ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಹತ್ತು ದಿನಗಳಲ್ಲಿ 13.16 ಲಕ್ಷ ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜತಿ ಗಣತಿ) ಪೂರ್ಣಗೊಳಿಸಲಾಗಿದೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಇದುವರೆಗೆ, ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 1,71,075 ಮನೆಗಳೂ, ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 1,96,299, ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 3,20,931, ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 2,34,893 ಮತ್ತು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 3,92,985 ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಗುರಿ ತಲುಪಲು ನಗರದ ಎಲ್ಲಾ ನಾಗರಿಕರು ಸಮೀಕ್ಷೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಸೋಮವಾರ ಒಂದೇ ದಿನ ಐದು ಪಾಲಿಕೆ ವ್ಯಾಪ್ತಿಯಲ್ಲಿ 1,19,303 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಅಕ್ಟೋಬರ್ 4 ರಿಂದ 13 ರವರೆಗೆ, 13,12,183 ಮನೆಗಳ ಸಮೀಕ್ಷೆ ಮಾಡಲಾಗಿದೆ. ಇನ್ನೂ 19 ಲಕ್ಷ ಮನೆಗಳ ಸಮೀಕ್ಷೆ ಬಾಕಿ ಉಳಿದಿದ್ದು, ಮುಂದಿನ 5 ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಆರಂಭದಲ್ಲಿ ದಿನಕ್ಕೆ 2 ಲಕ್ಷ ಮನೆಗಳ ಸಮೀಕ್ಷೆಯ ಗುರಿಯನ್ನು ನಿಗದಿಪಡಿಸಲಾಗಿತ್ತು. ನಂತರ ಅದನ್ನು 3 ಲಕ್ಷಕ್ಕೆ ಹೆಚ್ಚಿಲಾಯಿತು. ವಿವಿಧ ಸರ್ಕಾರಿ ಇಲಾಖೆಗಳಿಂದ ನಿಯೋಜಿಸಿದವರೂ ಸೇರಿದಂತೆ 18,000 ಸಿಬ್ಬಂದಿ ಲಭ್ಯವಿದ್ದು, ನಿಗದಿತ ಅವಧಿಯೊಳಗೆ ಸಮೀಕ್ಷೆ ಮುಗಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.