ಖಾಸಗಿ ಶಾಲೆಗಳಲ್ಲೂ ನಾಡಗೀತೆ ಹಾಡುವಿಕೆಯನ್ನು ಕಡ್ಡಾಯಗೊಳಿಸಲು ಬಿಳಿಮಲೆ ಆಗ್ರಹ

Most read

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ “ ಜಯ ಭಾರತ ಜನನಿಯ ತನುಜಾತೆʼ ಶೀರ್ಷಿಕೆಯ ನಾಡಗೀತೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಿ 20 ವರ್ಷಗಳೇ ಸಂದಿದ್ದರೂ ಈ ಆದೇಶದ ಸಮರ್ಪಕ ಅನುಷ್ಠಾನಕ್ಕೆ ಕ್ರಮ  ಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಪಡಿಸಿದ್ದಾರೆ.

ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, 2004ರಲ್ಲಿ ಸರ್ಕಾರವು ಕುವೆಂಪು ಅವರ ಕವನವನ್ನು ನಾಡಗೀತೆಯಾಗಿ ಘೋಷಿಸಿ ಮಾರ್ಗಸೂಚಿಗಳನ್ನು ನಿಗದಿಪಡಿಸಿತ್ತು. ರಾಷ್ಟ್ರೀಯ ಏಕತೆಯನ್ನು ಅತ್ಯಂತ ಸುಂದರವಾಗಿ ಅಭಿವ್ಯಕ್ತಿಸಿರುವ ಈ ನಾಡಗೀತೆ ಇಂದಿಗೂ ನಮ್ಮ ಉಸಿರಾಗದಿರುವುದು ನಮ್ಮ ವ್ಯವಸ್ಥೆಯ ಸೋಲು ಎನ್ನದೆ ವಿಧಿಯಿಲ್ಲ ಎಂದಿದ್ದಾರೆ.

ವಿಶೇಷವಾಗಿ ಖಾಸಗಿ ಶಾಲೆಗಳು ನಾಡಗೀತೆಗೆ ಯಾವುದೇ ಮಾನ್ಯತೆಯನ್ನು ನೀಡದೆ ಅನಿಯಂತ್ರಿತ ಆಡಳಿತವನ್ನು ನಡೆಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಬೇಕಿದೆ ಎಂದಿರುವ ಬಿಳಿಮಲೆ, ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಾಗಿ ಹಾಡುವ ಸ್ವನಿಯಂತ್ರಿತ ವ್ಯವಸ್ಥೆಯನ್ನು ರೂಪಿಸುವಲ್ಲಿ ತಾವು ಕ್ರಮಕ್ಕೆ ಮುಂದಾಗಬೇಕೆಂದು ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.

More articles

Latest article