಾಟಕ ಸರ್ಕಾರಕ್ಕೆ ತಾತ್ವಿಕ ಒಪ್ಪಿಗೆ ಇದೆ. ಇದರ ಪ್ರಕ್ರಿಯೆ ಕುರಿತು ಚರ್ಚಿಸಬೇಕಿದೆ. ವಿಶೇಷ ಪ್ಯಾಕೇಜ್‌ ಮತ್ತು 49 ಅಲೆಮಾರಿ ಸಮುದಾಯಗಳಿಗೆ ಸೀಮಿತವಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನೂ ರಚಿಸಲು ಸರ್ಕಾರ ಸಿದ್ದ ಎಂಬ ಭರವಸೆ ಸಿಕ್ಕಿದೆಎಂದು ಮುಖಂಡರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಧರಣಿಯನ್ನು ಅಂತ್ಯಗೊಳಿಸಲಾಗಿದೆ. ಒಂದು ವೇಳೆ ನಿರೀಕ್ಷೆ ಮತ್ತೆ ಹುಸಿಯಾದರೆ ಮತ್ತೆ ದೆಹಲಿಗೆ ಆಗಮಿಸಿ ಹೋರಾಟ ನಡೆಸುವುದಾಗಿಯೂ ಒಕ್ಕೂಟ ಎಚ್ಚರಿಕೆ ನೀಡಿದೆ.

ಈ ಮಾತುಕತೆಯಲ್ಲಿ ಅಲೆಮಾರಿ ಸಮುದಾಯ ಪರವಾಗಿ ಎ.ಎಸ್.‌ ಪ್ರಭಾಕರ್‌, ಮಂಜುನಾಥ್‌ ದಾಯತ್ಕರ್, ಬಸವರಾಜ್‌ ನಾರಯಣಕರ್, ಚಾವಡಿ ಲೋಕೇಶ್‌, ಮಂಡ್ಯ ರಾಜಣ್ಣ, ಸಂದೀಪ್‌ ಕುಮಾರ್‌ ದಾಸರ್‌, ಶರಣಪ್ಪ ಚನ್ನದಾಸರ್‌, ಸಿಂದೋಳು ಸಮುದಾಯದ ಹನುಮಂತು ಮುಂತಾದವರು ಭಾಗವಹಿಸಿದ್ದರು. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ಕರಿಯಪ್ಪ ಗುಡಿಮನಿ, ಕರ್ನಾಟಕ ಜನಶಕ್ತಿಯ ಅಧ್ಯಕ್ಷ ನೂರ್‌ ಶ್ರೀಧರ್‌ ಹಾಗೂ ಎದ್ದೇಳು ಕರ್ನಾಟಕದ ತಾರಾ ರಾವ್‌ ಅವರು ಭಾಗವಹಿಸಿದ್ದರು.

More articles

Latest article