ಜಾತಿ ಗಣತಿ: ಹೈಕೋರ್ಟ್‌ ನಲ್ಲಿ ವಾದ ಪ್ರತಿವಾದ; ನಾಳೆಯೂ ಮುಂದುವರಿಕೆ; ಸಮೀಕ್ಷೆ ಸಮರ್ಥಿಸಿಕೊಂಡ ಸರ್ಕಾರ

Most read

ಬೆಂಗಳೂರು: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ​ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಇಂದು ನಡೆದಿದ್ದು, ನಾಳೆಯೂ ಮುಂದುವರೆಯಲಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಜೋಶಿ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಮತ್ತು ಸರ್ಕಾರದ ಪರ ವಕೀಲರ ವಾದ ಮತ್ತು ಪ್ರತಿವಾದ ಮಂಡಿಸಿದರು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಸಮೀಕ್ಷೆ ನಡೆಸುವ ಅಧಿಕಾರ ಇಲ್ಲ. ರಾಜ್ಯದ ಎಲ್ಲಾ ನಿವಾಸಿಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಡಿಜಿಟಲ್ ಆ್ಯಪ್ ಮೂಲಕವೂ ನಡೆಯುತ್ತಿದೆ. ಆಧಾರ್ ಮತ್ತು ಮೊಬೈಲ್ ನಂಬರ್ ಕೊಡಲು ಸೂಚಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಯಾವುದೇ ಕಾನೂನಿನ ಬಲ ಇಲ್ಲದಿದ್ದರೂ ಸಮೀಕ್ಷೆ ನಡೆಸುತ್ತಿದೆ ಎಂದು ನ್ಯಾಯಾಲಯದ ಗಮನ ಸೆಳೆದರು.

ಮತ್ತೊಬ್ಬ ಅರ್ಜಿದಾರರ ಪರ ವಾದಿಸಿದ ಜಯಕುಮಾರ್ ಎಸ್.ಪಾಟೀಲ್, ಸರ್ಕಾರ ಸಮೀಕ್ಷೆ ಹೆಸರಿನಲ್ಲಿ ಜನಗಣತಿ ನಡೆಸುತ್ತಿದೆ. ಆ ಮೂಲಕ ಕೇಂದ್ರ ಸರ್ಕಾರದ ಅಧಿಕಾರವನ್ನು ರಾಜ್ಯ ಚಲಾಯಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಈ ರೀತಿಯ ಸಮೀಕ್ಷೆ ನಡೆಸುವ ಅಧಿಕಾರ ಇಲ್ಲ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾತಿಗಣತಿಯನ್ನು ಮಾಡಲಾಗುತ್ತಿದೆ ಎಂದರು.

ಅರ್ಜಿದಾರರ ಪರ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ವಕೀಲ ಅಶೋಕ್​ ಹಾರನಹಳ್ಳಿ, ಕೇಂದ್ರ ಸರ್ಕಾರ 2027ರ ಮಾ.1ರಿಂದ ಜನಗಣತಿ ನಡೆಸಲು ಉದ್ದೇಶಿಸಿದೆ. ಜನಗಣತಿ ಜತೆಯಲ್ಲೇ ಜಾತಿ ಗಣತಿ ನಡೆಯಲಿದೆ. ರಾಜ್ಯ ಸರ್ಕಾರಗಳು ನಡೆಸುವ ಜಾತಿಗಣತಿ ಉದ್ದೇಶದ ಬಗ್ಗೆ ಅನುಮಾನಗಳಿವೆ. 2015ರಲ್ಲಿ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿದಾಗಲೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ರೀತಿಯ ಸಮೀಕ್ಷೆಯಿಂದ ಡಿಜಿಟಲ್ ಮಾಹಿತಿ ಸೋರಿಕೆಯಾಗುವ ಆತಂಕವೂ ಇದೆ ಎಂದು ತಿಳಿಸಿದರು.

ಸರ್ಕಾರದ ಪರ ವಾದಿಸಿದ ಅಭಿಷೇಕ್​ ಮನು ಸಿಂಘ್ವಿ:

ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ, ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯೇ ಹೊರತು ಜಾತಿಗಣತಿ ಅಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಸಾಮಾಜಿಕ ಕಲ್ಯಾಣ ಕಾರ್ಯಗಳನ್ನು ಕೈಗೊಳ್ಳಲು ಸಮೀಕ್ಷೆ ನಡೆಯುತ್ತಿದ್ದು, ಮಧ್ಯಂತರ ತಡೆಯಾಜ್ಞೆ ನೀಡಬಾರದು ಎಂದು ವಾದಿಸಿದರು.

ಸಮೀಕ್ಷೆ ಎಂದರೆ ರಾಜ್ಯದ ಸಂಪೂರ್ಣ ಜನತೆಯನ್ನು ಒಳಗೊಳ್ಳಲಿದ್ದು, ಸರ್ಕಾರ ಆಯ್ದ ಸಮೀಕ್ಷೆ ನಡೆಸುತ್ತಿಲ್ಲ. ಹಿಂದುಳಿದ ವರ್ಗಗಗಳನ್ನು ಪತ್ತೆ ಹಚ್ಚಲು ಮತ್ತು ಈ ಅಂಕಿ ಅಂಶಗಳನ್ನು ಆಧರಿಸಿ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ.  ಸಂವಿಧಾನಕ್ಕೆ 105ನೇ ತಿದ್ದುಪಡಿ ತಂದ ಬಳಿಕ ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ನಡೆಸಲು ಅಧಿಕಾರವಿದೆ. ದಂತ ಗೋಪುರದಲ್ಲಿ ಕುಳಿತು ಜಾತಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಬಿಹಾರದಲ್ಲಿ ಕೂಡ ಜಾತಿ ಗಣತಿ ನಡೆಸಲಾಗಿದೆ. ಕೇಂದ್ರ ಸರ್ಕಾರದ ಜಾತಿ ಗಣತಿಗೆ ಕಾಯಬೇಕು ಎಂದೇನಿಲ್ಲ. ಈ ಪ್ರಕ್ರಿಯೆಗೆ ತಡೆ ನೀಡಿದರೆ ರಾಜ್ಯದ ಆಡಳಿತ ದುರ್ಬಲವಾಗುತ್ತದೆ ಎಂದು ನ್ಯಾಯಾಲಯದ ಗಮನ ಸೆಳೆದರು.

More articles

Latest article