ತುಳುನಾಡಿನ ಮಾರ್ನಮಿ ಅಥವಾ ದಸರಾ ಆಚರಣೆಯು ಇಲ್ಲಿ ಮಾತೃಮೂಲೀಯ ಕೌಟುಂಬಿಕ ಪದ್ಧತಿಯ ಪ್ರತೀಕವಾಗಿದೆ. ಮಹಿಷಾಸುರವಧೆಯ ಕಥೆ ಇಲ್ಲಿನ ದಸರಾ ಆಚರಣೆಯಲ್ಲಿ ಮುಖ್ಯ ಪಾತ್ರವಹಿಸುವುದಿಲ್ಲ ಎಂದೇ ಹೇಳಬೇಕು. ಯಾಕೆಂದರೆ ತುಳುನಾಡಿನ ಕೃಷಿ ಚಟುವಟಿಕೆಗಳಲ್ಲಿ ಮಹಿಷ ಅಂದರೆ ಕೋಣಕ್ಕೆ ಪ್ರಧಾನ ಸ್ಥಾನವಿದೆ. ಮಾತೆಯು ದೇವತೆಯಾಗಿ ರಕ್ಷಿಸುತ್ತಾಳೆ ಎಂಬ ನಂಬಿಕೆಯು ಇಲ್ಲಿನ ಆಚರಣೆಯ ಮೂಲವಾಗಿದೆ ಎನ್ನಬಹುದು – ಗಣನಾಥ ಶೆಟ್ಟಿ ಎಕ್ಕಾರು, ಜಾನಪದ ವಿದ್ವಾಂಸರು.
ಹಲವು ಹಬ್ಬಗಳನ್ನು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುತ್ತದೆ. ಅವುಗಳಲ್ಲಿ ಧಾರ್ಮಿಕ ಬಹುತ್ವವನ್ನು ಗುರುತಿಸ ಬಹುದಾಗಿದೆ. ಒಂದೇ ಹಬ್ಬವನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುವುದನ್ನು ಕಾಣಬಹುದು. ಕರಾವಳಿ ಪ್ರದೇಶದ ಹೆಚ್ಚಿನ ಆಚರಣೆಗಳು ಕೃಷಿ ಸಂಸ್ಕೃತಿಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವುದನ್ನು ಸ್ಪಷ್ಟವಾಗಿ ಕಂಡುಕೊಳ್ಳಬಹುದು.
ದಸರಾ ಹಬ್ಬದ ಆಚರಣೆಯನ್ನು ಪೌರಾಣಿಕವಾಗಿ ನೋಡುವುದಾದರೆ ದೇವಿ ಭಾಗವತ ಮತ್ತು ರಾಮಾಯಣದ ಕಥೆಗಳಿಗೆ ತಳುಕು ಹಾಕಿರುವುದನ್ನು ಗುರುತಿಸಬಹುದಾಗಿದೆ. ಭೂಮಿಯ ಸೃಷ್ಠಿಕರ್ತೆಯಾದ ದೇವಿಯು ದೇವಾನುದೇವತೆಗಳ ರಕ್ಷಣೆಗಾಗಿ ಮಹಿಷಾಸುರನನ್ನು ಕೊಂದು ವಿಜಯ ಪಡೆದ ದಿನವನ್ನು ವಿಜಯದಶಮಿ ಎಂದು ಗುರುತಿಸಲಾಗುತ್ತದೆ. ಇನ್ನೊಂದು ಕಡೆಯಲ್ಲಿ ರಾಮಾಯಣದಲ್ಲಿ ರಾವಣನನ್ನು ರಾಮನು ಕೊಂದ ದಿನವನ್ನು ವಿಜಯದಶಮಿ ದಿನವೆಂಬ ಪೌರಾಣಿಕ ನಂಬಿಕೆಯಿದೆ. ಇಲ್ಲೂ ದ್ರಾವಿಡ ಹಿನ್ನೆಲೆಯಲ್ಲಿ ವಿಭಿನ್ನ ಚಿಂತನೆಗಳಿವೆ. ರಾವಣ ಮತ್ತು ಮಹಿಷಾಸುರನನ್ನು ದ್ರಾವಿಡ ಮೂಲದವರೆಂದು ಗುರುತಿಸಿ ಪೌರಾಣಿಕ ಯುದ್ಧಗಳು ಆರ್ಯ ದ್ರಾವಿಡ ಸಂಘರ್ಷಗಳೆಂಬ ವ್ಯಾಖ್ಯಾನಗಳನ್ನು ಹಲವು ವಿದ್ವಾಂಸರು ಮಾಡಿದ್ದಾರೆ.
ಕರಾವಳಿಯ ದಸರಾ ಹಬ್ಬವನ್ನು ಗಮನಿಸಿದರೆ ಇದೊಂದು ಮಾತೃಮೂಲೀಯ ಆಚರಣೆ ಎಂಬುದು ಸ್ಪಷ್ಟವಾಗುತ್ತದೆ. ವಿಶ್ವದಲ್ಲೆ ಅತಿ ವಿಶಿಷ್ಟವೆನಿಸುವ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಕರಾವಳಿಯ ಶೂದ್ರ ಮತ್ತು ದಲಿತ ಸಮುದಾಯಗಳಲ್ಲಿ ಕಾಣಬಹುದಾಗಿದೆ. ಇಲ್ಲಿಯ ಆರಾಧನೆಗಳಲ್ಲಿ ಮಹಿಳೆಗೆ ಪ್ರಮುಖ ಸ್ಥಾನವಿದೆ. ಉದಾಹರಣೆಗೆ ದೈವಾರಾಧನೆಯಲ್ಲಿ ಮನೆಯ ಆರಾಧನೆಯ ನೇತೃತ್ವ ವಹಿಸುವವರು ಮಹಿಳೆಯರು. ಆರಾಧನೆಯ ತಯಾರಿ ಹಾಗೂ ಆರ್ಥಿಕ ಲೆಕ್ಕಾಚಾರದ ಜವಾಬ್ದಾರಿಯನ್ನು ಅವರೇ ನೋಡಿಕೊಳ್ಳುತ್ತಾರೆ. ಇತರ ಸಮಾಜಗಳಿಗೆ ಹೋಲಿಸಿದರೆ ತುಳುನಾಡಿನಲ್ಲಿ ಮಹಿಳೆಯರು ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಚ್ಚು ಪ್ರಬಲರಾಗಿದ್ದಾರೆ. ಇತ್ತೀಚೆಗೆ ಮೈಕ್ರೋ ಕುಟುಂಬಗಳು ಹೆಚ್ಚುತ್ತಿರುವುದರಿಂದ ಈ ಸ್ಥಿತಿ ಬದಲಾಗುತ್ತಿದೆ.
ಇಲ್ಲಿಯ ಧಾರ್ಮಿಕ ವ್ಯವಸ್ಥೆಯನ್ನು ವಿಶ್ಲೇಷಿಸುವುದಾದರೆ ಮಾತೃಪ್ರಧಾನ ವ್ಯವಸ್ಥೆಯಿಂದಾಗಿ ದೇವಿ ದೇವಸ್ಥಾನಗಳಿಗೆ ಮಹತ್ವವಿದೆ. ವಾಸ್ತವವಾಗಿ ತುಳುನಾಡಿನಲ್ಲಿ ಪ್ರಾಚೀನ ಕಾಲದಿಂದಲೂ ಅವೈದಿಕ ಆಚರಣೆಗಳು ಚಾಲ್ತಿಯಲ್ಲಿದ್ದವು. ಇಲ್ಲಿ ಶೈವಮೂಲದ ದೇವಾಲಯಗಳು ಹಲವು ಸಂಖ್ಯೆಯಲ್ಲಿದ್ದವು. ಆದರೆ ಮುಂದೆ ವೈದಿಕ ಧರ್ಮದ ಪ್ರಭಾವದಿಂದ ವೈದಿಕ ಪ್ರಧಾನ ದೇವಸ್ಥಾನಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಈಗಲೂ ಮಾತೃಮೂಲೀಯವಾದ ದೇವಿ ದೇವಸ್ಥಾನಗಳು ಹಾಗೂ ನಾಗಾರಾಧನೆ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ ಇಲ್ಲಿನ ಜನರಿಗೆ ಪೊಳಲಿ, ಕಟೀಲು, ಕೊಲ್ಲೂರು, ಮಾರಣಕಟ್ಟೆ, ಮಂದರ್ತಿ, ಮಂಗಳಾದೇವಿ ಮುಖ್ಯ ದೇವಸ್ಥಾನಗಳು. ಕೇವಲ ತುಳುನಾಡಿಗೆ ಮಾತ್ರವಲ್ಲ ದ್ರಾವಿಡ ಮೂಲದ ಕೇರಳ ಮತ್ತು ತಮಿಳುನಾಡಿನ ಭಕ್ತರೂ ಕೂಡ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ನಾಗಮೂಲವಾದ ಕುಡುಪು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಇಲ್ಲಿನ ಜನರಿಗೆ ಹೆಚ್ಚು ಮುಖ್ಯವಾದವುಗಳು. ಈ ದೃಷ್ಟಿಯಿಂದ ಇಲ್ಲಿನ ದಸರಾ ಆಚರಣೆಯನ್ನು ಗಮನಿಸಬೇಕು.
ಕರಾವಳಿಯ ದಸರಾ ಆಚರಣೆಗಳು ಇಲ್ಲಿನ ಮಾತೃಮೂಲ ದೇವಿ ದೇವಸ್ಥಾನಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತವೆ. ಕಟೀಲು, ಕೊಲ್ಲೂರು ಇತ್ಯಾದಿ ದೇವಸ್ಥಾನಗಳಿಗೆ ಅವುಗಳದ್ದೇ ಆದ ಸ್ಥಳಪುರಾಣಗಳಿವೆ. ಇವು ದೇವಿ ಭಾಗವತದ ಕಥೆಗಳಿಗಿಂತ ಭಿನ್ನವಾಗಿವೆ. ಇತ್ತೀಚೆಗೆ ಮಂಗಳೂರಿನ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ದಸರಾಹಬ್ಬವು ಮಂಗಳೂರು ದಸರಾ ಎಂದು ಪ್ರಸಿದ್ಧವಾಗಿದೆ. ಅದು ಕೂಡ ಮಾತೃಮೂಲದ ದೇವಿ ಆರಾಧನೆಯ ಹಿನ್ನೆಲೆಯಲ್ಲಿ ನಡೆಯುತ್ತದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ಉಚ್ಚಿಲದ ದುರ್ಗಾಪರಮೇಶ್ವರಿ ದೇವಳ. ತುಳುನಾಡಿನಲ್ಲಿ ದಸರಾ ಹಬ್ಬವು ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲು ಮಾತೃಮೂಲ ವ್ಯವಸ್ಥೆಯೇ ಮೂಲ ಕಾರಣ ಎಂಬುದನ್ನು ಮರೆಯಬಾರದು.
ಹುಲಿ ಕುಣಿತ ಕರಾವಳಿಯ ದಸರಾ ಆಚರಣೆಯ ಅವಿಭಾಜ್ಯ ಅಂಗ. ಹುಲಿವೇಷ ಹಾಗೂ ಇತರ ವೇಷಗಳನ್ನು ಧರಿಸಿ, ಧನಸಂಗ್ರಹ ಮಾಡುವ ಪದ್ಧತಿಯು ಇಲ್ಲಿದೆ. ಹಿಂದೆ ಬೆಟ್ಟ-ಗುಡ್ಡ, ಕಾಡುಗಳಿಂದ ಕೂಡಿದ ಕರಾವಳಿಯಲ್ಲಿ ಹುಲಿಗಳು ವ್ಯಾಪಕವಾಗಿದ್ದವು ಎಂಬುದನ್ನು ಹಿರಿಯರು ಸ್ಮರಿಸಿಕೊಳ್ಳುತ್ತಾರೆ. ಆಹಾರಕ್ಕಾಗಿ ಹುಲಿಗಳು ಹಟ್ಟಿಯಿಂದ ದನಗಳನ್ನು ಕೊಂದು ತಿನ್ನುತ್ತಿದ್ದವು. ಇದರಿಂದ ಹುಲಿ ಬೇಟೆಯ ರೋಚಕ ಕಥೆಗಳು ತುಳುನಾಡಿನಲ್ಲಿ ವ್ಯಾಪಕವಾಗಿ ದೊರೆಯುತ್ತವೆ. ಜಾನಪದೀಯವಾಗಿ ಗಮನಿಸಿದರೆ ಮನುಷ್ಯನು ಪ್ರಕೃತಿ ಆರಾಧಕನು ಮಾತ್ರವಲ್ಲ ಪ್ರಾಣಿಯ ಆರಾಧಕನೂ ಆಗಿದ್ದಾನೆ. ಪ್ರಾಣಿಗಳಿಂದ ತೊಂದರೆಯಾದಾಗ ಅಸಹಾಯಕನಾಗಿ ಆರಾಧಿಸುವ ಪದ್ಧತಿ ಜನಪದದಲ್ಲಿದೆ. ತುಳುನಾಡಿನಲ್ಲಿ ಪಂಜುರ್ಲಿ, ಪಿಲಿಚಾಮುಂಡಿ, ದೈವಾರಾಧನೆಗಳನ್ನು ಈ ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದಾಗಿದೆ. ಇದನ್ನು ಗಮನಿಸಿದರೆ ಹುಲಿಕುಣಿತಗಳು ಇಲ್ಲಿಯ ಸಂಸ್ಕೃತಿಯಿಂದಲೇ ರೂಪುಗೊಂಡಿದೆ. ಹುಲಿಕುಣಿತವನ್ನು ಆರಾಧನಾ ರೂಪದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಉದಾಹರಣೆಗೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ದಸರಾ ಸಂದರ್ಭದಲ್ಲಿ ಕೊಡೆತ್ತೂರು, ಎಕ್ಕಾರು ಮುಂತಾದ ಹತ್ತಿರದ ಗ್ರಾಮಗಳಿಂದ ಹುಲಿವೇಷದೊಂದಿಗೆ ಬೃಹತ್ ಮೆರವಣಿಗೆ ದೇವಸ್ಥಾನಕ್ಕೆ ಬರುತ್ತದೆ. ವೇಷಧಾರಿಯು ವೇಷಧರಿಸುವ ದಿನ ವೃತಧಾರಿಯಾಗುತ್ತಾನೆ. ವೇಷ ಧರಿಸದಿದ್ದರೆ ಅವನು ತಪ್ಪು ಕಾಣಿಕೆಯನ್ನು ಹಾಕುವ ಪದ್ಧತಿಯೂ ಇದೆ. ಇಂದು ಹುಲಿವೇಷ ಸ್ಪರ್ಧೆಗಳು ನಡೆಯುತ್ತಿವೆ. ಅವು ರಾಜಕೀಯ ಶಕ್ತಿ ಪ್ರದರ್ಶನದ ಅಂಗಣಗಳಾಗಿ ಮಾರ್ಪಟ್ಟಿರುವುದು ವಿಶೇಷವಾಗಿದೆ.
ಒಟ್ಟಿನಲ್ಲಿ ತುಳುನಾಡಿನ ಮಾರ್ನಮಿ ಅಥವಾ ದಸರಾ ಆಚರಣೆಯು ಇಲ್ಲಿ ಮಾತೃಮೂಲೀಯ ಕೌಟುಂಬಿಕ ಪದ್ಧತಿಯ ಪ್ರತೀಕವಾಗಿದೆ. ಮಹಿಷಾಸುರವಧೆಯ ಕಥೆ ಇಲ್ಲಿನ ದಸರಾ ಆಚರಣೆಯಲ್ಲಿ ಮುಖ್ಯ ಪಾತ್ರವಹಿಸುವುದಿಲ್ಲ ಎಂದೇ ಹೇಳಬೇಕು. ಯಾಕೆಂದರೆ ತುಳುನಾಡಿನ ಕೃಷಿ ಚಟುವಟಿಕೆಗಳಲ್ಲಿ ಮಹಿಷ ಅಂದರೆ ಕೋಣಕ್ಕೆ ಪ್ರಧಾನ ಸ್ಥಾನವಿದೆ. ಮಾತೆಯು ದೇವತೆಯಾಗಿ ರಕ್ಷಿಸುತ್ತಾಳೆ ಎಂಬ ನಂಬಿಕೆಯು ಇಲ್ಲಿನ ಆಚರಣೆಯ ಮೂಲವಾಗಿದೆ ಎನ್ನಬಹುದು. ಈ ಬಗ್ಗೆ ಆಳವಾದ ಅಧ್ಯಯನವು ಇನ್ನಷ್ಟು ಮಹತ್ವದ ವಿಚಾರಗಳಿಗೆ ಬೆಳಕು ಚೆಲ್ಲಬಹುದು.
ಗಣನಾಥ ಶೆಟ್ಟಿ ಎಕ್ಕಾರು
ಜಾನಪದ ವಿದ್ವಾಂಸರು.
ಇದನ್ನೂ ಓದಿ- ನ್ಯಾಯಮೂರ್ತಿಯೊಳಗಿನ ಕೋಮುವಾದಿ ಬಯಲಿಗೆ ಬಿದ್ದಾಗ!