ಬೆಂಗಳೂರು: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ ಡಿಆರ್ ಎಫ್) ನಿಯಮಾವಳಿಗಳನ್ನು ಪರಿಷ್ಕರಿಸಿ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಯಾವುದೇ ಭರವಸೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಕೆಲವು ಭಾಗಗಳಲ್ಲಿ ಬೆಳೆ ಹಾನಿಯೂ ಆಗಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ನೇತೃತ್ವದಲ್ಲಿ ಜಂಟಿ ಸಮಿತಿಗೆ ಆದೇಶ ನೀಡಲಾಗಿದೆ. ಈ ಇಲಾಖೆಗಳು ವರದಿ ಸಲ್ಲಿಸಿದ ನಂತರ ಸೂಕ್ತ ಕ್ರಮ ತೆಗದುಕೊಳ್ಳುವುದಾಗಿಯೂ ಅವರು ತಿಳಿಸಿದರು.
ಅಧ್ಯಯನದ ಪ್ರಾಥಮಿಕ ವರದಿ ನಮ್ಮ ಕೈ ಸೇರಿಲ್ಲ. ಮಳೆ ಸುರಿಯುತ್ತಿರುವುದರಿಂದ ಬೆಳೆ ಸಮೀಕ್ಷೆಗೆ ಹಿನ್ನಡೆಯಾಗಿದೆ. ವರದಿ ಬಂದ ಬಳಿಕ ಪರಿಹಾರ ಕುರಿತು ತೀರ್ಮಾನ ಮಾಡಲಾಗುತ್ತದೆ. ಬೆಳೆ ನಷ್ಟ ಅಂದಾಜು ಮಾಡಿ ವಿಮಾ ಕಂಪನಿಗಳು ಪರಿಹಾರ ವಿತರಿಸಲಿವೆ ಎಂದರು.
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ಸೆ. 22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದ್ದು, ಇದಕ್ಕಾಗಿ 1.75 ಲಕ್ಷ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಹಿಂದೂ ಧರ್ಮದವರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಬಗ್ಗೆ ಬಿಜೆಪಿ ಗೊಂದಲ ಮೂಡಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಕ್ರಿಶ್ಚಿಯನ್ನರು, ಮುಸ್ಲಿಮರು ಈ ದೇಶದ ಪ್ರಜೆಗಳಲ್ಲವೇ ಎಂದು ಪ್ರಶ್ನಿಸಿದರು.
ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಪ್ರತಿ ಮನೆಗೆ ಹೋದಾಗ ಅವರು ಯಾವ ಜಾತಿ ಬರೆಸುತ್ತಾರೋ ಅದನ್ನು ದಾಖಲಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.