ಮಂಗಳೂರು, ಸೆ.20 : ಕನ್ನಡ ಸಾಹಿತ್ಯ ಚಳುವಳಿಗಾರರ ಕುಟುಂಬದಲ್ಲಿ ಹುಟ್ಟಿ ಎಳವೆಯಿಂದಲೇ ಸಾಹಿತ್ಯ ವಲಯದ ನಿಕಟ ಸಂಪರ್ಕ ಹೊಂದಿದ್ದ ನಾನು ಕನ್ನಡ ,ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿಯ ವರೆಗೆ ಓದಿ ಬಳಿಕ ವಿಜ್ಞಾನ ವಿಭಾಗಕ್ಕೆ ಪೋಷಕರ ಬಯಕೆಯಂತೆ ಸೇರಿದಾಗ ತುಂಬಾ ಬೇಜಾರಾಗಿತ್ತು. ತರಗತಿಯಲ್ಲಿ ಇಂಗ್ಲಿಷ್ ನಲ್ಲಿ ಹೇಳುವ ವಿಜ್ಞಾನದ ಪದಗಳನ್ನು ಅರ್ಥಮಾಡಿಕೊಳ್ಳಲಾಗದ ಅಸಹಾಯಕತೆಯಲ್ಲಿ ಅತ್ತುಬಿಡುತ್ತಿದ್ದೆ. ಪದಕೋಶದ ಸಹಾಯದಿಂದ ಎಲ್ಲವನ್ನೂ ಕಲಿಯುತ್ತಾ ಬಂದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಇಂಜಿನೀಯರಿಂಗ್ ಶಿಕ್ಷಣ ಪಡೆದು ಎಂಬಿಎ ಗೆ ಸೇರಿದೆ. ಆಗ ಹಾಸನದ ಇಸ್ರೋ ಸಂಸ್ಥೆಯಲ್ಲಿ ಅಪ್ರೆಂಟಿಸ್ ಟ್ರೈನಿಯಾಗಿ ಸೇರಲು ಅವಕಾಶ ದೊರಕಿತು. ಬಳಿಕ 1997ರಲ್ಲಿ ಬೆಂಗಳೂರಿನ ಪೀಣ್ಯದಲ್ಲಿ ವಿಜ್ಞಾನಿಯಾಗಿ ಇಸ್ರೋ ಸೇರಿ ಹತ್ತು ವರ್ಷಗಳ ಕಾಲ ಉಪಗ್ರಹ ನಿರ್ವಹಣೆ ಮಾಡಿದೆ ಎಂದು ಇಸ್ರೋದ ಉಪ ಪ್ರಧಾನ ವ್ಯವಸ್ಥಾಪಕಿ, ಬಾಹ್ಯಾಕಾಶ ವಿಜ್ಞಾನಿ ರೂಪಾ ಮಳಲಿ ತಮ್ಮ ಸಾಧನೆಯ ಹಾದಿಯ ಆರಂಭಿಕ ಹೆಜ್ಜೆಗಳನ್ನು ತೆರೆದಿಟ್ಟರು.
ಅವರು ಮಂಗಳೂರಿನಲ್ಲಿರುವ ಕರಾವಳಿ ಲೇಖಕಿ ವಾಚಕಿಯರ ಸಂಘ (ರಿ) ಮತ್ತು ಮೈಸೂರಿನ ಸಮತಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆಯುತ್ತಿರುವ ಸಾಧಕಿಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು.
10 ವರ್ಷಗಳ ಕಾಲ ಉಪಗ್ರಹ ನಿರ್ವಹಣೆಯ ಬಳಿಕ ಸ್ಪೇಸ್ ರೆಕವರಿ ಕ್ಯಾಪ್ಸೂಲ್ ಎಂಬ 13 ದಿನಗಳ ಉಪಗ್ರಹವನ್ನು ಸುಸೂತ್ರವಾಗಿ ಇಳಿಸುವ ತಂಡದಲ್ಲಿ ಕಾರ್ಯ ನಿರ್ವಹಿಸುವ ಅವಕಾಶವು ಸಾಕಷ್ಟು ಸವಾಲಿನದಾಗಿದ್ದು ಅದು ಮತ್ತಷ್ಟೂ ಪ್ರೇರಣೆ ಒದಗಿಸಿತು. ಇಲ್ಲಿಯ ಅನುಭವ ಓಶ್ಯನ್ ಸ್ಯಾಟ್ ಉಪಗ್ರಹದ ನಿರ್ವಹಣೆಯ ಅವಕಾಶವನ್ನು ಕಲ್ಪಿಸಿತು. ಅಪಾರ ಅಧ್ಯಯನ ಬೇಡುವ ಈ ಅನುಭವದಿಂದ ನಿರ್ವಹಣಾ ವ್ಯವಸ್ಥಾಪಕಿಯಾಗಿ ಉನ್ನತ ಹುದ್ದೆಗೇರಲು ಸಾಧ್ಯವಾಯಿತು. ಆ ಬಳಿಕ ಮಂಗಳಯಾನ, ಚಂದ್ರಯಾನದ ಉಪಗ್ರಹಗಳ ಉಡಾವಣೆಯ ತಂಡದಲ್ಲಿ ದೊರೆತ ಅವಕಾಶವು ಬಹಳ ಸವಾಲಿನದಾಗಿದ್ದು ಬಹಳಷ್ಟು ಖುಷಿ ತಂದಿದೆ ಎಂದವರು ವಿವರಿಸಿದರು.
ಸಮುದ್ರದ ಪಾಚಿ ಮೀನಿಗೆ ಆಹಾರವಾಗಿದೆ. ಉಪಗ್ರಹದ ಮೂಲಕ ಮೀನಿರುವ ಜಾಗವನ್ನು ಚಿತ್ರಿಸಿ ಮೀನುಗಾರರಿಗೆ ಕಳಿಸಿದಾಗ ಮೀನುಗಾರರ 40 % ಆದಾಯ ಇದರಿಂದಾಗಿ ಹೆಚ್ಚಿತು. ಸಮುದ್ರದ ಸಣ್ಣ ಅಲೆಯನ್ನು ಗಮನಿಸಿ ಚಂಡಮಾರುತದ ಚಲನೆಯನ್ನು ಗಮನಿಸಿ ಜನರಿಗೆ ತಿಳಿಸಿದ ಕಾರಣವಾಗಿ ಹಲವಾರು ಜೀವಗಳು ಉಳಿದವು ಎಂದು ಇಸ್ರೋದಲ್ಲಿ ತಾನು ನಿರ್ವಹಿಸಿದ ಕೆಲಸದ ತುಣುಕುಗಳನ್ನು ಪರಿಚಯಿಸಿದರು.
1950-60ರ ದಶಕದಲ್ಲಿ ನಾಸಾದಲ್ಲಿಯೂ ಮಹಿಳಾ ವಿಜ್ಞಾನಿಗಳನ್ನು ಕಡೆಗಣಿಸಲಾಗುತ್ತಿತ್ತು. ನಾಸಾ ಕಟ್ಟಡದಲ್ಲಿ ಐದು ಮಂದಿ ಮಹಿಳಾ ಗಣಿತಜ್ಞರು ಯಾವ ಮೂಲಭೂತ ಸೌಕರ್ಯಗಳಿಲ್ಲದೆ ಮಾನವ ಸಹಿತ ಉಪಗ್ರಹ ಉಡಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗಿದ್ದರೂ ವರ್ಣ ತಾರತಮ್ಯದ ಜತೆ ಮಹಿಳೆಯರೆಂಬ ಕೀಳರಿಮೆಯನ್ನೂ ಅನುಭವಿಸಬೇಕಾಗಿತ್ತು. ಆದರೆ ಇದೀಗ ಜಗತ್ತು ಬದಲಾಗಿದ್ದರೂ ಕೆಲವೊಮ್ಮೆ ಮಹಿಳೆಯರು ತಮ್ಮನ್ನು ತುಳಿಯುವ ಕೆಲ ಮನಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಾ ಪ್ರೇಕ್ಷಕರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು . ಹಗಲು ರಾತ್ರೆ ಯೆನ್ನದೆ ದುಡಿಯಬೇಕಾದ ಇಲ್ಲಿಯ ದುಡಿಮೆಯಿಂದಾಗಿ ಮಹಿಳೆಯರಿಗೆ ಕೌಟುಂಬಿಕ ಸಂಬಂಧಗಳನ್ನು ಆಪ್ತತೆಯಿಂದ ಕಾಯ್ದುಕೊಳ್ಳುವುದು ಅತಿ ಸವಾಲಿನದಾಗಿದ್ದು ಕುಟುಂಬದವರ ಬೆಂಬಲವಿದ್ದರೆ ಮಾತ್ರ ಸಾಧನೆ ಸಾಧ್ಯ ಎಂದು ಹೇಳಿದರು.
ರೂಪಾ ಮಳಲಿ ಅವರೊಂದಿಗಿನ ಸಂವಾದವನ್ನು ಪ್ರೊ. ಆರ್. ಸುನಂದಮ್ಮ ಹಾಗೂ ಸುಖಲಾಕ್ಷಿ ಸುವರ್ಣ ನಿರ್ವಹಿಸಿದರು.
ಎರಡು ದಿನಗಳ ಕಾಲ ನಡೆಯಲಿರುವ ‘ಸಾಧಕಿಯರೊಂದಿಗೆ ಸಂವಾದ’ ಕಾರ್ಯಕ್ರಮದ ಉದ್ಘಾಟನೆಯು ವಿಶಿಷ್ಟವಾಗಿತ್ತು. ಹೇಮಾ ಪೈ , ಆಕೃತಿ ಭಟ್ ಮತ್ತು ಮೋಲಿ ಮಿರಾಂದ ಅವರ ಪರಿಕಲ್ಪನೆಯ ಚೆನ್ನು ಕುಣಿತ ಕಾರ್ಯಕ್ರಮಕ್ಕೆ ಸಂಭ್ರಮದ ಮುನ್ನುಡಿ ಬರೆಯಿತು. ಹಿರಿಯ ಲೇಖಕಿ ಎ.ಪಿ. ಮಾಲತಿಯವರು ಚೆನ್ನು ಕುಣಿತದ ತಂಡದ ಜೋಳಿಗೆಗೆ ತೆಂಗಿನಕಾಯಿ ಮತ್ತು ಅಕ್ಕಿಯನ್ನು ಹಾಕುವ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಉದ್ಘಾಟನೆ ನೆರವೇರಿಸಿದರು
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ವಹಿಸಿದ್ದು, ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶೋಧಾ ಮೋಹನ್ ಸ್ವಾಗತಿಸಿದರು. ಜ್ಯೋತಿ ಚೇಳ್ಯಾರು ಕಾರ್ಯಕ್ರಮ ನಿರೂಪಿಸಿದರು.
ಅಪರಾಹ್ನದ ಗೋಷ್ಠಿಗಳಲ್ಲಿ ಸೋಲಿಗ ಸಮುದಾಯದ ಡಾ. ರತ್ನಮ್ಮ, ಟ್ರಾನ್ಸ್ ಜೆಂಡರ್ ಅನಿ, ಮಂಗಳೂರು ಅವರ ಸಾಧನೆಗಳ ಅವಲೋಕನ ಮತ್ತು ಸಂವಾದ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ- http://ಅದೊಂದು ದೊಡ್ಡ ಕತೆ-ಆತ್ಮಕಥನ ಸರಣಿ -3 https://kannadaplanet.com/its-a-big-story-autobiography-series-part-3/