ಬೆಂಗಳೂರು: ಎಲ್ಲಾ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ನ ಚಟವಟಿಕೆಗಳನ್ನು ನಿರ್ಬಂಧಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ನಂತರ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಕಿಡಿ ಕಾರಿದ್ದಾರೆ.
ಕಳೆದ ಎರಡು ದಿನಗಳಿಂದ ನನ್ನ ಫೋನ್ ರಿಂಗಣಿಸುವುದನ್ನು ನಿಲ್ಲಿಸಿಲ್ಲ. ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಪ್ರಶ್ನಿಸುವ ಹಾಗೂ ತಡೆಯುವ ಧೈರ್ಯ ಮಾಡಿದ್ದರಿಂದ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಬೆದರಿಕೆಗಳು, ಅತ್ಯಂತ ಕೀಳು ಪದಗಳ ನಿಂದನೆಗಳಿಂದ ತುಂಬಿದ ಕರೆಗಳು ಬರುತ್ತಲೇ ಇವೆ.
ಆದರೆ ನಾನು ಇದರಿಂದ ವಿಚಲಿತನಾಗುವುದಿಲ್ಲ ಅಥವಾ ನನಗೆ ಅಚ್ಚರಿಯೂ ಆಗಿಲ್ಲ. ಮಹಾತ್ಮ ಗಾಂಧಿ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರನ್ನೇ ಆರ್‌ಎಸ್‌ಎಸ್ ಬಿಟ್ಟಿಲ್ಲ, ಇನ್ನು ಅವರು ನನ್ನನ್ನು ಹೇಗೆ ಬಿಡುತ್ತಾರೆ?
ಬೆದರಿಕೆಗಳು ಮತ್ತು ವೈಯಕ್ತಿಕ ನಿಂದನೆಗಳಿಂದ ನನ್ನ ಬಾಯಿ ಮುಚ್ಚಿಸಬಹುದು ಎಂದು ಅವರು ಭಾವಿಸಿದ್ದರೆ, ಅದು ಅವರ ಕಲ್ಪನೆ ಮಾತ್ರ. ಇದಿನ್ನೂ ಆರಂಭವಷ್ಟೇ.
ಇದು ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ್ ಅವರ ತತ್ವಗಳ ಮೇಲೆ ಸಮಾಜವನ್ನು ನಿರ್ಮಿಸುವ ಕಾಲ. ಸಮಾನತೆ, ವಿವೇಚನೆ ಮತ್ತು ಕರುಣೆಯಲ್ಲಿ ಬೇರೂರಿರುವ ಸಮಾಜ ಹಾಗೂ ಈ ರಾಷ್ಟ್ರವನ್ನು ಅತ್ಯಂತ ಅಪಾಯಕಾರಿ “viRuSS” ಗಳಿಂದ ಶುದ್ಧೀಕರಿಸುವ ಸಮಯ ಇದಾಗಿದೆ ಎಂದಿದ್ದಾರೆ.