ದಸರಾ ಆಚರಣೆ ಮೂಲಕ ದ್ವೇಷ ಮರೆಯೋಣ:ಟೀಕಾಕಾರರ ಬಾಯಿ ಮುಚ್ಚಿಸಿದ ಬಾನು ಮುಷ್ತಾಕ್

Most read

ಮೈಸೂರು: ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಬೂಕರ್‌ ಪ್ರಶಸ್ತಿ ಪುರಸ್ಕೃತೆ ಸಾಹಿತಿ  ಬಾನು ಮುಷ್ತಾಕ್ ನಾಡಹಬ್ಬ ಮೈಸೂರು ದಸರಾ– 2025 ಕ್ಕೆ ಚಾಲನೆ ನೀಡಿದರು.

ಶುಭ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟಿಸಿ ನಾಡನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಾಯಿ ಚಾಮುಂಡೇಶ್ವರಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ. ದಸರಾ ಉದ್ಘಾಟನೆ ಕುರಿತು ಸಾಕಷ್ಟು ಏರುಪೇರು ಉಂಟಾಗಿತ್ತು. ಈ ಗೊಂದಲಗಳ ಮಧ್ಯೆ ನಾನು ದಸರಾ ಉದ್ಘಾಟಿಸಿದ್ದೇನೆ. ಇದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ ಎಂದು ತಮ್ಮ ಆನಂದವನ್ನು ಬಣ್ಣಿಸಿದರು. ಬೂಕರ್ ಪ್ರಶಸ್ತಿ ವೇಳೆ ನನ್ನ ಸ್ನೇಹಿತೆ ಹರಕೆ ಹೊತ್ತಿದ್ದರು. ಚಾಮುಂಡೇಶ್ವರಿ ದೇಗುಲಕ್ಕೆ ಕರೆತರುವ ಹರಕೆ ಹೊತ್ತಿದ್ದರು. ಆಗ ನಾನು ಬರಲು ಸಾಧ್ಯವಾಗಿರಲಿಲ್ಲ.ಸರ್ಕಾರದ ಮೂಲಕ ದೇವಿ ನನ್ನನ್ನು ಕರೆಸಿಕೊಂಡಿದ್ದಾಳೆ. ಇಂದು ನಾನು ಚಾಮುಂಡೇಶ್ವರಿ ಸನ್ನಿಧಿಯಲ್ಲಿದ್ದೇನೆ ಎಂದರು. ದಸರಾ ಎಂದರೆ ಕೇವಲ ಹಬ್ಬವಲ್ಲ. ನಾಡಿನ ನಾಡಿಮಿಡಿತ. ಇದು ಸಾಂಸ್ಕೃತಿಕ ಸಮನ್ವಯದ ಮೇಳ. ದಸರಾಗೆ ಐತಿಹಾಸಿಕ ಹಿನ್ನೆಲೆ ಇದೆ. ನಮ್ಮ ಸಂಸ್ಕೃತಿಯ ಪ್ರತೀಕ ದಸರಾ ಆಗಿದೆ.

ದಸರಾಗೆ ಉರ್ದು ಭಾಷೆಯಲ್ಲಿ ಸಿಲಿಂಗನ್ ಎನ್ನುತ್ತಾರೆ.  ನನ್ನ ಮಾವ ಮೈಸೂರು ಅರಸರ ಅಂಗರಕ್ಷಕರಾಗಿದ್ದರು. ಮಹಾರಾಜರು ಮುಸ್ಲಿಮರನ್ನು ಅನುಮಾನಿಸುತ್ತಿರಲಿಲ್ಲ. ಮುಸ್ಲಿಮರನ್ನು ನಂಬಿ ಅಂಗರಕ್ಷಕರನ್ನಾಗಿ ಮಾಡಿಕೊಂಡಿದ್ದ ಇತಿಹಾಸವನ್ನು ಮೆಲುಕು ಹಾಕಿದರು.

ಸಂಸ್ಕೃತಿ ಎಂದರೆ ಹೃದಯಗಳನ್ನು ಒಟ್ಟುಗೂಡಿಸುವ ಸೇತುವೆ. ನನ್ನ ಜೀವನ ಪಾಠಗಳು ಹೊಸ್ತಿಲ ಗಡಿಯಾಚೆ ದಾಟಿಲ್ಲ. ಈ ನೆಲದ ಸಂಸ್ಕೃತಿ ಎಲ್ಲರನ್ನೂ ಗೌರವಿಸುವ, ಪ್ರೀತಿಸುವ ಪಾಠ ಕಲಿಸಿದೆ. ಮೈಸೂರು ದಸರಾ ಶಾಂತಿ, ಸೌಹಾರ್ದತೆಯ ಉತ್ಸವ. ಈ ನೆಲದ ಹೂವುಗಳು ಸೌಹಾರ್ದತೆಯಿಂದ ಕೂಡಿವೆ. ದಸರಾ ಹಬ್ಬ ಮೈಸೂರು ನಗರಕ್ಕೆ ಸೀಮಿತವಾಗಬಾರದು. ಇಡೀ ಜಗತ್ತಿನಾದ್ಯಂತ ಮಾನವ ಕುಲಕ್ಕೆ ಶಾಂತಿ ಲಭ್ಯವಾಗಬೇಕು.

ನನ್ನ ಬದುಕು ನನಗೆ ಅನೇಕ ಪಾಠಗಳನ್ನು ಕಲಿಸಿದೆ.  ಇಂದಿನ ಜಗತ್ತು ಯುದ್ದದ ಜ್ವಾಲೆಯಲ್ಲಿ ಸುಡುತ್ತಿದೆ. ಹಗೆಯಿಂದ ಅಲ್ಲ ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು.  ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು. ಈ ಜಗತ್ತನ್ನು ಅಕ್ಷರದಿಂದ ಗೆಲ್ಲಬಹುದು ಎಂದು ಬಾನು ಮುಷ್ತಾಕ್ ಹೇಳಿದರು.

ಈ ದಸರಾದಿಂದ ದ್ವೇಷವನ್ನು ಕಡಿಮೆ ಮಾಡಿಕೊಳ್ಳೋಣ. ಈ ನೆಲದ ಹೂವುಗಳು ಐಕ್ಯತೆಯಿಂದ ಕೂಡಿರಲಿ. ಪ್ರೀತಿಯನ್ನ ಹರಡುವುದೇ ಸಂಸ್ಕೃತಿಯ ಉದ್ದೇಶ. ಈ ಮೂಲಕ ನಮ್ಮ ಬದುಕನ್ನು ಶ್ರೀಮಂತಗೊಳಿಸೋಣ. ಈ ನೆಲದ ಬಿಸಿಲು ಕೂಡ ಮಾನವತೆಯ ಪ್ರತೀಕ. ನಾವು ಮಾನವರಾಗಿ ಬದುಕಬೇಕು. ಮಾನವೀಯತೆಯ ಪ್ರೀತಿಯಲ್ಲಿ  ಬದುಕಿ ಬಾಳೋಣ ಎಂದರು.

ಆಗಸ ಯಾರನ್ನೂ ಸೇರಿಸಿಕೊಳ್ಳವುದಿಲ್ಲ. ಭೂಮಿ ಯಾರನ್ನೂ ಬಿಡುವುದಿ. ಇದು ಶಾಂತಿಯ ಹಬ್ಬ. ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದ ಸುಗಂಧವು ಐಕ್ಯತೆ ಆಗಲಿ ಎಂದು.

ನನಗೆ ಮಂಗಳಾರತಿ ಹೊಸದಲ್ಲ. ನಾನು ಪೂಜೆಯಲ್ಲಿ ಭಾಗಿಯಾಗಿದ್ದೇನೆ. ಮಂಗಳಾರತಿ ಸ್ವೀಕರಿಸಿದ್ದೇನೆ. ನನ್ನ ಹಾಗೂ ಹಿಂದೂ ಧರ್ಮದ ಬಗ್ಗೆ ಬಾಂಧವ್ಯ ಇದೆ. ನನ್ನ ಆತ್ಮಕತೆಯಲ್ಲಿ ಈ ಪ್ರಕರಣಗಳನ್ನು ಮೆಲುಕು ಹಾಕಿದ್ದೇನೆ. ವಿವಾದ ಬಂದರೂ ನನ್ನನ್ನು ದಿಟ್ಟತನದಿಂದ ಸಿಎಂ ಆಹ್ವಾನಿಸಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ತಮ್ಮ ಹಳೆಯ ಬಾಗಿನ ಕವನವನ್ನು ವಾಚಿಸಿದ ಅವರು ಮುಸ್ಲಿಂ ಹೆಣ್ಣು ಮಗಳು ಬಾಗಿನ ಸ್ವೀಕರಿಸಿದಾಗ ಆಕೆಯ ಮನಸ್ಸಿನ್ನಲಿ ಉಂಟಾಗುವ ಭಾವನೆಗಳನ್ನು ಬಣ್ಣಿಸಿದರು. ಈ ಮಣ್ಣಿನ ವಾರಸುದಾರಿಕೆ ಎಲ್ಲರಿಗೂ ಇದೆ. ನನ್ನ ಧಾರ್ಮಿಕ ನಂಬಿಕೆಗಳು ಮನೆಯ ಹೊಸ್ತಿಲು ದಾಟಲ್ಲ. ನನ್ನ ನಂಬಿಕೆಗಳು ಮನೆಗಷ್ಟೇ ಸೀಮಿತ ಎಂದು ಹೇಳಿದರು.

More articles

Latest article