ಅಫ್ಗಾನಿಸ್ತಾನ ಸಚಿವರ ಸುದ್ದಿಗೋಷ್ಠಿ: ಪತ್ರಕರ್ತೆಯರಿಗೆ ನಿರ್ಬಂಧ?; ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

Most read

ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಾಖಿ ಅವರ ಸುದ್ದಿಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿರುವುದಕ್ಕೆ ಕಾಂಗ್ರೆಸ್ ನಾಯಕಿ ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಪತ್ರಕರ್ತೆಯರನ್ನು ಹೊರಗಿಟ್ಟಿರುವ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಅಫ್ಗಾನಿಸ್ತಾನ ವಿದೇಶಾಂಗ ಸಚಿವ ಆಮಿರ್ ಖಾನ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರ ನಡುವೆ ಅಫ್ಗಾನಿಸ್ತಾನ ರಾಯಭಾರ ಕಚೇರಿಯಲ್ಲಿ ಚರ್ಚೆ ನಡೆದಿತ್ತು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮುತ್ತಾಖಿ ಭಾಗವಹಿಸಿದ್ದರು. ಈ ಗೋಷ್ಠಿಗೆ ಸೀಮಿತ ಪತ್ರಕರ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮಹಿಳಾ ಪತ್ರಕರ್ತೆಯರಿಗೆ ಅವಕಾಶ ನಿರಾಕರಿಸಲಾಗಿತ್ತು.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಅವರು, ಸರ್ಕಾರದ ಈ ನಡೆ ದೇಶದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಪ್ರತಿಪಾದಿಸಿದ್ದಾರೆ. ಪ್ರಧಾನಿ ಮೋದಿ ಅವರೇ, ಭಾರತಕ್ಕೆ ಭೇಟಿ ನೀಡಿರುವ ತಾಲಿಬಾನ್‌ ಪ್ರತಿನಿಧಿಯ ಪ್ರತಿಕಾಗೋಷ್ಠಿಯಿಂದ ಮಹಿಳೆಯರನ್ನು ದೂರ ಇಡಲಾಗಿದೆ. ಈ ಸಂಬಂಧ ನಿಮ್ಮ ನಿಲುವು ಏನು ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ ಎಂದಿದ್ದಾರೆ.

ಚುನಾವಣೆಯಿಂದ ಚುನಾವಣೆಗೆ ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡುವುದು ನಿಮಗೆ ಇಷ್ಟವಾಗದಿರಬಹುದು. ಆದರೆ, ಮಹಿಳೆಯರು ಈ ದೇಶದ ಬೆನ್ನೆಲುಬು. ಕೋಟ್ಯಂತರ ಸಮರ್ಥ ಮಹಿಳೆಯರು ದೇಶಕ್ಕೆ ಹೆಸರು ತಂದಿದ್ದಾರೆ. ನಿಮ್ಮ ಸರಕಾರದಲ್ಲಿ ಅವರಿಗೆ ಅವಮಾನ ಆಗಲು ಬಿಟ್ಟಿದ್ದಾದರೂ ಏಕೆ ಎಂದು ಪ್ರಶ್ನಿಸಿದ್ದಾರೆ.

More articles

Latest article