ಕೋಲಾರ: ಹೈಕೋರ್ಟ್ ಆದೇಶದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಗಳ ಎಣಿಕೆ ನಡೆದು ತಮ್ಮ ಎದುರಾಳಿ ಕೆ.ಎಸ್.ಮಂಜುನಾಥಗೌಡ ಗೆದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಸವಾಲು ಹಾಕಿದ್ದಾರೆ.
ಮಂಜುನಾಥಗೌಡರ ಸವಾಲಿಗೆ ಉತ್ತರಿಸಿದ ಅವರು ಮರು ಮತ ಎಣಿಕೆ ನಡೆದರೂ ಹೊಸದಾಗಿ ಚುನಾವಣೆ ನಡೆದರೂ ಆತನಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ವಾಗ್ದಾಳಿ ನಡೆಸಿದರು.
ಹೈಕೋರ್ಟ್ ನನ್ನ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ. ಈ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ನನಗೆ ಅವಕಾಶ ಇದೆ. ಮೊರೆ ಹೋಗುತ್ತಿದ್ದೇನೆ. ಹೈಕೋರ್ಟ್ ನ ಇಡೀ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದರು.
ಮಾಲೂರಿನಲ್ಲಿ ಮತ ಕಳ್ಳತನ ನಡೆದಿದೆ ಎನ್ನುವುದು ಅಪ್ಪಟ ಸುಳ್ಳು. 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಇದ್ದದ್ದು ಅವರದ್ದೇ ಬಿಜೆಪಿ ಸರ್ಕಾರ. ಅಧಿಕಾರಿಗಳು ಪೊಲೀಸರು ನಮ್ಮ ಪರವಾಗಿ ಇರಲಿಲ್ಲ. ಮತ ಎಣಿಕೆ ನಡೆಯುವಾಗ ನಾನು ಮನೆಯಲ್ಲಿ ಟಿ.ವಿ ನೋಡುತಿದ್ದೆ. ಅಂತಿಮವಾಗಿ ಆತನ ಮನವಿಯಂತೆ ಜಿಲ್ಲಾ ಚುನಾವಣಾಧಿಕಾರಿಗಳು ವಿ.ವಿ ಪ್ಯಾಟ್ ತಾಳೆ ಮಾಡಲು ಲಾಟರಿ ಎತ್ತಿ ನಂತರ ಫಲಿತಾಂಶ ಪ್ರಕಟಿಸಿದರು. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದರು.
ಆತನನ್ನು ಹೊಸಕೋಟೆಯಿಂದ ಕರೆತಂದು ಮಾಲೂರು ಕ್ಷೇತ್ರದಲ್ಲಿ ಗೆಲ್ಲಿಸಿದ್ದೆ. ಆದರೆ, ಈಗ ಆತನಿಗೆ ಹುಚ್ಚು ಹಿಡಿದಂತೆ ಆಡುತ್ತಿದ್ದಾನೆ. ಮಾಲೂರು ಕ್ಷೇತ್ರಕ್ಕೆ ಈಗ ಶಾಸಕರು ಇಲ್ಲ ಎಂದರೆ ಹೇಗೆ? ಹೈಕೋರ್ಟ್ ತನ್ನ ಆದೇಶಕ್ಕೆ 30 ದಿನಗಳ ತಡೆಯಾಜ್ಞೆ ನೀಡಿದೆ. ಮಾಲೂರಿಗೆ ನಾನೇ ಶಾಸಕ. ಅವರಂತೆ ನಾನು ಅಲ್ಲ ಎಂದು ತಿರುಗೇಟು ನೀಡಿದರು.