ಜೈಪುರ: ರಾಜಸ್ತಾನದ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ಗೆ ದಿಢೀರ್ ಎಂದು ಬೆಂಕಿ ಹೊತ್ತಿಕೊಂಡು 20 ಪ್ರಯಾಣಿಕರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ. 16 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಈ ದುರಂತ ಸಂಭವಿಸಿದೆ.
ಈ ಎಸಿ ಸ್ಲೀಫರ್ ಬಸ್ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಹೊರಟಿತ್ತು. ಬಸ್ ಕೇವಲ 20 ಕಿಮೀ ಸಾಗುತ್ತಿದ್ದಂತೆ ನಿರ್ಜನ ಪ್ರದೇಶಲ್ಲಿ ಬೆಂಕಿಗೆ ಆಹುತಿಯಾಗಿದೆ. ಕೆಲವು ಪ್ರಯಾಣಿಕರು ಬಸ್ ನಿಂದ ನೆಗೆದು ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಬೆಂಕಿಗೆ ನಿಖರವಾದ ಕಾರಣ ಪತ್ತೆಯಾಗಿಲ್ಲ, ಆದರೂ ಬಸ್ ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಊಹಿಸಲಾಗಿದೆ.
ಗಾಯಾಳುಗಳಿಗೆ ಆರಂಭದಲ್ಲಿ ಸಮೀಪದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಜೋಧ್ ಪುರದ ಜವಾಹರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ದುರಂತ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಜವಾಹರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.