ಸಂಶೋಧನೆ, ಸಂರಕ್ಷಣೆ ಬೇಕೆ ಬೇಕು ಆದರೆ ಆ ಹೆಸರಿನಲ್ಲಿ ‘ಭಕ್ಷಣೆ’ ಬೇಡವೆ ಬೇಡ…

Most read

ನಾನು ಸ್ಪಷ್ಟವಾಗಿ ವಿರೋಧಿಸುವುದು ಸಂಶೋಧನೆ ಹೆಸರಿನಲ್ಲಿ ‘KCRE(Kalinga Centre for Rainforest Ecology) ಸಂಸ್ಥೆ’ ಹಾಗೂ ಅಲ್ಲಿನ ಸಂಶೋಧಕ ‘ಗೌರಿಶಂಕರ್’ ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತವಾಗಿ ‘ಕಾಳಿಂಗ ಮನೆ’ ಹೆಸರಿನಲ್ಲಿ ರೆಸಾರ್ಟ್ ನಡೆಸುತ್ತಿರುವುದು, ಕಾಳಿಂಗದ ಮೊಟ್ಟೆಗಳನ್ನು ಕೃತಕವಾಗಿ ಮರಿ ಮಾಡಿ ಕಾಡಿಗೆ ಬಿಟ್ಟಿರುವುದು, ಕಾಳಿಂಗ ಸರ್ಪಗಳ ಸಾಮೂಹಿಕ ಫೋಟೋಶೂಟ್ ನಡೆಸಿರುವುದು ಇತ್ಯಾದಿ ಪರಿಸರ ವಿರೋಧಿ ಚಟುವಟಿಕೆಗಳನ್ನು – ನಾಗರಾಜ ಕೂವೆ, ಪರಿಸರ ಹೋರಾಟಗಾರರು.

ಆಗುಂಬೆಯಲ್ಲಿ ಕೆಲವರು ‘ಸಂಶೋಧನೆ’ ಹೆಸರಿನಲ್ಲಿ ತಾವು ಮಾಡಿರುವ ಹಲವಾರು ಕಾನೂನು ಬಾಹಿರ ಚಟುವಟಿಕೆಗಳನ್ನು ಮುಚ್ಚಿಹಾಕಲು ‘ನಾಗರಾಜ ಕೂವೆಯಿಂದ ಸಂಶೋಧನೆಗೆ ವಿರೋಧ, ಸಂರಕ್ಷಣೆಗೆ ವಿರೋಧ, ಅಧ್ಯಯನಕ್ಕೆ ವಿರೋಧ, ವನ್ಯಜೀವಿ ಛಾಯಾಗ್ರಾಹಣಕ್ಕೆ ವಿರೋಧ, ಶೈಕ್ಷಣಿಕ ಚಟುವಟಿಕೆಗಳಿಗೆ ವಿರೋಧ, ಜಾಗೃತಿ ಕಾರ್ಯಕ್ರಮಗಳಿಗೆ ವಿರೋಧ… ” ಅದು-ಇದು ಎಂದೆಲ್ಲಾ ಕಥೆ ಕಟ್ಟುತ್ತಿದ್ದಾರೆ. ಕಾಳಿಂಗ ಶೋಷಕರು ತಮ್ಮನ್ನು ರಕ್ಷಿಸಿಕೊಳ್ಳಲು ಅಕಾಡೆಮಿಕ್ ಮತ್ತು ಸಂರಕ್ಷಣಾವಾದಿಗಳ ವಲಯದಲ್ಲಿ ಸತ್ಯಕ್ಕೆ ದೂರವಾದ ವಿಷಯವನ್ನು ಹೆಣೆಯುತ್ತಿದ್ದಾರೆ. ಫೇಕ್ ಐಡಿಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈಯಕ್ತಿಕ ದಾಳಿ ನಡೆಸುವುದು, ಕರೆ ಮಾಡಿ ಬೆದರಿಸುವುದು, ತಮ್ಮ ಶಿಷ್ಯಂದಿರಿಂದ ಅಸಂಬದ್ಧ ಮೆಸೇಜ್ ಮಾಡಿಸುವುದು, ವಿಜ್ಞಾನ ಗೊತ್ತಿಲ್ಲ ಎನ್ನುವುದು, ವಿಷಯದ ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆಲ್ಲಾ ಹೆದರುವ ಪ್ರಶ್ನೆಯೇ ಇಲ್ಲ. ಆಗುಂಬೆಯ ಕಾಳಿಂಗ ದಂಧೆಯ ವಿಷಯದಲ್ಲಿ ವಸ್ತುನಿಷ್ಠವಾಗಿ ನನ್ನ ಧ್ವನಿ ಮುಂದುವರೆಯಲಿದೆ.

ನಾನು ವನ್ಯಜೀವಿ ಸಂಶೋಧನೆ, ಸಂರಕ್ಷಣೆಯನ್ನು ಏಕೆ ವಿರೋಧಿಸಲಿ? ಇವತ್ತು ವೈಜ್ಞಾನಿಕ ಸಂಶೋಧನೆಗಳು ಅತೀ ಅಗತ್ಯ. ಇಲ್ಲಿಯವರೆಗಿನ ಜೀವವಿಜ್ಞಾನದ ಸಂಶೋಧನೆಗಳು ನಮಗೆ ಈ ಭೂಮಿಯ ವಿವಿಧ ವಿಸ್ಮಯಗಳತ್ತ ಬೆಳಕು ಚೆಲ್ಲಿದೆ. ಹವಾಗುಣ ಬದಲಾವಣೆಯ ಈ ದಿನಗಳಲ್ಲಿ ನಮ್ಮ ಪರಿಸರವನ್ನ, ಕಾಡುಗಳನ್ನ, ವನ್ಯಜೀವಿಗಳನ್ನ ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಕುರಿತೇ ನಾನು ತಳಮಟ್ಟದಲ್ಲಿ ಯುವಜನರೊಂದಿಗೆ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವೆ. ಸಾಧ್ಯವಾದಷ್ಟು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವೆ. ಅದರ ಕಷ್ಟ-ನಷ್ಟಗಳು, ಏಳು-ಬೀಳುಗಳು ಸ್ವತಃ ಅನುಭವದ ವಸ್ತು. ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವವರು ಎದುರಿಸುವ ಸವಾಲುಗಳೂ ವಿಪರೀತ. ನಮ್ಮಂತವರದು ಬಾಯಲ್ಲಿ ಮಾತ್ರ ಸಂರಕ್ಷಣೆ ಅಲ್ಲ. ಜೀವನ ಶೈಲಿಯೇ ಪರಿಸರಕ್ಕೆ ಹತ್ತಿರವಾಗಿದೆ. ಹೀಗಿರುವಾಗ ನನ್ನದು ಸಂರಕ್ಷಣೆಗೆ, ಸಂಶೋಧನೆಗೆ ವಿರೋಧ ಎಂದು ಕೆಲವರು ಗಾಳಿಯಲ್ಲಿ ಗುಂಡು ಹಾರಿಸುವುದು ಬೇರೇನನ್ನೋ ಸೂಚಿಸುತ್ತಿದೆ.

ನಾನು ಸ್ಪಷ್ಟವಾಗಿ ವಿರೋಧಿಸುತ್ತಿರುವುದು ‘ಸಂರಕ್ಷಣೆಯ ಮುಖವಾಡದ ಭಕ್ಷಣೆ’ ಯಾದ ಇವುಗಳನ್ನು:

ಫೊಟೋ ಕೃಪೆ : ಗೂಗಲ್

ಸಂಶೋಧನೆ ಹೆಸರಿನಲ್ಲಿ ‘KCRE(Kalinga Centre for Rainforest Ecology) ಸಂಸ್ಥೆ’ ಹಾಗೂ ಅಲ್ಲಿನ ಸಂಶೋಧಕ ‘ಗೌರಿಶಂಕರ್’ ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತವಾಗಿ ‘ಕಾಳಿಂಗ ಮನೆ’ ಹೆಸರಿನಲ್ಲಿ ರೆಸಾರ್ಟ್ ನಡೆಸುತ್ತಿರುವುದು, ಕಾಳಿಂಗದ ಮೊಟ್ಟೆಗಳನ್ನು ಕೃತಕವಾಗಿ ಮರಿ ಮಾಡಿ ಕಾಡಿಗೆ ಬಿಟ್ಟಿರುವುದು, ಕಾಳಿಂಗ ಸರ್ಪಗಳ ಸಾಮೂಹಿಕ ಫೋಟೋಶೂಟ್ ನಡೆಸಿರುವುದು, ಶಿಬಿರ ತರಬೇತಿ ಹೆಸರಿನಲ್ಲಿ ಸಾವಿರಗಟ್ಟಲೆ ಹಣ ಪಡೆದು ಜನರನ್ನು ಗುಂಪು ಕಟ್ಟಿಕೊಂಡು ಹಗಲು-ರಾತ್ರಿ ಅನಧಿಕೃತ ಕಾಡು ಪ್ರವೇಶ ಮಾಡಿರುವುದು, 2017ರ ನಂತರ ಸಂಶೋಧನೆಗೆ ಅನುಮತಿ ಇಲ್ಲದಿದ್ದರೂ ಸಂಶೋಧನೆ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ಆಗುಂಬೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಧಿಕೃತವಾಗಿ ಕಾಳಿಂಗ ಸರ್ಪಗಳನ್ನು ಸೆರೆ ಹಿಡಿದು ಫೋಟೋ-ರೀಲ್ಸ್ ಮಾಡುವುದು,
ತಮ್ಮ ವ್ಯವಹಾರಕ್ಕಾಗಿ ಕಾಳಿಂಗ ಸರ್ಪಗಳನ್ನು, ಆಗುಂಬೆಯ ಕಾಡನ್ನು ಸರಕಾಗಿ ಬಳಸುತ್ತಿರುವುದು, ಕೃಷಿ ಭೂಮಿಯಲ್ಲಿ ಕಟ್ಟಡಗಳನ್ನು ಕಟ್ಟಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಾಣಿಜ್ಯಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು, ವನ್ಯಜೀವಿ ಛಾಯಾಗ್ರಾಹಕರನ್ನು ಆಹ್ವಾನಿಸಿ ಕಾಳಿಂಗ ಸರ್ಪ ಫೋಟೋ ಶೂಟ್ ಗೆ ಅವಕಾಶ ಮಾಡಿಕೊಟ್ಟಿರುವುದು, ಇಲ್ಲಿಗೆ ಬಂದ ಯಶ್ ಪಾಲ್ ರಾಥೋರ್ ಮೊದಲಾದ ಕೆಲವು ವನ್ಯಜೀವಿ ಛಾಯಾಗ್ರಾಹಕರು ಈ ಕಾಳಿಂಗದ ಫೋಟೋ , ವಿಡಿಯೋಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾವಿರಾರು ಡಾಲರ್ ಗಳಿಗೆ ವ್ಯಾಪಾರ ಮಾಡುತ್ತಿರುವುದು. ಇದೆಲ್ಲಾ ಯಾವ ಪರಿಯ ಸಂಶೋಧನೆ, ಸಂರಕ್ಷಣೆ ಸ್ವಾಮಿ?

ಇನ್ನು, ARRS(Agumbe Rain Forest Research Centre) ಕೃಷಿ ಭೂಮಿಯಲ್ಲಿ ಸಂಶೋಧನಾ ಕೇಂದ್ರದ ಹೆಸರಿನಲ್ಲಿ ಹಣ ಪಡೆದು ಜನರನ್ನು ಉಳಿಸುತ್ತಿರುವುದು, ಕಾಡು ಒತ್ತುವರಿ ಮಾಡಿರುವುದು, ಸಂರಕ್ಷಣೆಯ ಮುಖವಾಡದಲ್ಲಿ ವಾಣಿಜ್ಯಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು, ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ‘Leopard Cottage’ ಹೆಸರಿನಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಿರುವುದು, ಇಲ್ಲಿನ ಫೀಲ್ಡ್ ಮ್ಯಾನೇಜರ್ ‘ಅಜಯ್ ಗಿರಿ’ ಮತ್ತು ವನ್ಯಜೀವಿ ಛಾಯಾಗ್ರಾಹಕ ‘ಪ್ರದೀಪ್ ಹೆಗ್ಡೆ’ ಯಾವುದೇ ಅನುಮತಿ ಇಲ್ಲದೆ ಕಾಳಿಂಗ ಸರ್ಪಗಳನ್ನು ಸೆರೆ ಹಿಡಿಯುತ್ತಿರುವುದು, ಕಾಳಿಂಗ ಸರ್ಪಗಳ ಅಕ್ರಮ ಬಂಧನ ಮತ್ತು ಫೋಟೋ ಶೂಟ್ ಮಾಡಿರುವುದು, ಯಾವುದೇ ಅನುಮತಿಯಿಲ್ಲದೆ ಅಕ್ರಮ ಕಾಡು ಪ್ರವೇಶ ಮಾಡಿ ಚಿತ್ರೀಕರಣ ನಡೆಸುತ್ತಿರುವುದು, ವನ್ಯಜೀವಿಗಳ ಸಹಜ ಜೀವನಕ್ಕೆ ಅಡ್ಡಿ ಮಾಡಿ ತೆಗೆದ ಫೂಟೇಜ್ ಗಳನ್ನು ವಾಣಿಜ್ಯಿಕ ಉದ್ದೇಶಗಳಿಗೆ ಬಳಸುತ್ತಿರುವುದು, ಅಜಯ್ ಗಿರಿ ತಮ್ಮ ಪತ್ನಿ ಮೇಘನಾ ಹೆಸರಿನಲ್ಲಿ ಸೋಮೇಶ್ವರ ವನ್ಯಜೀವಿ ಧಾಮದಲ್ಲಿ 2.37 ಎಕರೆ ಜಮೀನನ್ನು ಅಕ್ರಮವಾಗಿ ಖರೀದಿಸಿರುವುದು…. ಇವೆಲ್ಲಕ್ಕೂ ಕಾಳಿಂಗ ಸರ್ಪ ಸಂಶೋಧನೆ, ಸಂರಕ್ಷಣೆಗೂ ಏನು ಸಂಬಂಧ ಸ್ವಾಮಿ?

ಸಂಶೋಧನೆ ಎಂದರೆ ವಸ್ತುನಿಷ್ಠವಾಗಿ ಸತ್ಯವನ್ನು ತಿಳಿಸಬೇಕು. ಅದನ್ನು ಬಿಟ್ಟು ದತ್ತಾಂಶಗಳನ್ನು ಮನಸ್ಸಿಗೆ ಬಂದಂತೆ ತಿರುಚಿ, ಇಲ್ಲದ ಕಥೆ ಕಟ್ಟಿ, ತಮ್ಮ ವ್ಯವಹಾರಕ್ಕೆ ಬೇಕಾದಂತೆ ಸುಳ್ಳು ಸಂಶೋಧನಾ ಪ್ರಬಂಧ ಬರೆಯುವುದಲ್ಲ. ತಮಗೆ ಸಂಶೋಧನೆಗೆ ಹಣ ಬರಬೇಕೆಂಬ ಕಾರಣಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ , ಸ್ಥಳೀಯ ಜನರು ಕಾಳಿಂಗ ಸಂರಕ್ಷಣೆಗೆ ಕಂಟಕವೆಂಬಂತೆ ಬಿಂಬಿಸಿ, ತಲತಲಾಂತರದಿಂದ ಕಾಳಿಂಗಗಳೊಂದಿಗೆ ಮಲೆನಾಡಿನ ಜನರು ಸಹಜೀವನವನ್ನು ನಡೆಸುತ್ತಿದ್ದರೂ, ತಾವೇ ‘ಮಾನವ- ಕಾಳಿಂಗ ಸರ್ಪ ಸಂಘರ್ಷ’ ಎಂಬ ಸಂಗತಿ ಹುಟ್ಟು ಹಾಕಿ, ಕಾಳಿಂಗ ರಕ್ಷಿಸುತ್ತೀವಿ, ಜಾಗೃತಿ ಮೂಡಿಸುತ್ತೀವಿ ಎಂದು ಪರಿಸರ ವಿರೋಧಿ ಕೆಲಸ ಮಾಡುತ್ತಿರುವುದು ವಿಜ್ಞಾನಕ್ಕೆ ಮತ್ತು ಸಂರಕ್ಷಣೆಗೆ ಮಾಡುತ್ತಿರುವ ಮಹಾ ಮೋಸ. ಕಾಳಿಂಗ ಸರ್ಪ ಸಂಶೋಧನೆ, ಸಂರಕ್ಷಣೆ ಇವತ್ತು ದಂಧೆ ಆಗಿರುವುದಕ್ಕೆ, ತಮ್ಮ ಧನಧಾಹಕ್ಕಾಗಿ ಕಾಳಿಂಗವನ್ನು ಶೋಷಿಸುವುದಕ್ಕೆ ನನ್ನದು ಸಂಪೂರ್ಣ ವಿರೋಧ.

ನಿಜವಾದ ಸಂಶೋಧಕರು ಕ್ಷೇತ್ರಕಾರ್ಯ ನಡೆಸುತ್ತಾ, ದತ್ತಾಂಶ ಸಂಗ್ರಹಿಸುತ್ತಾ, ಹೊಸ ಒಳನೋಟಗಳ ಪ್ರಬಂಧಗಳನ್ನು ಪ್ರಕಟಿಸುತ್ತಾ ಸಂರಕ್ಷಣೆಗೆ ಕೊಡುಗೆ ಕೊಡುತ್ತಿದ್ದಾರೆ. ಅವರಾರೂ ಕಾಡೊಳಗೆ ಅಧ್ಯಯನ ಮಾಡುವುದನ್ನು ಬಿಟ್ಟು ಮೋಜು-ಮಸ್ತಿ ಮಾಡುತ್ತಿಲ್ಲ. ಪರಿಸರ ಸಂರಕ್ಷಣೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡತಂಹ ಇಂತಹವರ ಬಗೆಗೆ ನನಗೆ ಅಪಾರ ಗೌರವವಿದೆ. ಇಂತಹ ಹಲವು ವ್ಯಕ್ತಿಗಳು ನಮ್ಮ ನಾಡಿನಲ್ಲಿದ್ದಾರೆ. ಕೆಲವು ಒಳ್ಳೆಯ ಸಂಸ್ಥೆಗಳಿವೆ. ಅವರು ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ಸಮಯದಲ್ಲೂ ಅಂತಹ ನೈಜ ಅಧ್ಯಯನಕಾರರ, ಸಂರಕ್ಷಕರ ಪರ ನಾನು. ಅದನ್ನು ಬಿಟ್ಟು, ಕಾಡನ್ನೇ ದಂಧೆಗೆ ಜಾಗ ಮಾಡಿಕೊಂಡು, ವನ್ಯಜೀವಿಗಳನ್ನು ಹಿಂಸಿಸುತ್ತಾ, ಪರಿಸರ ಕಾನೂನುಗಳನ್ನೆಲ್ಲಾ ಕಾಲ ಕಸ ಮಾಡಿಕೊಂಡು ತಿರುಗುತ್ತಿರುವ ‘ನಕಲಿ ಸಂಶೋಧಕ’ರನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಂತಹ ಪೋಕರಿಗಳು ನೈಜ ಸಂರಕ್ಷಣೆ ಮತ್ತು ಅಧ್ಯಯನಕ್ಕೆ ಮಹಾ ಕಂಟಕ. ಇಂತಹ ‘ನಕಲಿ ಸಂರಕ್ಷಕರ’ ಕಾನೂನು ಬಾಹಿರ ಕೆಲಸಗಳನ್ನು ಪ್ರಶ್ನಿಸುತ್ತಿದ್ದೇವೆ. ಸಾಧ್ಯವಾದಲ್ಲಿ ಅದನ್ನು ಮಾಡಿ. ಅದು ಬಿಟ್ಟು ಖ್ಯಾತೆ ತೆಗೆಯುತ್ತಿರುವುದು ಏಕೆ? ಏನೇ ಆಗಲಿ ಕಾಳಿಂಗದ ಪರವಾದ, ಪರಿಸರದ ಪರವಾದ, ಸತ್ಯದ ಪರವಾದ ಧ್ವನಿ ನಿಲ್ಲುವುದಿಲ್ಲ.

ನಾಗರಾಜ ಕೂವೆ

ಪರಿಸರ ಹೋರಾಟಗಾರರು

More articles

Latest article