ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಅವಶ್ಯಕತೆ ಇದೆ: ಹೈಕೋರ್ಟ್‌ ಮಹತ್ವದ ತೀರ್ಪು

Most read

ಬೆಂಗಳೂರು: ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಅವಶ್ಯಕತೆ ಇದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಕೇಂದ್ರ ಸರ್ಕಾರದ ‘ಸಹಯೋಗ್’ ಪೋರ್ಟಲ್‌ ಅನ್ನು ನಿರ್ಬಂಧಿಸುವಂತೆ ಎಕ್ಸ್ ಕಾರ್ಪ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 69(A) ಅಡಿಯಲ್ಲಿ ನಿಯಮಗಳನ್ನು ಅನುಸರಿಸಿದ ನಂತರವಷ್ಟೇ ಮಾಹಿತಿ ನಿರ್ಬಂಧಿಸುವ ಆದೇಶವನ್ನು ಹೊರಡಿಸಬಹುದೇ ಹೊರತು ಐಟಿ ಕಾಯ್ದೆಯ ಸೆಕ್ಷನ್ 79(3)(ಬಿ)ಅಡಿಯಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನಿರ್ಬಂಧಿಸುವ ಆದೇಶಗಳನ್ನು ಹೊರಡಿಸುವ ಅಧಿಕಾರ ಇಲ್ಲ ಎಂದು ನಿರ್ದೇಶಿಸುವಂತೆ ಎಕ್ಸ್‌ ಕಾರ್ಪ್‌ ಕೋರಿತ್ತು.

ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ತಮ್ಮ ಆದೇಶದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿನ ವಿಷಯಗಳನ್ನು ನಿಯಂತ್ರಿಸಬೇಕಾಗಿದೆ ಮತ್ತು ಅದರ ನಿಯಂತ್ರಣವು ಅತ್ಯಗತ್ಯವಾಗಿದೆ. ಅದರಲ್ಲೂ ಸಂವಿಧಾನದಲ್ಲಿ ಅಡಕವಾಗಿರುವಂತೆ ಮಹಿಳೆಯರ ಘನತೆಯ ವಿಷಯಕ್ಕೆ ಸಂಬಂಧಪಟ್ಟಂತೆ ಅವರ ವಿರುದ್ಧದ ಅಪರಾಧಗಳ ಪ್ರಕರಣಗಳಲ್ಲಿ ನಿಯಂತ್ರಣ ಆಗಬೇಕಿದೆ ಎಂದರು. ಅಮೆರಿಕದ ನ್ಯಾಯಾಂಗ ಚಿಂತನೆಯನ್ನು ಭಾರತದ ಸಂವಿಧಾನಕ್ಕೆ ಅಳವಡಿಸಿಕೊಂಡು ನೋಡಲು ಸಾಧ್ಯವಿಲ್ಲ. ವಾಕ್‌ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಂತೆ ಅಮೆರಿಕದಲ್ಲೂ ನ್ಯಾಯಾಂಗ ಚಿಂತನೆ ಸಂಪೂರ್ಣವಾಗಿ ಬದಲಾಗಿದೆ ಎಂದೂ ತಿಳಿಸಿದರು.

ಮಾಹಿತಿ ಮತ್ತು ಸಂವಹನದ ಹರಡುವಿಕೆ ಅಥವಾ ವೇಗವನ್ನು ಎಂದಿಗೂ ಅನಿಯಂತ್ರಿತವಾಗಿ ಬಿಡಲಾಗಿಲ್ಲ ಮತ್ತು ನಿಯಂತ್ರಿಸದೆ ಬಿಟ್ಟಿಲ್ಲ.ಸದಾ ನಿಯಂತ್ರಣಕ್ಕೊಳಪಟ್ಟೇ ಇರುತ್ತದೆ. ತಂತ್ರಜ್ಞಾನವು ಅಭಿವೃದ್ಧಿ ಹೊಂದಿದಂತೆ ಬದಲಾಗುವ ವಾಟ್ಸಾಪ್, ಇನ್‌ಸ್ಟಾಗ್ರಾಗ್ರಾಂ ಮತ್ತು ಸ್ನ್ಯಾಪ್‌ ಚಾಟ್‌ ಎಲ್ಲವೂ ಜಾಗತಿಕ ಮತ್ತು ಸ್ಥಳೀಯವಾಗಿ ನಿಯಂತ್ರಣಕ್ಕೆ ಒಳಪಡುತ್ತಲೇ ಬಂದಿದೆ. ಸಂವಿಧಾನದ 19(1)(ಎ) ವಿಧಿ ಅಡಿಯಲ್ಲಿ ವಾಕ್ ಸ್ವಾತಂತ್ರ್ಯವನ್ನು ನೀಡಲಾಗಿದ್ದರೂ  ಅಭಿವ್ಯಕ್ತಿ ಹಕ್ಕನ್ನು 19(2) ಅಡಿಯಲ್ಲಿ ನಿರ್ಬಂಧಕ್ಕೊಳಪಡಿಸಲಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.

 

ಐಟಿ ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ಮಾಹಿತಿ ನಿರ್ಬಂಧಿಸುವ ಆದೇಶಗಳನ್ನು ನೀಡುವ ಅಧಿಕಾರ ಇರುವುದಿಲ್ಲ. ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯ ನಿಯಮಗಳನ್ನು ಪಾಲನೆ ಮಾಡಿದ ನಂತರ ಆದೇಶಗಳನ್ನು ಹೊರಡಿಸಬಹುದಾಗಿದೆ ಎಂದು ಎಕ್ಸ್‌ ಕಾರ್ಪ್‌ ವಾದಿಸಿತ್ತು. ಸೆಕ್ಷನ್ 69A ಅಡಿಯಲ್ಲಿ ಹೊರಡಿಸಿದ ಆದೇಶಗಳನ್ನು ಹೊರತುಪಡಿಸಿ ಪೂರ್ವಾಗ್ರಹಪೀಡಿತವಾಗಿ ಎಕ್ಸ್‌ ಕಾರ್ಪ್‌ ವಿರುದ್ಧ ಆದೇಶ ಹೊರಡಿಸದಂತೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಗೆ ನಿರ್ದೇಶನ ನೀಡುವಂತೆಯೂ ಕೋರಿತ್ತು.

ತನ್ನ ಅರ್ಜಿ ಕುರಿತಾದ ಅಂತಿಮ ತೀರ್ಪು ಬರುವವರೆಗೆ ಸೆನ್ಸಾರ್‌ ಶಿಪ್ ಪೋರ್ಟಲ್ ಆದ ಸಹಯೋಗ್‌ ಗೆ ಸೇರದೆ ಇರುವುದಕ್ಕೆ ಕಂಪನಿ,ಅದರ ಪ್ರತಿನಿಧಿಗಳು ಅಥವಾ ಉದ್ಯೋಗಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡುವಂತೆಯೂ ಎಕ್ಸ್‌ ಕೋರಿತ್ತು.
 
ಮಾಹಿತಿ ತಂತ್ರಜ್ಞಾನ ಕಾಯ್ದೆ- 2000 ದ  ಸೆಕ್ಷನ್ 79(3)(b) ಅಡಿಯಲ್ಲಿ ಸಹಯೋಗ್‌ ಗೆ ನೋಟಿಸ್‌ ಗಳನ್ನು ನೀಡುವ ಅಧಿಕಾರ ನೀಡಿತ್ತು. 
ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು  ಯಾವುದೇ ಡೇಟಾ ಅಥವಾ ಸಂವಹನ ಕೊಂಡಿಗೆ ಪ್ರವೇಶವನ್ನು ನಿರ್ಬಂಧಿಸಲು ಅಥವಾ ನಿಷ್ಕ್ರಿಯಗೊಳಿಸಲು ಅನುಕೂಲವಾಗುವಂತೆ 'ಸಹಯೋಗ್' ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಹಂಚಿಕೊಳ್ಳಲಾಗುವ ವಿಷಯವು ಸಮಾಜದ ಹಿತಕ್ಕೆ ವಿರುದ್ಧವಾಗಿದ್ದರೆ ಕ್ರಮ ಕೈಗೊಳ್ಳಬಹುದಾಗಿದೆ. ಯಾವುದೇ ಕಾನೂನುಬಾಹಿರ ವಿಷಯ ಕಂಡು ಬಂದಲ್ಲಿ ಸಹಯೋಗ್ ಪೋರ್ಟಲ್ ತನ್ನ ಸರ್ಕಾರದ ಅಧಿಕೃತ ಅಧಿಕಾರಿಗೆ ನೋಟಿಸ್ ಕಳುಹಿಸಲು ಅಧಿಕಾರ ನೀಡಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.
 
 

More articles

Latest article