ನಗರದಲ್ಲಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು ಸುಮಾರು 7.80 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ವಶಪಡಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ನೈಜೀರಿಯಾ ಮೂಲದ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಂದ 3.8 ಕೆಜಿ ಎಂಡಿಎಂಎ ಕ್ರಿಸ್ಟಲ್, ಎಂಡಿಎಂಎ ಬ್ರೌನ್ ಹಾಗೂ ವೈಟ್ ಡ್ರಗ್ಸ್, 42 ಗ್ರಾಂ ತೂಕದ 82 ಎಕಸ್ಟೆಸಿ ಮಾತ್ರೆಗಳು, 23 ಕೆ.ಜಿ. ಗಾಂಜಾ ಹಾಗೂ 482 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಕೆವಿನ್ ರೋಜರ್, ಥಾಮಸ್ ನವೀದ್ ಚೀಮ್ ಎಂದು ಗುರುತಿಸಲಾಗಿದೆ. ಇವರು ದೆಹಲಿ ಮತ್ತು ಮುಂಬೈನಿಂದ ಕಡಿಮೆ ಬೆಲೆಗೆ ತರಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತದ್ದರು. ಆರೋಪಿಗಳ ವಿರುದ್ಧ ಸಿಸಿಬಿ ಮತ್ತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಗೋಡಿಯಲ್ಲಿ ಮನೆ ಮಾಡಿದ್ದ ಆರೋಪಿಗಳು, ಪರಿಚಿತ ಸ್ಥಳದಲ್ಲಿ ಡ್ರಗ್ಸ್ ಇರಸಿ ಲೊಕೇಶನ್ ಶೇರ್ ಮಾಡಿ ಮಾರಾಟ ಮಾಡುತ್ತಿದ್ದರು. ಹಣವನ್ನು ಆನ್ ಲೈನ್ ಮೂಲಕ ಸ್ವೀಕರಿಸುತ್ತಿದ್ದರು. ಐಟಿ ಕಂಪನಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಇವರ ಪ್ರಮುಖ ಗ್ರಾಹಕರು ಎಂದು ಪೊಲೀಸರು ಹೇಳೀದ್ದಾರೆ.