ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಐದು ಪಂಚಗ್ಯಾರಂಟಿ ಯೋಜನೆಗಳು ಕೇವಲ ಜನಪರ ಯೋಜನೆಗಳಲ್ಲ, ಬದಲಿಗೆ ಇವು ‘ಸಾಮಾಜಿಕ ನ್ಯಾಯ’ವನ್ನು ಎತ್ತಿ ಹಿಡಿದು ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆಯನ್ನು ತಂದಿವೆ. ಆದರೆ, ಈಗ ಕಾಂಗ್ರೆಸ್ನ ಗ್ಯಾರಂಟಿಗಳನ್ನು ವಿರೋಧಿಸಲು ಬಿಜೆಪಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನೇ ಕಣಕ್ಕಿಳಿಸಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುರ್ಜೇವಾಲಾ, ಬಿಜೆಪಿ-ಜೆಡಿಎಸ್ ಮೈತ್ರಿಯ ದ್ವೇಷಕ್ಕೆ ಮಿತಿಯೇ ಇಲ್ಲ. ಜನರ ಬದುಕಿಗೆ ಬೆಳಕಾಗಿರುವ ಈ ಯೋಜನೆಗಳನ್ನು ವಿರೋಧಿಸಲು ದೇವೇಗೌಡರನ್ನೇ ಬಿಜೆಪಿ ಮುಂದೆ ಬಿಟ್ಟಿದೆ. ಇಂತಹ ‘ಕುರುಡು ದೃಷ್ಟಿಯುಳ್ಳ ಪಕ್ಷಗಳು’ ನಾಚಿಕೆಪಡಬೇಕು ಎಂದು ಖಂಡಿಸಿದ್ದಾರೆ.
ಈ ಯೋಜನೆಗಳ ಯಶಸ್ಸಿನ ಅಂಕಿ-ಅಂಶಗಳನ್ನು ನೀಡಿದ ಸುರ್ಜೇವಾಲಾ, ಗ್ಯಾರಂಟಿಗಳಿಂದ ಜನಸಾಮಾನ್ಯರ ಬದುಕಿನ ಮೇಲೆ ಆಗಿರುವ ಪರಿಣಾಮಗಳನ್ನು ವಿವರಿಸಿದ್ದಾರೆ.
ಶಕ್ತಿ ಯೋಜನೆ: ಮಹಿಳೆಯರು ಈಗಾಗಲೇ 526 ಕೋಟಿಗೂ ಹೆಚ್ಚು ಬಾರಿ ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರ ಅ.1ರವರೆಗೆ 14,274.32 ಕೋಟಿ ರೂ. ವ್ಯಯಿಸಿದೆ. ಬಹುಮುಖ್ಯವಾಗಿ ಶಕ್ತಿ ಯೋಜನೆ ಪ್ರತಿಷ್ಠಿತ Golden Book of World Records ನಲ್ಲಿ ದಾಖಲಾಗಿರುವುದು ಮಹಿಳೆಯರ ಓಡಾಟ, ಸ್ವಾತಂತ್ರ್ಯ ಮತ್ತು ದುಡಿಯುವ ಸಾಮರ್ಥ್ಯವನ್ನು ಹೆಚ್ಚಿಸಿ ‘ಹೊಸ ವಿಶ್ವ ದಾಖಲೆ’ ಸೃಷ್ಟಿಸಿದೆ.
ಗೃಹ ಲಕ್ಷ್ಮಿ: ರಾಜ್ಯದ 1.23 ಕೋಟಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹2,000 ವರ್ಗಾವಣೆಯಾಗುತ್ತಿದ್ದು, ಶೇ. 94ರಷ್ಟು ಕುಟುಂಬಗಳ ಆರ್ಥಿಕ ಮಟ್ಟ ಸುಧಾರಿಸಿದೆ. ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಇದುವರೆಗೆ 50,005 ಕೋಟಿ ರೂ. ಹಣ ವ್ಯಯಿಸಿದೆ.
ಗೃಹ ಜ್ಯೋತಿ: 1.64 ಕೋಟಿ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿದ್ದರಿಂದ ಶೇ. 90ರಷ್ಟು ಕುಟುಂಬಗಳು ಹಣ ಉಳಿಸಿ, ಅದನ್ನು ‘ಮನೆಯ ಇತರ ಅಗತ್ಯಗಳಿಗೆ’ ಬಳಸುತ್ತಿವೆ. ಈ ಯೋಜನೆಗಾಗಿ 18,139 ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ವ್ಯಯಿಸಿದೆ.
ಅನ್ನ ಭಾಗ್ಯ: ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮತ್ತು ಅನ್ನ ಭಾಗ್ಯ (4.49 ಕೋಟಿ ಕನ್ನಡಿಗರಿಗೆ 10 ಕೆಜಿ ಅಕ್ಕಿ) ಯೋಜನೆಗಳು ಕುಟುಂಬದ ಉಳಿತಾಯವನ್ನು ಹೆಚ್ಚಿಸಿ ಆರ್ಥಿಕ ಸಮೃದ್ಧಿಗೆ ಬಲ ನೀಡಿವೆ.15000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ
ಯುವ ನಿಧಿ: ನಿರುದ್ಯೋಗಿ ಯುವಕರಿಗೆ ಮಾಸಿಕ ₹1,500-₹3,000 ಭತ್ಯೆ ನೀಡಿ ಸಬಲೀಕರಣ ಮಾಡಿದೆ. 2.55 ಲಕ್ಷ ಫಲಾನುಭವಿಗಳಿಗೆ 623 ಕೋಟಿ ರೂ. ಹಣವನ್ನು ಸರ್ಕಾರ ನೀಡಿದೆ. ಪಂಚಗ್ಯಾರಂಟಿ ಯೋಜನೆಗಳಿಗಾಗಿಯೇ ರಾಜ್ಯ ಸರ್ಕಾರ 97 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ವ್ಯಯಿಸುತ್ತಿರುವಾಗ ಆರ್ಥಿಕ ಪರಿಸ್ಥಿತಿ ಹೇಗೆ ಹದಗೆಟ್ಟಿದೆ?
ಕಾಂಗ್ರೆಸ್ನ ಸಾಮಾಜಿಕ ನ್ಯಾಯದ ಉದ್ದೇಶವನ್ನು ಹತ್ತಿಕ್ಕುವ ಮೂಲಕ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲು ಬಿಜೆಪಿ-ಜೆಡಿಎಸ್ ಬಯಸುತ್ತಿವೆ ಎಂಬುದು ಪ್ರತಿ ಕನ್ನಡಿಗನಿಗೂ ತಿಳಿದಿದೆ. ಆದರೆ ನಮ್ಮ ಸರ್ಕಾರ ಕರ್ನಾಟಕದ ಪ್ರತಿಯೊಬ್ಬ ನಾಗರಿಕರ ಪರವಾಗಿದ್ದು, ಇಂತಹ ದುಷ್ಟ ಯತ್ನವನ್ನು ತಡೆಯುತ್ತೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.