ಬೆಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆಯಾಗಿ 13 ವರ್ಷಗಳು ಸಂದ ಹಿನ್ನಲೆಯಲ್ಲಿ ಇಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ರಾಜ್ಯಾದ್ಯಂತ ‘ನ್ಯಾಯಕ್ಕಾಗಿ ಜನಾಗ್ರಹ ದಿನ’ ಎಂಬ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಂಗಳೂರಿನ 6 ಕಡೆ ಸೇರಿದಂರೆ ರಾಜ್ಯದ 60 ಸ್ಥಳಗಳಲ್ಲಿ ಪ್ರತಿಭಟನೆ ನಡೆಯಲಿದೆ. ವೇದಿಕೆಯ ಜತೆ ಹಲವಾರು ಜನಪರ ಸಂಘಟನೆಗಳು ಕೈಜೋಡಿಸಿವೆ.
ಇಂದು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸೌಜನ್ಯ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ಸಾರ್ವಜನಿಕ ಸಭೆ ನಡೆಯಲಿದೆ. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ.
ಹಕ್ಕೊತ್ತಾಯಗಳು:
1. ಸೌಜನ್ಯ ಅವರ ಕೊಲೆ ಪಾತಕರನ್ನು ಪತ್ತೆ ಹಚ್ಚಿ ಬಂಧಿಸಬೇಕು.
2. ವೇದವಲ್ಲಿ, ಪದ್ಮಲತಾ, ಯಮುನಾ, ಮಾವುತ ನಾರಾಯಣ ಕೊಲೆ ಪ್ರಕರಣಗಳ ಮರು ತನಿಖೆ ನಡೆಸಿ ನ್ಯಾಯ ಒದಗಿಸಬೇಕು.
3. ಧರ್ಮಸ್ಥಳದ ಅಸಹಜ ಸಾವುಗಳನ್ನು ಕುರಿತು ನ್ಯಾಯಯುತವಾಗಿ SIT ತನಿಖೆ ನಡೆಸಬೇಕು.
4. ಧರ್ಮಸ್ಥಳ ಭೂಹಗರಣ, ಮೈಕ್ರೊ ಫೈನಾನ್ಸ್ ಅಕ್ರಮಗಳನ್ನೂ ಕುರಿತು ಸಮಗ್ರ ತನಿಖೆ ನಡೆಸಬೇಕು.
5. ಪ್ರಸ್ತುತ ನಡೆಯುತ್ತಿರುವ ಎಸ್ಐಟಿ ವಿರುದ್ಧ ಷಡ್ಯಂತ್ರ ನಿಲ್ಲಬೇಕು.
6. ನೂರಾರು ಅಸಹಜ ಸಾವು-ಕೊಲೆ ನಡೆದ ಪ್ರದೇಶದ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಬೇಕು
7. ದೂರುದಾರರು, ಸಾಕ್ಷಿದಾರರು ಮತ್ತು ಹೋರಾಟಗಾರರ ಮೇಲಿನ ಪೊಲೀಸ್ ದೌರ್ಜನ್ಯ ನಿಲ್ಲಿಸಬೇಕು
8. ಸೌಜನ್ಯ ಅತ್ಯಾಚಾರದ ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳನ್ನು ವಿಚಾರಣೆ ನಡೆಸಬೇಕು.
9. ಫೊರೆನ್ಸಿಕ್ ಸಾಕ್ಷ್ಯಗಳನ್ನು ರಕ್ಷಿಸದೆ ಪಿತೂರಿ ಮಾಡಿದ ವೈದ್ಯರು, ಪೊಲೀಸರನ್ನು ಶಿಕ್ಷೆಗೆ ಗುರಿಪಡಿಸಬೇಕು.
10. ಅತ್ಯಾಚಾರ-ಕೊಲೆ ಪ್ರಕರಣಗಳ ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸದೇ ಪ್ರಭಾವಿಗಳನ್ನು ರಕ್ಷಿಸಿದ ಪೊಲೀಸರನ್ನು ಬಂಧಿಸಬೇಕು.