ಕುಣಿಗಲ್: ಬೆಂಗಳೂರಿನ ರೇಸ್ ಕೋರ್ಸ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಪಶು ಸಂಗೋಪನಾ ಸಚಿವ ವೆಂಕಟೇಶ್ ಹೇಳಿದ್ದಾರೆ.
ಅವರು ಕುಣಿಗಲ್ ಸ್ಟಡ್ ಫಾರಂಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕುದುರೆ ಫಾರಂ ಜಾಗತಿಕ ಟೆಂಡರ್ ಮೂಲಕ ಪೂನಾವಾಲ ಕಂಪನಿಯು ಸ್ಟಡ್ ಫಾರಂ ಅನ್ನು ಪಡದುಕೊಂಡಿದ್ದರೂ ತಾಂತ್ರಿಕ ಕಾರಣಗಳಿಗಾಗಿ ರದ್ದಾಗಿತ್ತು. ಮತ್ತೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದರು. ಮುಂದೆ ಯಾವ ಕ್ರಮ ಅನುಸರಿಸಬೇಕು ಎಂದು ನಿರ್ಧರಿಸಿಲ್ಲವಾದರೂ ಸ್ಥಳಾಂತರಿಸಲು ಸರ್ಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಒಲವು ತೋರಿಸಿದ್ದಾರೆ ಎಂದು ಹೇಳಿದರು.
ಈ ಸ್ಥಳವನ್ನುಈಗಾಗಲೇ ಬೆಂಗಳೂರು ಟರ್ಫ್ ಕ್ಲಬ್ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೆಂಗಳೂರಿನ ಹೃದಯಭಾಗದಲ್ಲಿರುವ ರೇಸ್ ಕೋರ್ಸ್ ಅನ್ನು ಸ್ಥಳಾಂತರಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಇದೆ. ಈ ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆ ಅಥವಾ ಉದ್ಯಾನವನ ನಿರ್ಮಿಸಬೇಕು ಎಂದೂ ಆಗ್ರಹಪಡಿಸಲಾಗುತ್ತಿದೆ.