ಬೆಳಗಾವಿ: ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆಯನ್ನು ರಚಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಈ ವರ್ಷಾಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದೂ ಹೇಳಿದ್ದಾರೆ.
ಇತ್ತೀಚೆಗೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು ಸಚಿವೆ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿದರು. ಜತೆಗೆ ವಿಧಾನಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೋಳಿ ಮತ್ತು ಮಾಜಿ ಶಾಸಕ ಮಹಾಂತೇಶ್ ಕವಟಗಿಮಠ ಅವರೂ ಪ್ರತ್ಯೇಕ ಜಿಲ್ಲೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಸರ್ಕಾರದ ಯೋಜನೆಗಳ ಪ್ರಯೋಜನಗಳು ಕಟ್ಟಕಡೆ ಸಾಮಾನ್ಯನಿಗೂ ತಲುಪಬೇಕಾದರೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಲು ಪ್ರಕ್ರಿಯೆ ಆರಂಭಿಸಿದೆ ಎಂದೂ ತಿಳಿಸಿದರು.