ಹಾಸನ: ರಾಜ್ಯದಲ್ಲೂ ಎರಡು ಕಾಫ್ ಸಿರಪ್ ಮಾದರಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂದು ಇಂದು ಸಂಜೆಯ ವೇಳೆಗೆ ಇಲಾಖೆಯು ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದರು.
ಈಗಾಗಲೇ ಕೆಮ್ಮಿನ ಸಿರಫ್ ತಯಾರಿಸುವ ಬೇರೆ ಬೇರೆ ಕಂಪನಿಗಳ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ವರದಿ ಬರಲಿದ್ದು, ರಾಜ್ಯದಲ್ಲಿ ಯಾವುದೇ ರೀತಿಯ ಅಸುರಕ್ಷಿತ ಔಷಧ ಮಾರುಕಟ್ಟೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ವಿಷಕಾರಿ ಅಂಶ ಪತ್ತೆಯಾದ ಕಾಫ್ ಸಿರಪ್ ಕರ್ನಾಟಕದಲ್ಲಿ ಸರಬರಾಜಾಗಿಲ್ಲ. ಆದರೆ ತಮಿಳುನಾಡು, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ ಹಾಗೂ ಒಡಿಶಾದಲ್ಲಿ ಬಳಕೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಸಿರಫ್ಗಳಲ್ಲಿ ಡೈ ಎಥಿಲಿನ್ ಕಾಲ್ ಎಂಬ ಹಾನಿಕರ ರಾಸಾಯನಿಕ ಅಂಶ ಬಳಕೆಯಾಗಿದೆ. ಈ ನಿಟ್ಟಿನಲ್ಲಿಆರೋಗ್ಯ ಇಲಾಖೆ ರಾಜ್ಯದಾದ್ಯಂತ ಮಾದರಿ ಸಂಗ್ರಹಣೆ ಮತ್ತು ಪರಿಶೀಲನೆ ಕಾರ್ಯವನ್ನು ಚುರುಕುಗೊಳಿಸಿದ್ದು, ಯಾವುದೇ ರೀತಿಯ ಅಸುರಕ್ಷಿತ ಔಷಧ ಪತ್ತೆಯಾದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಮಕ್ಕಳಿಗೆ ಕಾಫ್ ಸಿರಪ್ ನೀಡುವಾಗ ಪೋಷಕರು ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಸಿರಪ್ ನೀಡುವ ಮೊದಲು ವೈದ್ಯರ ಸಲಹೆ ಪಡೆಯಬೇಕು ಎಂದು ಮನವಿ ಮಾಡಿಕೊಂಡರು.