ಮಹಿಳೆ- ಅಪಹರಣ, ನಾಪತ್ತೆ- ಮುಗಿಯದ ವ್ಯಥೆ

Most read

ಹೆಣ್ಣು ದೇಹದ ಪರಿಕಲ್ಪನೆಗೆ ಸುಂದರವಾದ ವ್ಯಾಖ್ಯಾನಗಳು ಹೆಚ್ಚುತ್ತಾ, ಸ್ತ್ರೀ ದೇಹದ ಮೇಲಿನ ಅತ್ಯಾಚಾರವೂ ವ್ಯಾಪಕವಾಗಿ ನಡೆಯುತ್ತಿದೆ. ಭಾರತದಂತಹ ದೇಶಗಳಲ್ಲಿ ಸ್ತ್ರೀ ವ್ಯಭಿಚಾರವನ್ನು ತನ್ನ ದುಡಿಮೆಯಾಗಿ ಸ್ವತಃ ಆಯ್ದುಕೊಳ್ಳುವುದು ಅಪರೂಪ. ಇಲ್ಲಿನ ನಾರಿಯರು ಗಂಡ, ಮನೆ, ಮಕ್ಕಳು ತನ್ನದೊಂದು ಉದ್ಯೋಗ ಇಂತಹ ಸುಂದರ ಬದುಕಿನ ಆಕಾಂಕ್ಷೆಯುಳ್ಳವರು. ಆದರೆ ವಿಪರ್ಯಾಸವೆಂದರೆ ಹೆಣ್ಣನ್ನು ಬಲವಂತವಾಗಿ, ಇಲ್ಲ ಪ್ರೀತಿಯ ಹೆಸರಿನಲ್ಲಿ, ಕಕ್ಕುಲಾತಿಯ ಹೆಸರಿನಲ್ಲಿ ನಿತ್ಯ ಶೋಷಣೆಗೆ ದೂಡುತ್ತಲೇ ಇದೆ ಜಗತ್ತು ನಾಗರೇಖಾ ಗಾಂವಕರ,

ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿದ ಕಥೆ ಇದೆ. ಈ ಘಟನೆ ಸೀತೆಯ ಬದುಕನ್ನೆ ಬಲಿ ಪಡೆಯಿತು. ಮಹಾಭಾರತದಲ್ಲಿ ದೌಪದಿಯನ್ನು ಜಯದ್ರಥ ಅಪಹರಿಸಿದ್ದ. ಪ್ರಾಚೀನ ಗ್ರೀಕ್ ಸಾಹಿತ್ಯದ ಹೋಮರನ “ಇಲಿಯಡ್ ಮತ್ತು ಒಡೆಸ್ಸಿ” ಕಾವ್ಯಗಳಲ್ಲಿ ಟ್ರಾಯ್ ನಗರದ ಪುಟ್ಟ ರಾಜಕುಮಾರಿ ಹೆಲನ್‍ಳನ್ನು ಬಾಲ್ಯದಲ್ಲಿಯೇ ಅಥೆನ್ಸ್‌ನ  ರಾಜ ಥೀಸಸ್ ಅಪಹರಿಸುತ್ತಾನೆ. ಆದರೆ ಆಕೆಯ ಸಹೋದರರು ಆಕೆಯನ್ನು ರಕ್ಷಿಸಿ ಕರೆತರುತ್ತಾರೆ. ಅನಂತರದಲ್ಲಿ ಸ್ಪಾರ್ಟಾದ ಮೆನೆಲಸ್‍ನ ಮಡದಿಯಾಗಿದ್ದರೂ ಅಪೂರ್ವ ರೂಪವತಿಯಾದ ಹೆಲನ್‍ಳನ್ನು ಟ್ರೋಜನ್ ರಾಜಕುಮಾರ ಪ್ಯಾರಿಸ್ ಮತ್ತೊಮ್ಮೆ ಅಪಹರಿಸುತ್ತಾನೆ. ಇಂತಹ ನೂರಾರು ಉದಾಹರಣೆಗಳು ಭಾರತದ ಪುರಾಣ ಕಥೆಗಳಲ್ಲಿ, ಮಹಾಭಾರತ ರಾಮಾಯಣದಲ್ಲಿ, ಗ್ರೀಕ್ ಪ್ರಾಚೀನ ಸಾಹಿತ್ಯದಲ್ಲಿ ಕಾಣಸಿಗುತ್ತವೆ. ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರ, ದಬ್ಬಾಳಿಕೆಗಳಿಗೆ ಶತಶತಮಾನಗಳ ಇತಿಹಾಸವಿದೆ. ಆದರೆ ಅಂದು ಹೆಣ್ಣು ಮಕ್ಕಳನ್ನು ತಮ್ಮ ಸ್ವೇಚ್ಛೆಗೆ ತಕ್ಕಂತೆ ರಾಜರು ಅಪಹರಿಸುತ್ತಿದ್ದರು. ಸುಂದರಿಯಾದ ಹೆಣ್ಣನ್ನು ಪತ್ನಿಯಾಗಿ ಹೊಂದುವ ಕಾರಣಗಳಿದ್ದವು.  ಇಂದು ವಿದ್ಯಾವಂತ ಜಗತ್ತಿನಲ್ಲಿ ಈ ಅಪಹರಣಗಳು ಕ್ರೌರ್ಯದ ನೆಲೆಯನ್ನು ಒಳಗೊಂಡಿವೆ.

ಇನ್ನು ನಾವು ಚಿಕ್ಕವರಿದ್ದಾಗ ಸುಮಾರು ಎರಡು ಮೈಲು ದೂರದ ಶಾಲೆಗೆ ಹೆದ್ದಾರಿಯ ಗುಂಟ  ನಡೆದು ಹೋಗಬೇಕಿತ್ತು. ಊರಿನ ಎಲ್ಲ ಮಕ್ಕಳು  ಜೊತೆಯಾಗಿ  ಒಟ್ಟೊಟ್ಟಿಗೆ ಶಾಲೆಗೆ ಹೋಗುವುದು ರೂಢಿ. ಆದರೆ ಆಕಸ್ಮಿಕವಾಗಿ ಎಲ್ಲಿಯಾದರೂ ಅಪ್ಪಿತಪ್ಪಿ ಯಾರಿಗಾದರೂ ಒಂಟಿಯಾಗಿ  ಹೋಗಬೇಕಾದ ದಿನ ಬಂದುಬಿಟ್ಟರೆ  ಮಾತ್ರ ಜೀವವನ್ನು ಕೈಯಲ್ಲಿ ಇಟ್ಟುಕೊಂಡೆ ನಡೆಯುತ್ತಿದ್ದೆವು. ಈ ಭಯಕ್ಕೆ ಕಾರಣಗಳಿದ್ದವು. ಆಗೆಲ್ಲ ನಮ್ಮಮ್ಮ ನಮಗೆ ಹೇಳುತ್ತಿದ್ದ ಮಾತೊಂದಿತ್ತು. ಮಕ್ಕಳ ಕಳ್ಳರು ಗಾಡಿಗಳಲ್ಲೆ ಬರುತ್ತಾರೆ. ಮಕ್ಕಳನ್ನು ಕದ್ದು ಮಾರಾಟ ಮಾಡುತ್ತಾರೆ, ಈ ಕಳ್ಳರು ಮಕ್ಕಳಿಗೆ ಸಿಹಿತಿಂಡಿ, ಚಾಕಲೇಟುಗಳನ್ನು ಕೊಟ್ಟು ಮತ್ತು ಭರಿಸಿ ಎಳೆದೊಯ್ಯುತ್ತಾರೆ. ಆ ಮಕ್ಕಳು ಗಂಡು ಮಕ್ಕಳಾದರೆ ಕೈಕಾಲು ಇಲ್ಲ ಕಣ್ಣು ತೆಗೆದು ದೊಡ್ಡ ದೊಡ್ಡ ಪೇಟೆಗಳಲ್ಲಿ ಭಿಕ್ಷೆ ಬೇಡಲು ನಿಲ್ಲಿಸುತ್ತಾರೆ. ಇಲ್ಲ ಸಿಟಿಗಳ ಹೊಟೆಲ್ಲುಗಳಲ್ಲಿ ಕೆಲಸಕ್ಕೆ ಜೀತಕ್ಕಿಟ್ಟುಕೊಳ್ಳುತ್ತಾರೆ. ಹೆಣ್ಣು ಮಕ್ಕಳಾದರೆ ವೇಶ್ಯಾವಾಟಿಕೆಯ ಅಡ್ಡಾಗಳಿಗೆ ಮಾರುತ್ತಾರೆ ಇತ್ಯಾದಿ ಹೇಳಿದ ಮಾತುಗಳು ಅಪರೂಪದಲ್ಲಿ ಅಪರೂಪಕ್ಕೆ ಒಂಟಿಯಾಗಿ ಹೋಗಬೇಕಾದಾಗಲೆಲ್ಲಾ ಕಿವಿಯೊಳಗೆ ಗುಂಯಗುಡುತ್ತಾ, ಇನ್ನಷ್ಟು ಬೆವೆತು  ನಡೆಯುತ್ತಿದ್ದೆವು. ಈ ಕತೆ ಸುಮಾರು ಮೂವತ್ತು ನಲವತ್ತು ವರ್ಷಗಳ ಹಿಂದಿನದು. ಆದರೆ ಇಂದಿಗೂ ಈ ಮಕ್ಕಳ ನಾಪತ್ತೆ,  ಹುಡುಗಿಯರ ನಾಪತ್ತೆ  ಪ್ರಕರಣಗಳು ಕಡಿಮೆ ಆಗುವ ಬದಲು ಮೊದಲಿಗಿಂತ ಹೆಚ್ಚೇ ಆಗುತ್ತಿದೆ.

ಇದೇ 2025ರ ಕಳೆದ ಸಪ್ಟೆಂಬರ್ ತಿಂಗಳಿನಲ್ಲೆ ಚಂಢಿಗಡ್‍ದಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾದ ಪ್ರಕರಣ ದಾಖಲಾಯಿತು. ಸಪ್ಟೆಂಬರ 17 ರಂದು ಬುರೇಲ್ ಹಳ್ಳಿಯಿಂದ 16 ವರ್ಷದ ಹುಡುಗಿಯೊಬ್ಬಳು ಹಾಗೂ ಧಾನಸ್ ನಗರದಿಂದ 15 ವರ್ಷದ ಹುಡುಗಿಯೊಬ್ಬಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎರಡು FIR ಗಳು ದಾಖಲಾದವು. ಇನ್ನೂ ಈ ಹುಡುಗಿಯರ ಬಗ್ಗೆ ಮಾಹಿತಿ ಲಭಿಸಿಲ್ಲ.  ಅಷ್ಟೇ ಅಲ್ಲ ದೆಹಲಿಯ ವಜೀರಪುರದಿಂದ 13 ವರ್ಷದ ಹುಡುಗಿಯೊಬ್ಬಳು ಅಗಸ್ಟ್ 17ರಂದು ತನ್ನ ತಂದೆಯೊಂದಿಗೆ ಮನಸ್ತಾಪ ಮಾಡಿಕೊಂಡು ಮನೆ ಬಿಟ್ಟು ಹೊರಟಳು. ಟ್ಯೂಷನ್ ಗೆ ಹೋಗಬೇಕಾದವಳು ಅಸಮಾಧಾನಿಯಾದ ಕಾರಣದಿಂದಲೋ ಹಿಂದೆ ಮುಂದೆ ಯೋಚಿಸದೆ ಟ್ರೇನು ಹಿಡಿದು ಮೀರತ್ ತಲುಪಿದಳು. ಹುಡುಗನೊಬ್ಬನ ಪರಿಚಯವಾಗಿ ಆತನ ಮಾತಿಗೆ ಮರುಳಾಗಿ ಅವನೊಂದಿಗೆ ಹೊರಟಳು. ಆತ ಮತ್ತು ಆತನ ಸ್ನೇಹಿತ ಅವಳನ್ನು ಲೈಂಗಿಕವಾಗಿ ಬಳಸಿಕೊಂಡ ನಂತರದಲ್ಲಿ 40 ವರ್ಷದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದರು. ತಂದೆ ತಾಯಿ ಮಗಳ ನಾಪತ್ತೆ ಕುರಿತಾಗಿ ಪೊಲೀಸು ದೂರು ನೀಡಿದ ಕಾರಣ ಒಂದು ತಿಂಗಳ ನಂತರ ಆಕೆ ಪತ್ತೆಯಾದಳು. ಕಳೆದ ಅಗಸ್ಟ್ ತಿಂಗಳಲ್ಲಿ ಉತ್ತರ ಕನ್ನಡದ ಶಿರಸಿಯ ಕಸ್ತೂರ್‌ಬಾ ನಗರದ ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿನಿಯರು ಮನೆ ಬಿಟ್ಟು ಹೊರಟು ಹೋದರು. ಕಾರಣ ಬಹಳ ಸಿಂಪಲ್. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಪೋಷಕರು ಬೈದದ್ದನ್ನು ಗಂಭೀರವಾಗಿ ತೆಗೆದುಕೊಂಡ ಮಕ್ಕಳು ಹೋಗಿದ್ದು ಮುಂಬೈ ಮಹಾನಗರಕ್ಕೆ. ಜಾಗರೂಕತೆ ಇಲ್ಲವಾದಲ್ಲಿ ಕ್ಷಣಮಾತ್ರದಲ್ಲಿ ಮುಗ್ಧರನ್ನು ಯಾವ ಪರಿಸ್ಥಿತಿಗೂ ತಳ್ಳಬಹುದಾದ ಭಯಂಕರ ಸ್ಥಳಕ್ಕೆ. ರೈಲು ನಿಲ್ದಾಣದಲ್ಲಿ ನಿಂತ ಮುಗ್ಧ ಬಾಲಕಿಯರನ್ನು ಕಂಡ ಕೆಲವರು ಅನುಮಾನ ಪಟ್ಟು ವಿಚಾರಿಸಿ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರಿಂದ ಅಪಾಯದಿಂದ ಬಾಲಕಿಯರು ಪಾರಾಗಿದ್ದಾರೆ. ಇಂತಹ ಹಲವು ಘಟನೆಗಳು ನಿತ್ಯದ ಸಹಜ ಘಟನೆಗಳು ಎಂಬಷ್ಟು ಸಾಮಾನ್ಯವಾಗುತ್ತಿವೆ. 

ಮೇ 25 ವರ್ಲ್ಡ್ ಮಿಸ್ಸಿಂಗ್ ಚಿಲ್ಡ್ರನ್ಸ್ ಡೇ. ಮಕ್ಕಳ ಅಪಹರಣ, ದೌರ್ಜನ್ಯ ಇತ್ಯಾದಿ ಕುರಿತು ಅರಿವು ಮೂಡಿಸುವಂತಹ ಇಂತಹ ದಿನಾಚರಣೆಗಳ ಸಂಖ್ಯೆ ಹೆಚ್ಚುತ್ತಿದೆಯಷ್ಟೇ. ಆದರೆ ಮಕ್ಕಳ ಅಪಹರಣ ಮತ್ತು ನಾಪತ್ತೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಗಾಬರಿ ಹುಟ್ಟಿಸುವಂತಿವೆ. ಅವುಗಳಿಗೆ ಕಾರಣಗಳು ಕೂಡಾ ಅಷ್ಟೇ. 2005ರಿಂದ ಈಚೆಗೆ ಮಕ್ಕಳ ಮೇಲಿನ ಅಪರಾಧಗಳು ಹತ್ತು ಪಟ್ಟು ಹೆಚ್ಚಾಗಿವೆ ಎಂದು NCRB

(ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ವರದಿ ಮಾಡಿದೆ. NCRB ಪ್ರಕಾರ 2022ರಲ್ಲಿ ಪ್ರತಿದಿನಕ್ಕೆ ಸುಮಾರು 172 ಹುಡುಗಿಯರು ಕಾಣೆಯಾಗುತ್ತಾರೆ. 170 ಹುಡುಗಿಯರು ಅಪಹರಣಕ್ಕೊಳಗಾಗುತ್ತಾರೆ. ಸುಮಾರು 3 ಹುಡುಗಿಯರು ಮಾನವ ಕಳ್ಳ ಸಾಗಾಣಿಕೆಯಲ್ಲಿ ಬಳಕೆಯಾಗುತ್ತಾರೆ. ಕಳ್ಳಸಾಗಣೆ, ನಾಪತ್ತೆ, ಅಪಹರಣ ಇತ್ಯಾದಿ ಪ್ರಕರಣಗಳಲ್ಲಿ ಹೆಚ್ಚಿನವರನ್ನು ರಕ್ಷಿಸಲಾಗುತ್ತದೆಯಾದರೂ ಇನ್ನು ಬಹುಸಂಖ್ಯೆಯಲ್ಲಿ ಹುಡುಗಿಯರು ಪತ್ತೆಯಾಗದೇ ಉಳಿದುಬಿಡುತ್ತಾರೆ

CRY (ಮಕ್ಕಳ ಹಕ್ಕುಗಳು ಮತ್ತು ನೀವು) ಎಂಬ ಎನ್‍ಜಿಓ ಪ್ರಕಾರ ಹೆಚ್ಚುತ್ತಿರುವ ಹುಡುಗಿಯರ ನಾಪತ್ತೆ, ಅಪಹರಣ, ಕಳ್ಳಸಾಗಾಣಿಕೆಗಳು ಭಾರತದ ನೈತಿಕತೆ, ಆತ್ಮ ಸಾಕ್ಷಿಯನ್ನು ಕುಂದಿಸುತ್ತವೆ. ಟ್ಯೂಷನ್ ಹೋಗುವಾಗ, ಶಾಲೆಗಳಿಗೆ ಹೋದಾಗ, ಅಥವಾ ಮನೆಯಿಂದ ಏಕಾಂಗಿಯಾಗಿ ಹೊರಹೋದ ಸಂದರ್ಭಗಲ್ಲಿ ಈ ಅಪಹರಣಗಳು ಸಾಮಾನ್ಯವಾಗಿ ನಡೆಯುತ್ತವೆ ಎಂದು ವರದಿ ಮಾಡಿದೆ.

ಈ ವಿಚಾರದಲ್ಲಿ ಕರ್ನಾಟಕ ಹಿಂದೆ ಬಿದ್ದಿಲ್ಲ. ಪತ್ರಿಕೆಗಳಲ್ಲಿ ಕಳೆದ ತಿಂಗಳಲ್ಲಿ ಬಂದ ವರದಿಯೊಂದು ಮಕ್ಕಳ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಉಲ್ಲೇಖಿಸಿದೆ. ಹಲವು ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾಗಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಒಂದರಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳ ಸಂಖ್ಯೆ ಸುಮಾರು 13,552 ರಷ್ಟು. ಮತ್ತು ಅದರಲ್ಲೂ ಈ ನಾಪತ್ತೆಯಾದವರಲ್ಲಿ ಹುಡುಗಿಯರ ಸಂಖ್ಯೆಯೇ ಹೆಚ್ಚು ಎಂದು ಉಲ್ಲೇಖಿಸಿದೆ. ಒಟ್ಟು 9,789 ಹುಡುಗಿಯರಿದ್ದರೆ ಹುಡುಗರು 3,753 ರಷ್ಟಿದ್ದಾರೆ. ಅಂದರೆ ಹುಡುಗರ ಸಂಖ್ಯೆಗಿಂತ ಹುಡುಗಿಯರ ಸಂಖ್ಯೆ  ಸುಮಾರು ಮೂರು ಪಟ್ಟು ಅಧಿಕವಿದೆ. 2025ರ ಪೂರ್ವಾರ್ಧದೊಳಗೆ ಸುಮಾರು 1,318 ಪ್ರಕರಣಗಳು ದಾಖಲಾಗಿವೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಕಂಡುಬಂದಿದೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ. 2020ರಿಂದ 2024ರವರೆಗೆ ರಾಜ್ಯಾದ್ಯಂತ 12,790 ಮಕ್ಕಳು ಕಾಣೆಯಾಗಿದ್ದಾರೆ. ಅದರಲ್ಲಿ 1,334 ಮಕ್ಕಳು ಪತ್ತೆಯಾದ ಮಾಹಿತಿಗಳಿಲ್ಲ. ಕಾಣೆಯಾಗುವ ಮಕ್ಕಳಲ್ಲಿ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ಸುತ್ತಮುತ್ತಲೂ ದೊಡ್ಡ ಮಧ್ಯಮ ಪಟ್ಟಣ ಪ್ರದೇಶಗಳಲ್ಲಿ ಈ ನಾಪತ್ತೆ ಪ್ರಕರಣಗಳು ಹೆಚ್ಚಿವೆ. ಬೆಂಗಳೂರಿನೊಂದಿಗೆ ತುಮಕೂರು, ಮಂಡ್ಯ, ಹಾಸನ, ಚಿತ್ರದುರ್ಗ, ಮೈಸೂರು, ದಾವಣಗೆರೆ ಮುಂತಾದ ಕಡೆಗಳಲ್ಲಿ ಹೆಚ್ಚಿದೆ.

ಈ ಹುಡುಗಿಯರ ನಾಪತ್ತೆ ಹೇಗೆ ಏಕೆ ಆಗುತ್ತಿದೆ?. ಲಕ್ನೋದ ಸಿಬಿಐ ಮುಖ್ಯಸ್ಥರೊಬ್ಬರು ಇದಕ್ಕೆ ಹಲವು ಕಾರಣಗಳನ್ನು ಪಟ್ಟಿ ಮಾಡುತ್ತಾರೆ. ಬಹಳ ಮುಖ್ಯವಾಗಿ ಮಾನವ ಕಳ್ಳಸಾಗಣೆ ಎಂಬುದು ಭಾರತದಲ್ಲಿ ದಕ್ಷಿಣ ಆಫ್ರಿಕಾದಂತೆ ಅವ್ಯಾಹತವಾಗಿ ನಡೆಯುವ ದಂಧೆ. ದೇಹದ ಭಾಗಗಳ ಕಳ್ಳಸಾಗಾಣಿಕೆ ಕೂಡ ಇದರಲ್ಲಿ ಒಂದು. ಅಂಗಾಂಗ ಕಸಿಗೆ ಬೇಕಾದ ಆರೋಗ್ಯಪೂರ್ಣ ಅಂಗಾಂಗಗಳು ಭಾರತದಲ್ಲಿನ ಹಳ್ಳಿಯ ಮುಗ್ಧ ಹೆಣ್ಣು ಮಕ್ಕಳಿಂದ ಪಡೆಯುವುದು ಸುಲಭ. ಈ ಮುಗ್ಧರು  ಮಧ್ಯಪಾನ, ಸಿಗರೇಟು, ಗಾಂಜಾ, ಆಫೀಮು ಸೇವನೆ ಇತ್ಯಾದಿ ಚಟಗಳ ಹೊಂದಿರುವುದಿಲ್ಲ. ಕಲುಷಿತಗೊಳ್ಳದ ಅವರ ಅಂಗಾಂಗಗಳು ಬಹು ಬೇಡಿಕೆಯುಳ್ಳವು. ಇಂತಹ ಮುಗ್ಧೆಯರು ಪ್ರೇಮದ ಬಲೆಯಲ್ಲಿ ಸುಲಭದಲ್ಲಿ ಬೀಳುತ್ತಾರೆ. ಇವರನ್ನು ಪ್ರೀತಿಯ ಹೆಸರಿನಲ್ಲಿ ವಂಚಿಸುವ ಸುಂದರ ಯುವಕರ, ಹುಡುಗರ ಜಾಲಗಳು ಇರುತ್ತವೆ ಎಂದು ಸಿಬಿಐ ಮುಖ್ಯಸ್ಥರು ಅಭಿಪ್ರಾಯಿಸುತ್ತಾರೆ. ಉತ್ತರ ಪ್ರದೇಶ, ದೆಹಲಿ, ಮುಂಬೈ ಮುಂತಾದ ಸ್ಥಳಗಳಲ್ಲಿಯೇ ಈ ನಾಪತ್ತೆ ಪ್ರಕರಣಗಳು ಹೆಚ್ಚು ಎಂದು ಮುಖ್ಯಸ್ಥರು ಅಭಿಪ್ರಾಯಿಸುತ್ತಾರೆ.. ಇಂತಹ ಬಹುತೇಕ ಹುಡುಗಿಯರು ಕಳ್ಳ ಸಾಗಣೆಯಲ್ಲಿ ಕೊಲೆಯಾಗುತ್ತಾರೆ, ಅಂಗಾಗ ತೆಗೆದರೂ, ಸದೃಢ ಶರೀರಿಗಳಾದವರನ್ನು  ಅನೈತಿಕ ಚಟುವಟಿಕೆಗಳಿಗೆ, ವೇಶ್ಯಾವಾಟಿಕೆಗಳಿಗೆ ಬಳಕೆಯಾಗುತ್ತಾರೆ. 

ಹೆಣ್ಣು ಮಕ್ಕಳ ಅಪಹರಣಗಳಿಗೆ ಇಂತದ್ದೆ ನಿರ್ದಿಷ್ಟ ಕಾರಣಗಳ ಎನ್ನಲಾಗುವುದಿಲ್ಲ. ಈ ಕಾರಣಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವೂ ಆಗಿರುತ್ತವೆ. ಬಹುಮುಖ್ಯವಾಗಿ ಮಾನವ ಕಳ್ಳ ಸಾಗಣೆಗೆ, ಬಾಲಕಾರ್ಮಿಕರಾಗಿ ದುಡಿಯಲು, ವೇಶ್ಯಾವಾಟಿಕೆಗಳಿಗೆ ಮಾರಲು, ಅಂಗಾಂಗ ಕಸಿಗೆ ಹೀಗೆ ಹಲವು ಕಾರಣಗಳಿವೆ. ಹೆಣ್ಣು ಮಕ್ಕಳು ವಿವಿಧ ರೀತಿಯಲ್ಲಿ ಪ್ರಲೋಭನೆಗೆ ಒಳಗಾಗುತ್ತಾರೆ. ಇಂದಿನ ರೋಚಕ ಜಗತ್ತಿನ ಕನಸು ಕಾಣುವ ಎಳೆಯ ಹುಡುಗಿಯರು ಮನೆಯಲ್ಲಿನ ತೀರ ಬಡತನದ ಕಾರಣ ಆ ಕನಸುಗಳ ಎದೆಯೊಳಗೆ ಇಟ್ಟುಕೊಂಡು ಕನಸು ಕಾಣುತ್ತಾರೆ. ಇಂತಹ ಮುಗ್ಧ ಹುಡುಗಿಯರು ಈ ಟ್ರಾಫಿಕರ್ಸ್‌ಗಳ ಮೊದಲ ಗುರಿ. ಹುಡುಗಿಯರು ಕೂಡಾ ನಕಲಿ ಪ್ರೇಮವನ್ನು ಸತ್ಯವೆಂದು ನಂಬಿ ಬರುವುದು, ಮನೆಯಲ್ಲಿ ಶೈಕ್ಷಣಿಕ ಒತ್ತಡ, ಮಕ್ಕಳ ಭಾವಲೋಕಕ್ಕೆ ಆಗುವ ಪೆಟ್ಟು, ಇತ್ಯಾದಿ ಕಾರಣಗಳು ಹುಡುಗಿಯರು ಮನೆ ಬಿಟ್ಟು ಬರುವುದಕ್ಕೆ ಅಪಹರಣಕ್ಕೆ ಒಳಗಾಗುವುದಕ್ಕೆ ಬಲವಾದ ಕಾರಣಗಳು ಎನ್ನಬಹುದು. ಇಂತಹ ಮುಗ್ಧರನ್ನೆ ಕಾದು ಬಲಿ ಹಾಕುವ ಪೀಡಕರ ಗುಂಪುಗಳಿಗೆ ಹೆಣ್ಣು ಮಕ್ಕಳು  ಸಿಕ್ಕಿಬಿಟ್ಟರೆ ಪುನಃ ಬದುಕಿಗೆ ಮರಳುವುದು ಅಸಾಧ್ಯವಾಗಿರುತ್ತದೆ.

ಹೆಣ್ಣು ದೇಹದ ಪರಿಕಲ್ಪನೆಗೆ ಸುಂದರವಾದ ವ್ಯಾಖ್ಯಾನಗಳು ಹೆಚ್ಚುತ್ತಾ, ಸ್ತ್ರೀ ದೇಹದ ಮೇಲಿನ ಅತ್ಯಾಚಾರವೂ ವ್ಯಾಪಕವಾಗಿ ನಡೆಯುತ್ತಿದೆ. ಭಾರತದಂತಹ ದೇಶಗಳಲ್ಲಿ ಸ್ತ್ರೀ ವ್ಯಭಿಚಾರವನ್ನು ತನ್ನ ದುಡಿಮೆಯಾಗಿ ಸ್ವತಃ ಆಯ್ದುಕೊಳ್ಳುವುದು ಅಪರೂಪ. ಇಲ್ಲಿನ ನಾರಿಯರು ಗಂಡ, ಮನೆ, ಮಕ್ಕಳು ತನ್ನದೊಂದು ಉದ್ಯೋಗ ಇಂತಹ ಸುಂದರ ಬದುಕಿನ ಆಕಾಂಕ್ಷೆಯುಳ್ಳವರು. ಆದರೆ ವಿಪರ್ಯಾಸವೆಂದರೆ ಹೆಣ್ಣನ್ನು ಬಲವಂತವಾಗಿ, ಇಲ್ಲ ಪ್ರೀತಿಯ ಹೆಸರಿನಲ್ಲಿ, ಕಕ್ಕುಲಾತಿಯ ಹೆಸರಿನಲ್ಲಿ ನಿತ್ಯ ಶೋಷಣೆಗೆ ದೂಡುತ್ತಲೇ ಇದೆ ಜಗತ್ತು. ಹೆಣ್ಣಿನ ಅಪಹರಣ, ಮಾರಾಟ, ಕೊಲೆ, ದೌರ್ಜನ್ಯ ಇತ್ಯಾದಿಗಳು ವಿದ್ಯಾವಂತ ಜಗತ್ತಿನಲ್ಲಿಯೇ ಹೇರಳವಾಗಿವೆ. ಇದಕ್ಕೆ ಪರಿಹಾರವಿದೆಯೇ? ಇದನ್ನು ಮಟ್ಟಹಾಕಲಾಗುತ್ತಿಲ್ಲವೇಕೆ? ಇಂದಿನ ಪ್ರಜ್ಞಾವಂತ ಜಗತ್ತು ಪ್ರಶ್ನಿಸಿಕೊಳ್ಳಲೇಬೇಕಾದ ಇಂತಹ ನೂರಾರು ಪ್ರಶ್ನೆಗಳಿವೆ.

ನಾಗರೇಖಾ ಗಾಂವಕರ

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು ಬರಹಗಾರರೂ ಅನುವಾದಕರೂ ಮತ್ತು ಅಂಕಣಕಾರರೂ ಆಗಿದ್ದಾರೆ.

ಇದನ್ನೂ ಓದಿ- http://“ಋತು ಚಕ್ರ ನೀತಿ – 2025” ನಿಜಕ್ಕೂ ಶ್ಲಾಘನೀಯ https://kannadaplanet.com/menstrual-leave-policy-2025-is-commendable/

More articles

Latest article