ರಕ್ಷಣಾ ಇಲಾಖೆಯ 515 ಅರ್ಮಿ ಬೇಸ್ ವರ್ಕ್ ಶಾಪ್ ನಲ್ಲಿ ನಡೆದಿರುವ ಅಕ್ರಮ ನೇಮಕಾತಿ ರದ್ದುಗೊಳಿಸಲು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಆಗ್ರಹ

Most read

ಬೆಂಗಳೂರು: ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ 515 ಅರ್ಮಿ ಬೇಸ್ ವರ್ಕ್ ಶಾಪ್ ಕಾರ್ಖಾನೆಯಲ್ಲಿ ‘ಸಿ’ ಮತ್ತು ‘ಡಿ’ ದರ್ಜೆಯ 54 ಸ್ಥಾನಗಳಿಗೆ ನಿಯಮಗಳನ್ನು ಉಲ್ಲಂಘಿಸಿ ಪರರಾಜ್ಯದವರನ್ನೇ ಆಯ್ಕೆ ಮಾಡಲಾಗಿದೆ. ಆದ್ದರಿಂದ  ಪ್ರಸ್ತುತ ನಡೆದಿರುವ ಅಕ್ರಮ ನೇಮಕಾತಿಯನ್ನು ತಕ್ಷಣವೇ ರದ್ದುಗೊಳಿಸಿ ಮತ್ತೊಮ್ಮೆ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಪುನರಾರಂಭಿಸಿ, ಈ ಅಕ್ರಮ ನೇಮಕಾತಿಯ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಿರುವ ಕನ್ನಡ ವಿರೋಧಿ ಅಧಿಕಾರಿಗಳನ್ನು ಕೂಡಲೆ ಅಮಾನತ್ತುಗೊಳಿಸಬೇಕೆಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಪ್ರಹ್ಲಾದ ಜೋಶಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಪಡಿಸಿದೆ. ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ನ್ಯಾಷನಲ್ ಎಂಪ್ಲಾಯ್ಮೆಂಟ್ ಸರ್ವೀಸ್ ಮ್ಯಾನುಯಲ್ ನಿಯಮದ ಪ್ರಕಾರ ಉದ್ಯೋಗ ಪ್ರಕಟಣೆಯನ್ನು ಸ್ಥಳೀಯ ಪತ್ರಿಕೆಗಳಿಗೆ ಮತ್ತು ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಗಳಿಗೆ ನೀಡುವ ಮೂಲಕ ಆರಂಭಿಸಬೇಕಿದ್ದ ನೇಮಕಾತಿಯನ್ನು ಕೇವಲ ‘ಎಂಪ್ಲಾಯ್ಮೆಂಟ್ ನ್ಯೂಸ್’ ಪತ್ರಿಕೆಯಲ್ಲಿ  ಮಾತ್ರ ಜಾಹೀರಾತು ನೀಡಿ ನಿಯಮವನ್ನು ಉಲ್ಲಂಘಿಸಲಾಗಿದೆ. ಆದರೆ ಪುಣೆ, ಆಗ್ರಾ, ಕೋಲ್ಕತ್ತ ದೆಹಲಿಯಂತಹ ಬೇರೆ ಬೇರೆ ಕಾರ್ಯಾಗಾರಗಳ ನೇಮಕಾತಿ ಕುರಿತು ಅಲ್ಲಿಯ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಸ್ಥಳೀಯರೇ ನೇಮಕವಾಗುವಂತೆ ನೋಡಿಕೊಳ್ಳಲಾಗಿದೆ.  ಈ ಸಂಬಂಧ ವಿವಿಧ ಕನ್ನಡಪರ ಸಂಘಟನೆಗಳ ಕೋರಿಕೆಯ ಮೇರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು 515 ಅರ್ಮಿ ಬೇಸ್ ವರ್ಕ್ ಶಾಪ್ ಕಾರ್ಖಾನೆಯ ಈ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದಿರುವ ಅಂಶವನ್ನು ನೆನಪಿಸಿದ್ದಾರೆ.

ಈ ಹಿಂದೆ 200-203ರಲ್ಲಿ ಇದೇ ತರಹದ ಅನ್ಯಾಯವಾದಾಗ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರಿಗೆ ಪತ್ರ ಬರೆದು ‘ಡಿ’ ದರ್ಜೆಯ 12 ಹುದ್ದೆಗಳಲ್ಲಿ 10 ಹುದ್ದೆಗಳನ್ನು ಹಾಗೂ ‘ಸಿ’ ದರ್ಜೆಯ 101 ಹುದ್ದೆಗಳಲ್ಲಿ63 ಹುದ್ದೆಗಳನ್ನು ಕನ್ನಡಿಗರಿಗೆ ಕೊಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಉದಾಹರಣೆಯಿದೆ. ಈ ಕುರಿತು ಸ್ವತಃ ಜಾರ್ಜ್ ಫರ್ನಾಂಡೀಸ್ ಅವರು ಎಸ್. ಎಂ. ಕೃಷ್ಣ ಅವರ ಪತ್ರಕ್ಕೆ ಉತ್ತರಿಸಿ ಕನ್ನಡಿಗರಿಗೇ ಉದ್ಯೋಗ ನೀಡಿದ್ದನ್ನು ಖಚಿತಪಡಿಸಿದ್ದರು. ಈ ಹೋರಾಟದ ಭಾಗವಾಗಿ ಜಾಫರ್ ಷರೀಫ್, ಜಗದೀಶ್ ಶೆಟ್ಟರ್, ಬಸವರಾಜ ಪಾಟೀಲ್ ಸೇಡಂ, ಬರಗೂರು ರಾಮಚಂದ್ರಪ್ಪ ಅವರೂ ಕೂಡಾ ರಕ್ಷಣಾ ಸಚಿವರಿಗೆ ಪತ್ರ ಬರೆಯುವ ಮೂಲಕ ಚಳುವಳಿಯನ್ನು ಬೆಂಬಲಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ಈ ರೀತಿ ಅಕ್ರಮವಾಗಿ ನೇಮಕಾತಿಗೊಂಡ ಪರರಾಜ್ಯದ ಅಭ್ಯರ್ಥಿಗಳು ಕೆಲಕಾಲದ ನಂತರ ತಂತಮ್ಮ ರಾಜ್ಯಗಳಿಗೆ ವರ್ಗಾವಣೆ ಪಡೆದುಕೊಂಡು ಹೋಗುವ ದಂಧೆ ನಿರಂತರವಾಗಿ  ನಡೆಯುತ್ತಿದೆ. ಇದಕ್ಕೆ  ಕನ್ನಡ  ವಿರೋಧಿ  ಅಧಿಕಾರಿಯಾದ ಲೆಫ್ಟಿನೆಂಟ್ ಕರ್ನಲ್ ಜೋಸೆಫ್ ಎಲ್ವಿಸ್ ಕುಟಿನ್ಹ್ ಅವರು ನೇರ ಹೊಣೆಗಾರರಾಗಿರುತ್ತಾರೆ. ಕನ್ನಡ, ಕನ್ನಡಿಗ, ಕರ್ನಾಟಕದ ಕುರಿತು ಅಪಾರ ಕಾಳಜಿ ಹೊಂದಿದವರಾದ ತಾವು ಈ ಕೂಡಲೇ ಮಧ್ಯಪ್ರವೇಶಿಸಿ ಆಗಿರುವ ಅನ್ಯಾಯವನ್ನು ಸರಿಪಡಿಸುವುದರ ಜೊತೆಗೆ ಮುಂದೆಂದೂ ಕನ್ನಡಿಗರಿಗೆ ಅನ್ಯಾಯವಾಗದಂತೆ ಸ್ಪಷ್ಟ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಹೊರಡಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಕರವೇ ಅಧ್ಯಕ್ಷ ನಾರಾಯಣಗೌಡರು ಮನವಿ ಮಾಡಿಕೊಂಡಿದ್ದಾರೆ.

More articles

Latest article