ರಾಮನಗರ: ನಿಯಮ ಉಲ್ಲಂಘನೆ ಮೇರೆಗೆ ಬಂದ್ ಆಗಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್ ಆಡಳಿತ ಮಂಡಳಿ ಮುಖ್ಯಸ್ಥರು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಷರತ್ತುಬದ್ದ ಅನುಮತಿ ನೀಡುವಂತೆ ಮನವಿ ಮಾಡಿಕೊಂಡರು. ಜಾಲಿವುಡ್ ಸ್ಟುಡಿಯೋಸ್ ನಲ್ಲಿ ನಟ ಸುದೀಪ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಚಿತ್ರೀಕರಣವಾಗುತ್ತಿದೆ.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಿದ ಮುಖ್ಯಸ್ಥರು ತಮ್ಮ ತಪ್ಪು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡುವಂತೆ ಕೋರಿದರು. ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ರಿಯಾಲಿಟಿ ಷೋ ಬಿಗ್ ಬಾಸ್ ಚಿತ್ರೀಕರಣವಾಗುತ್ತಿದೆ. ಸ್ಟುಡಿಯೊಗೆ ಬೀಗ ಹಾಕಿರುವುದರಿಂದ, ಕಾರ್ಮಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಷರತ್ತುಬದ್ದ ಅನುಮತಿ ನೀಡುವಂತೆ ಮನವಿ ಮಾಡಿದರು.
ಇವರ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ಪಾಲಿಸಿದ್ದೇವೆ. ಆದ್ದರಿಂದ ಮಂಡಳಿಗೆ ನೀವು ಮನವಿ ಮಾಡಿಕೊಳ್ಳಬಹುದು. ಮಂಡಳಿ ನೀಡುವ ಆದೇಶದಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.