“ಮನೆಯಂಥಾ ಹಳ್ಳಿ, ವನದಂಥಾ ನಗರಿ”

Most read

ಪ್ರಸಾದ್‌ ನಾಯ್ಕ್

ಒಮ್ಮೊಮ್ಮೆ ನಮ್ಮ ಮಹಾನಗರಗಳನ್ನು ಕೂಡ ಈ ಪುಸ್ತಕವನ್ನು ಓದಿದಂತೆಯೇ ಯಾವುದೇ ಪೂರ್ವಾಗ್ರಹಗಳಿಲ್ಲದೆ ನೋಡುವುದು ಉತ್ತಮ ಅಂತೆಲ್ಲ ಅನಿಸುವುದುಂಟು. ಏಕೆಂದರೆ ನಾವು ಶಹರವೊಂದರಲ್ಲಿ ಒಳಗೊಳ್ಳುವ ಮತ್ತು ಶಹರವೊಂದು ನಮ್ಮನ್ನು ತನ್ನಲ್ಲಿ ಒಳಗೊಳ್ಳುವ ಪ್ರಕ್ರಿಯೆಯಿದೆಯಲ್ಲ, ಅದೊಂದು ಅಪ್ಪಟ ಆಂತರಿಕ ಪಯಣ – ಪ್ರಸಾದ್‌ ನಾಯ್ಕ್‌, ದೆಹಲಿ.

“ದಿಲ್ಲಿ ಅನ್ನೋದು ಕಾಫಿ ಟೇಬಲ್ ಸಿಟಿ ಅಲ್ಲ”, ಅಂತ ಅಲ್ಲಿ ಬರೆದಿತ್ತು.

ಮಹಾನಗರಗಳ ಬಗೆಗಿನ ಸಾಕಷ್ಟು ಬಗೆಯ ವ್ಯಾಖ್ಯಾನಗಳನ್ನು ಈಗಾಗಲೇ ಕೇಳಿದ್ದ ನನಗೆ ಇದನ್ನು ಓದಿದಾಗ ಮಾತ್ರ ಹೊಸತೆನಿಸಿತ್ತು. ಅಂದಹಾಗೆ ದಿಲ್ಲಿಯ ಬಗ್ಗೆ ಹೀಗೆ ಬರೆದಿದ್ದವರು ರವೀಶ್ ಕುಮಾರ್. “ಇಶ್ಕ್ ಮೇ ಶಹರ್ ಹೋನಾ” ಎಂಬ ಕಾವ್ಯಾತ್ಮಕ ಉಪಶೀರ್ಷಿಕೆಯನ್ನು ಹೊತ್ತಿದ್ದ ಪುಸ್ತಕವೊಂದನ್ನು ಕೈಗೆತ್ತಿಕೊಂಡಾಗ ಇದ್ಯಾವುದೋ ಹಿಂದಿ ಲೇಖಕರೊಬ್ಬರ ಅನುವಾದಿತ ಪುಸ್ತಕವಿರಬಹುದು ಎಂದು ಯೋಚಿಸಿ ಮರೆತಿದ್ದೂ ಆಗಿತ್ತು. ಮಹಾನಗರದಲ್ಲಿ ಒಲವಿರುವುದು ಒಂದು ಕಡೆಯಾದರೆ, ಒಲವಿನಲ್ಲಿ ಮಹಾನಗರವಿರುವುದು ಮತ್ತೊಂದು ಕಡೆ. ಸಾಮಾನ್ಯವಾಗಿ ಹಿಂದಿ ಭಾಷೆಯಲ್ಲಿ ಬರೆಯುವ ಲೇಖಕರು ಇಂಗ್ಲಿಷ್ ಭಾಷೆಯ ಓದುಗರಲ್ಲೂ ದೊಡ್ಡ ಮಟ್ಟಿನ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಬಹಳ ಕಮ್ಮಿ. ಭಾರತದ ಇತರ ಪ್ರಾದೇಶಿಕ ಭಾಷೆಗಳಂತೆ ಇದು ಹಿಂದಿಗೂ ತಪ್ಪಿದ್ದಲ್ಲ. ಹೀಗಾಗಿ ಇಶ್ಕ್, ಕಾವ್ಯ ಮತ್ತು ಮಹಾನಗರಗಳ ಕಾಂಬೋವುಳ್ಳ ಈ ಪ್ಯಾಕೇಜ್ ಹೊಸಬರ ಸಾಹಸದಂತೆಯೇ ನನಗಂದು ಮೇಲ್ನೋಟಕ್ಕೆ ಕಂಡಿತ್ತು.

ಅಂದಹಾಗೆ ಪುಸ್ತಕದ ಸಾಕಷ್ಟು ಪುಟಗಳನ್ನು ಓದಿದ ನಂತರವೇ ಈ ಪುಸ್ತಕದ ಲೇಖಕರು ಖ್ಯಾತ ಪತ್ರಕರ್ತರೂ, ಟಿ.ವಿ ನಿರೂಪಕರೂ ಆಗಿರುವ ರವೀಶ್ ಕುಮಾರ್ ಎಂಬ ಜ್ಞಾನೋದಯವಾಗಿದ್ದು. ದಿಟ್ಟ ಪತ್ರಕರ್ತರೆಂದು ದೇಶದೆಲ್ಲೆಡೆ ಹೆಸರು ಮಾಡಿರುವ ರವೀಶ್ ಕುಮಾರ್ ಸಾಮಾನ್ಯವಾಗಿ ಕಾವ್ಯದ ಜೊತೆಗೆ ತನ್ನನ್ನು ತಾನು ಅಷ್ಟಾಗಿ ಗುರುತಿಸಿಕೊಳ್ಳದ ಮತ್ತು ಪುಸ್ತಕದ ಮುಖಪುಟ / ಹಿಂಭಾಗದ ಪುಟದಲ್ಲೆಲ್ಲೂ ಅವರ ಚಿತ್ರವನ್ನು ಹಾಕಿರದಿದ್ದ ಕಾರಣದಿಂದಾಗಿ, ಕೃತಿಯ ಲೇಖಕರು ನಿತ್ಯ ಟಿವಿ ಪರದೆಯಲ್ಲಿ ಕಾಣುವ ರವೀಶ್ ಕುಮಾರರೇ ಎಂಬುದನ್ನು ಊಹಿಸುವ ಗೋಜಿಗೂ ನಾನು ಹೋಗಿರಲಿಲ್ಲ. ಹಾಗೆ ನೋಡಿದರೆ ರವೀಶ್ ರನ್ನು ಕವಿಯ ರೂಪದಲ್ಲಿ ನಾನು ಹೀಗೆ ಎದುರಾಗಿದ್ದೇ ಮೊದಲು. ಅದರಲ್ಲೂ ಈ ಪುಸ್ತಕದಲ್ಲಿ ಓದುಗರಿಗೆ ಕಾಣಸಿಗುವುದು ಅಪ್ಪಟ ಪ್ರೇಮಿಯಂತಿರುವ ರವೀಶ್ ಕುಮಾರ್. ಇನ್ನು ನೈಜ ಜೀವನದ ಪ್ರೇಮದಲ್ಲಿರುವ ಅವರ ಅನುಭೂತಿಗಳು ಅಕ್ಷರರೂಪದಲ್ಲಿ ದಿಲ್ಲಿಗೂ ಹರಿದುಬರುವುದು ಇಲ್ಲೊಂದು ಮಧುರ ಕಾಕತಾಳೀಯ.

ಇಶ್ಕ್ ಮೇ ಶಹರ್ ಹೋನಾ..

“ಹಳ್ಳಿಗಳಲ್ಲಿ ದಾರಿ ತಪ್ಪಿಹೋದರೂ ನಾವು ಮನೆ ಸೇರುತ್ತೇವೆ. ಆದರೆ ಮನೆಯೇ ಕಳೆದುಹೋಗುವುದು ಮಹಾನಗರಗಳಲ್ಲಿ ಮಾತ್ರ” ಎಂದು ಬೆರಗಿನಿಂದಲೇ ಅವರು ಒಂದೆಡೆ ಟಿಪ್ಪಣಿ ಬರೆಯುತ್ತಾರೆ. ಮಹಾನಗರಗಳಲ್ಲಿ ಸೂರನ್ನು ಅರಸುವುದು, ಆ ಸೂರನ್ನು ಮನೆಯಾಗಿಸುವುದು, ನಂತರ ಆ ನೆಲದಲ್ಲಿ ತನ್ನದೇ ಆದ ಸ್ವಂತ ಸೂರಿಗಾಗಿ ಹಂಬಲಿಸುವುದು… ಹೀಗೆ ಇಲ್ಲಿ ಮೊಳೆಯುವ ಹಂಬಲಗಳ ಬಗ್ಗೆ ಬರೆಯುತ್ತಾ ಹೋದರೆ ಸೂರಿನದ್ದೇ ಒಂದು ಸ್ವಗತವಾಗುತ್ತದೆ. ಅಸಲಿಗೆ ದೇಶದ ವಿವಿಧ ಭಾಗಗಳಿಂದ ಮಹಾನಗರಗಳತ್ತ ಸಾಗುವ ವಲಸಿಗರಿಗೆ ಸೂರೆಂದರೆ ಒಂದು ದೊಡ್ಡ ಐಡೆಂಟಿಟಿಯಿದ್ದಂತೆ. ವಿಶೇಷವಾಗಿ ನಮ್ಮ ದೇಶದಲ್ಲಂತೂ ಮನೆಯೆಂದರೆ ಅದೊಂದು ಕೇವಲ ರಿಯಲ್ ಎಸ್ಟೇಟ್ ಸಂಗತಿ ಮಾತ್ರವಲ್ಲ. ಅದೊಂದು ಎಮೋಷನ್ ಕೂಡ ಹೌದು. ಹೀಗಾಗಿ ಸೂರೆಂಬುದು ಮಹಾನಗರಗಳ ದೈತ್ಯ ಕ್ಯಾನ್ವಾಸಿನಲ್ಲಿ ಚಿಕ್ಕದೊಂದು ಬಿಂದುವಿನಂತೆ ಕಂಡರೂ ಅದು ಅಷ್ಟು ಸುಲಭವಾಗಿ ತಳ್ಳಿಹಾಕುವಂತಹ ಸಂಗತಿಯಲ್ಲ. ಭಾರತದಲ್ಲಿರುವ ಬಹುದೊಡ್ಡ ವರ್ಗವಾಗಿರುವ ಮಧ್ಯಮವರ್ಗದ ಪಾಲಿಗೆ ಅದು ಇಂದಿಗೂ ಬೊಗಸೆಯಲ್ಲಿರುವ ಅಮೃತ.

ಆದರೆ ಒಳಗೊಳ್ಳುವಿಕೆಯೆನ್ನುವುದು ಸಾಧ್ಯವಾಗುವುದು ತಕ್ಕಮಟ್ಟಿನ ಕೊಡುಕೊಳ್ಳುವಿಕೆಯಿದ್ದಾಗ ಮಾತ್ರ. ಅದಕ್ಕೆ ಒಂದಿಷ್ಟು ಶ್ರಮವನ್ನಾದರೂ ಖಂಡಿತ ಬೇಡುತ್ತದೆ. ಮಹಾನಗರಗಳಲ್ಲಿ ವಾಸವಾಗಿರುವ ಬಹುತೇಕ ಮಂದಿ ಸಾಕಷ್ಟು ವರ್ಷಗಳನ್ನು ಕಳೆದ ನಂತರವೂ ಪರಕೀಯ ಭಾವವನ್ನೇ ಅನುಭವಿಸುತ್ತಿರುವ ಬಗ್ಗೆ ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಎಲ್ಲಾ ವ್ಯವಸ್ಥಿತವಾಗಿರುವಂತೆ ಕಂಡರೂ ಬದುಕಿನಲ್ಲಿ ಬೇರೇನೋ ಮಿಸ್ ಹೊಡೆಯುತ್ತಿರುತ್ತದೆ. ತಮಿಳುನಾಡು ಮೂಲದ ನನ್ನ ಮಿತ್ರನೊಬ್ಬ ಬರೋಬ್ಬರಿ ಎರಡು ವರ್ಷಗಳ ಕಾಲ ದಿಲ್ಲಿಯಲ್ಲಿದ್ದರೂ ಒಂದಿಷ್ಟೂ ಹಿಂದಿ ಭಾಷೆಯನ್ನು ಕಲಿತಿರಲಿಲ್ಲ. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಕಲಿತಿದ್ದರೂ ಅದನ್ನು ಯಾವ ಮಾತ್ರಕ್ಕೂ ಬಳಸುತ್ತಿರಲಿಲ್ಲ. ಪರಿಸ್ಥಿತಿಗಳು ಹೀಗಿದ್ದರೂ ದಿನಗಳು ಹಾಗೆ ಬಂದು ಹೀಗೆ ಹೋಗಿದ್ದವು. ದಿಲ್ಲಿಯಲ್ಲಿ ಮಾಡಬೇಕಿದ್ದ ಕೆಲಸವು ಮುಗಿದು ಅವನು ಮುಂದೆ ಸಾಗಿಯಾಗಿತ್ತು. ಹೀಗಿರುವಾಗ ಆತ ಈ ಮಹಾನಗರವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೋ ಏನೋ ಎಂಬ ಪ್ರಶ್ನೆಯೇ ನಮಗಿಲ್ಲಿ ಬರುವುದಿಲ್ಲ. ಶಹರವು ನಮ್ಮನ್ನು ಒಪ್ಪಿಕೊಂಡಿದ್ದರೂ, ನಾವು ಶಹರವನ್ನು ಒಪ್ಪಿಕೊಳ್ಳದೆ ನಿರ್ಲಿಪ್ತರಾಗಿದ್ದುಬಿಡುವ ವಿಚಿತ್ರ ಸನ್ನಿವೇಶವಿದು.

ಮಹಾನಗರದ ಒಂದು ಝಲಕ್

ಹೀಗಾಗಿಯೇ ಶಹರದ ಬದುಕಿನೊಂದಿಗೆ ಹೊಸದಾಗಿ ಹೊಂದಿಕೊಳ್ಳುವ ಅನುಭವವನ್ನು ನಾನು ಸಾಮಾನ್ಯವಾಗಿ ಅರೇಂಜ್ಡ್ ಮ್ಯಾರೇಜಿನೊಂದಿಗೆ ಸಮೀಕರಿಸುತ್ತಿರುತ್ತೇನೆ. ಮಹಾನಗರಗಳಿಗೆ ಹೊಸದಾಗಿ ಬಂದವರಿಗೆ ಇದು ಅಸಾಧ್ಯವೇನಲ್ಲ. ಹಾಗಂತ ಹೇಳಿಕೊಳ್ಳುವಷ್ಟು ದೊಡ್ಡ ಸವಾಲೂ ಅಲ್ಲ. ಆರಂಭದ ದಿನಗಳಲ್ಲಿ ಒಂದಿಷ್ಟು ತಿಣುಕಾಟವಿದ್ದರೂ ಮುಂದಿನ ದಾರಿ ಸಲೀಸು. ಥೇಟು ಇಂಡಿಯನ್ ಅರೇಂಜ್ಡ್ ಮ್ಯಾರೇಜುಗಳ ರೀತಿ! ರಸ್ಕಿನ್ ಬಾಂಡ್ ಪ್ರತಿನಿತ್ಯ ಮೈಲುಗಟ್ಟಲೆ ನಡೆಯುತ್ತಾ ಹೀಗೆ ಹೊಸ ಜಾಗವನ್ನು ತನ್ನದಾಗಿಸಿಕೊಳ್ಳುತ್ತಿದ್ದರಂತೆ. ಕವಿ ಸಿದ್ಧಲಿಂಗಯ್ಯನವರು ದಿಲ್ಲಿಯ ಜನನಿಬಿಡ ಬೀದಿಗಳಲ್ಲಿ ಅಡ್ಡಾಡುತ್ತಾ ಶಹರದ ಆತ್ಮವನ್ನು ಮೌನವಾಗಿ ತನ್ನೊಳಗೆ ಇಳಿಸಿಕೊಳ್ಳುತ್ತಿದ್ದಿದ್ದು, ಖ್ಯಾತ ಬೆಲ್ಜಿಯನ್ ಯುವಚಿತ್ರಕಲಾವಿದೆಯೊಬ್ಬರು ದಿಲ್ಲಿಯ ತಮ್ಮ ಕಣ್ಣೋಟಗಳನ್ನು ವರ್ಣರಂಜಿತ ವ್ಯಂಗ್ಯಚಿತ್ರಗಳ ರೂಪದಲ್ಲಿ ಕ್ಯಾನ್ವಾಸಿನಲ್ಲಿ ಮೂಡಿಸುತ್ತಿದ್ದಿದ್ದು… ಹೀಗೆ ಸಾಕಷ್ಟು ಸ್ವಾರಸ್ಯಕರ ಸಂಗತಿಗಳು ನೆನಪಾಗುತ್ತವೆ. ಹೀಗೆ ನಿಜಾರ್ಥದಲ್ಲಿ ಹೊರಗಿನವರಾಗಿದ್ದುಕೊಂಡೂ ಕಾಲಾಂತರದಲ್ಲಿ ಮಹಾನಗರವೊಂದರ ಭಾಗವಾಗುವುದು ಮತ್ತು ಅಲ್ಲಿಯ ರಂಗಿನಲ್ಲಿ ಒಂದಾಗುವುದು ಒಂದು ಬಗೆಯ ಅನಿವಾರ್ಯತೆಯಲ್ಲೇ ಆಗಬೇಕಿಲ್ಲ ಅನ್ನುವುದು ಇಲ್ಲಿ ಗಮನಿಸಬೇಕಾಗಿರುವ ಅಂಶ. ಗಿರೀಶ್ ಕಾರ್ನಾಡರು ತಮ್ಮ ಬದುಕನ್ನು ಕರೆದಂತೆ ಆಡ್ತಾ ಆಡ್ತಾ ಆಯುಷ್ಯ!

ಸುಮಾರು ಹತ್ತು-ಹನ್ನೆರಡು ವರ್ಷಗಳ ಹಿಂದಿನ ಮಾತು. ಬಹಳ ವರ್ಷಗಳ ಕಾಲ ದಿಲ್ಲಿಯಲ್ಲಿ ಉಳಿದುಕೊಂಡಿದ್ದ ವಿದೇಶಿ ಯುವತಿಯೊಬ್ಬಳು ಇಲ್ಲಿಯ ಸ್ಥಳೀಯರನ್ನೂ ಮೀರಿಸುವಂತೆ ಶುದ್ಧ ಹಿಂದಿಯಲ್ಲಿ ಮಾತಾಡುವುದನ್ನು ನಾನು ಕಂಡಿದ್ದೆ. ಹಿಂದಿಯ ಮೇಲೆ ಆಕೆಗಿದ್ದ ಹಿಡಿತವನ್ನು ಕಂಡರೆ ಯಾರಾದರೂ ಹುಬ್ಬೇರಿಸುವುದು ಸಾಮಾನ್ಯವಾಗಿತ್ತು. ಮೂಲತಃ ರಷ್ಯನ್ ಆಗಿದ್ದ ಈಕೆ, ರೂಪದರ್ಶಿಯಾಗಿ ಹಲವು ಪ್ರಾಜೆಕ್ಟುಗಳಲ್ಲಿ ದುಡಿಯುತ್ತಿದ್ದಳು. ಈ ನಿಟ್ಟಿನಲ್ಲಿ ದಿಲ್ಲಿಯಲ್ಲಿ ವಾಸ್ತವ್ಯ ಹೂಡಿದ್ದಳು ಕೂಡ. ಮುಂದೆ ಒಂದೆರಡು ಮುಖ್ಯವಾಹಿನಿಯ ಬಾಲಿವುಡ್ ಚಿತ್ರಗಳಲ್ಲಿ ನರ್ತಕಿಯರ ಗುಂಪಿನಲ್ಲಿ ಭಾಗವಹಿಸುವ ಅವಕಾಶವೂ ಆಕೆಗೆ ಸಿಕ್ಕಿತ್ತು. ಆ ಕಾಲದಲ್ಲಿ ಅದುವೇ ಆಕೆಗೊಂದು ದೊಡ್ಡ ಬ್ರೇಕ್ ಕೂಡ ಆಗಿತ್ತು. ಇಂತಹ ಹಲವು ಅದ್ಭುತಗಳು ನಮ್ಮ ಬೀದಿಯಲ್ಲೇ, ನಮ್ಮ ನಡುವಿನಲ್ಲೇ ನಡೆಯುತ್ತಿರುತ್ತವೆ. ಹೀಗೆ ಹೊಸದೊಂದು ದೇಶವನ್ನು, ಇಲ್ಲಿಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಾ ಹೊರಗಿನವರು ಇಲ್ಲಿಯವರಾಗಿಯೇ ಬಿಡುವ ಪ್ರಕ್ರಿಯೆಯನ್ನು ನೋಡುವುದು ಕೂಡ ಒಂದು ಖುಷಿ.  

ಮಹಾನಗರಗಳಂತಹ ದಟ್ಟ ಕಾಂಕ್ರೀಟು ಕಾನನಗಳಲ್ಲಿ ಕಳೆದುಹೋಗುವುದು ಎಷ್ಟು ಭಯಾನಕವೋ, ಇಂತಹ ಕೆಲವು ಅನುಭವಗಳು ಹೊಸ ದಾರಿಗಳನ್ನೂ ನಮಗೆ ತೋರಿಸಬಲ್ಲದು. ಗೊಂದಲಪುರದಂತೆ ಭಾಸವಾಗುವ ಬೆಂಗಳೂರಿನ ಅಡ್ಡ-ಉದ್ದ ರಸ್ತೆಗಳು, ಚಂಡೀಗಢದಲ್ಲಿ ಎಲ್ಲೆಲ್ಲೂ ಕಾಪಿ-ಪೇಸ್ಟ್ ಮಾಡಿದಂತೆ ಕಾಣಸಿಗುವ ಒಂದೇ ಶೈಲಿಯ ರಸ್ತೆ-ಸರ್ಕಲ್ಲುಗಳು, ಮಳೆಯು ಹೊಸತಲ್ಲದಿದ್ದರೂ ಮಳೆಗಾಲದಲ್ಲಿ ಒದ್ದೆ ಕೋಳಿಯಂತಾಗುವ ಮುಂಬೈ ಶಹರದ ಇಕ್ಕಟ್ಟು ಬೀದಿಗಳು, ಅವ್ಯವಸ್ಥೆಯ ಪರಾಕಾಷ್ಠೆಯಂತೆ ಕಾಣುವ ಹಳೇದಿಲ್ಲಿಯ ಜನನಿಬಿಡ ರಸ್ತೆಗಳು… ಹೀಗೆ ಒಂದೊಂದು ನಗರವೂ ಒಂದೊಂದು ಅವತಾರಗಳ ಕತೆಗಳನ್ನು ಹೇಳಿದಂತಾಗುತ್ತದೆ. ಕೋಲ್ಕತ್ತಾದಲ್ಲಿ ಖ್ಯಾತ ಕಾಲಿಘಾಟ್ ಮಂದಿರದ ಬೀದಿಯು ನನ್ನಲ್ಲಿ ಅದೆಷ್ಟು ಅಚ್ಚರಿಯನ್ನು ಮೂಡಿಸುತ್ತದೋ, ತೀರಾ ಅದರ ಎದುರಿಗೇ ಇರುವ ಮದರ್ ತೆರೇಸಾರ ಮಿಷನರೀಸ್ ಆಫ್ ಚ್ಯಾರಿಟಿ ಆಶ್ರಮದ ಮುಖ್ಯದ್ವಾರವು ನನ್ನಲ್ಲಿ ಸೌಹಾರ್ದ ಮತ್ತು ಭ್ರಾತೃತ್ವದ ಹೊಸ ಉತ್ಸಾಹವನ್ನು ಉಕ್ಕಿಸುತ್ತದೆ. ಥೇಟು ಹಜರತ್ ನಿಜಾಮುದ್ದೀನ್ ಔಲಿಯಾರ ಮಡಿಲಿನಲ್ಲೇ ನಮಗೆ ಸಿಗುವ ಆಮಿರ್ ಖುಸ್ರೋನಂತೆ. 

ಇದನ್ನೂ ಓದಿ- http://“ಟಿಕ್-ಟಿಕ್ ಟೈಂಬಾಂಬಿನ ತಂಟೆಗಳು” https://kannadaplanet.com/the-strings-of-a-ticking-time-bomb/

ಕಾಫಿ ಟೇಬಲ್ ಬುಕ್ಕುಗಳಲ್ಲಿ ಕಾಣಸಿಗುವ ಮಹಾನಗರಗಳು ಆಕರ್ಷಕ ಚಿತ್ರರೂಪಗಳಲ್ಲಿ ಕಾಣಸಿಗುವ ಚಂದದ ಟ್ರೇಲರ್ ಗಳಷ್ಟೇ. ಶಹರವೊಂದರ ಇಡಿಯ ಚಿತ್ರಣವನ್ನು ನೋಡಲು ಇಲ್ಲಿ ಸಮಯ, ಪರಿಶ್ರಮ, ಶ್ರದ್ಧೆ, ಮುಕ್ತ ಮನೋಭಾವ… ಹೀಗೆ ಎಲ್ಲವೂ ಬೇಕಾಗುವುದು ಸಹಜ. ಇದಕ್ಕಾಗಿಯೇ ರವೀಶ್ ಪ್ರಾಯಶಃ ದಿಲ್ಲಿಯನ್ನು ಕಾಫಿ ಟೇಬಲ್ ಬುಕ್ಕುಗಳಿಗೆ ಸೀಮಿತವಾಗಿಸಬೇಡಿ ಎಂದು ಬರೆದರು. “ನಾನು ನೀನಂದುಕೊಂಡಿದ್ದಷ್ಟೇ ಅಲ್ಲ”, ಅಂತ ಎಲ್ಲ ಮಹಾನಗರಗಳೂ ಹೊಸ ಹೊಸ ಅಚ್ಚರಿಗಳನ್ನು ನಮ್ಮ ಮುಂದಿಡುತ್ತಲೇ ಹೋಗುತ್ತವೆ. ನಾವೂ ಅರ್ಥವಾದಂತೆ ಕಣ್ಣರಳಿಸುತ್ತೇವೆ, ತಲೆಯಾಡಿಸುತ್ತೇವೆ. ಆಗಾಗ ಒಂದಿಷ್ಟು ರೋಮಾಂಚನಗೊಳ್ಳುತ್ತಾ, ಮತ್ತದೇ ಹಾಳುನಗರವೆಂದು ಗೊಣಗುತ್ತಾ ಹಿಡಿಶಾಪ ಹಾಕುತ್ತೇವೆ. 

ಇವೆಲ್ಲದರ ನಡುವೆಯೂ ತಮ್ಮೂರನ್ನು ಮೆಚ್ಚಿಕೊಳ್ಳುತ್ತಾ, “ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ” ಎಂದು ಶಹರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾ ಬದುಕು ಮುಂದೆ ಸಾಗುತ್ತದೆ. ಮನೆಯಲ್ಲಿ ಉಳಿದುಬಿಡುವುದು ಮೇಲೋ ಅಥವಾ ಕಾಂಕ್ರೀಟು ಕಾನನದಲ್ಲಿ ಕಳೆದುಹೋಗುವುದು ಮೇಲೋ ಎಂದು ಮನಸ್ಸು ಲಾಭನಷ್ಟಗಳನ್ನು ಲೆಕ್ಕಹಾಕುತ್ತಲೇ ಇರುತ್ತದೆ. ಶಹರಗಳು ನಮಗರಿವಿಲ್ಲದಂತೆಯೇ ನಮ್ಮ ಭಾಗವಾಗುವುದು ಮತ್ತು ನಾವುಗಳು ಶಹರಗಳ ಭಾಗವಾಗುವುದು ಕೂಡ ಹೀಗೆಯೇ! 

 ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ” (ಅನುಭವ ಕಥನ), “ಸಫಾ” (ಅನುವಾದಿತ ಜೀವನ ಕಥನ), “ಸ್ನೇಹಗ್ರಾಮದ ಸಂಸತ್ತು” (ಅನುವಾದಿತ ಮಕ್ಕಳ ಕಾದಂಬರಿ), “ಮರ ಏರಲಾರದ ಗುಮ್ಮ” (ಅನುವಾದಿತ ಮಕ್ಕಳ ಚಿತ್ರಪುಸ್ತಕ), “ಜಿಪ್ಸಿ ಜೀತು” (ಮಕ್ಕಳ ಕಾದಂಬರಿ), “ಮುಸ್ಸಂಜೆ ಮಾತು” (ಪ್ರಬಂಧಗಳ ಸಂಕಲನ), “ಭಾರತವೆಂಬ ಪರಿಕಲ್ಪನೆ” (ಸಂದರ್ಶನ / ಅನುವಾದ) ಮತ್ತು “ಫರಿಶ್ತಾ” (ಬಹುಮಾನಿತ ಕತೆಗಳ ಸಂಕಲನ) ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article