ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ ಬಿಐ) ನಿನ್ನೆ ಸಂಜೆ 7 ಗಂಟೆಗೆ ಮುಸುಕು ಧರಿಸಿದ ಸುಮಾರು ಎಂಟು ದರೋಡೆಕೋರರು 1 ಕೋಟಿ ರೂ ನಗದು ಮತ್ತು 12-13 ಕೆಜಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಅಕೌಂಟ್ ಓಪನ್ ಮಾಡುವ ನೆಪದಲ್ಲಿ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ಬ್ಯಾಂಕ್ ಪ್ರವೇಶಿಸುತ್ತಾನೆ. ಆಗ ಮ್ಯಾನೇಜರ್ ಫಾರ್ಮ್ ಸರಿಯಾಗಿ ಭರ್ತಿ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಪಿಸ್ತೂಲು ಹಿಡಿದು ಹೆದರಿಸಿ ಹಣ ಕೊಡಲು ಬೇಡಿಕೆ ಇಟ್ಟು, ಹಣ, ಚಿನ್ನ ಕೊಡದಿದ್ದರೆ ಸಾಯಿಸುವುದಾಗಿ ಬೆದರಿಕೆ ಹಾಕುತ್ತಾನೆ. ಇವರು ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ ಸಿನೀಮಯ ರೀತಿಯಲ್ಲಿ ದರೋಡೆ ಮಾಡಿದ್ದಾರೆ.
ಚಡಚಣ ಪಟ್ಟಣ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿದ್ದು, ದರೋಡೆಕೋರರು ಈ ರಾಜ್ಯ ಪ್ರವೇಶಿಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಸದಾ ಜನಜಂಗುಳಿ ಇರುವ ಎಸ್‌ಬಿಐ ಶಾಖೆಯ ನೌಕರರು ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಸಿದ್ದರಾಗುತ್ತಿರುವಾಗ ಮಿಲಿಟರಿ ಬಣ್ಣದ ಬಟ್ಟೆ ಧರಿಸಿದ್ದ ದರೋಡೆಕೋರರು ಮುಖ್ಯ ದ್ವಾರದ ಮೂಲಕ ಬ್ಯಾಂಕ್ ಪ್ರವೇಶಿಸಿದ್ದಾರೆ. ನಂತರ ನಾಡ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಬ್ಯಾಂಕ್ ವ್ಯವಸ್ಥಾಪಕ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ ದರೋಡೆ ನಡೆಸಿದ್ದಾರೆ.
ನಂತರ ದರೋಡೆಕೋರರು ಕಳವು ಮಾಡಿದ ಚಿನ್ನಾಭರಣವನ್ನು ವಾಹನಗಳಲ್ಲಿ ತುಂಬಿಸಿಕೊಂಡು ಮಹಾರಾಷ್ಟ್ರದತ್ತ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್ ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದು, ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರದತ್ತ ತೆರಳುತ್ತಿದ್ದ ದರೋಡೆಕೋರರ ಕಾರು ಹುಲಿಜಂತಿ ಎಂಬಲ್ಲಿ ಕುರಿ, ಜನರಿಗೆ ಡಿಕ್ಕಿ ಹೊಡೆದಿದೆ. ಆಗ ಗ್ರಾಮಸ್ಥರು ಅಡ್ಡ ಹಾಕಿದಾಗ ದರೋಡೆಕೋರರು ಕಾರು ಬಿಟ್ಟು ನಗ ನಾಣ್ಯದೊಂದಿಗೆ ಪರಾರಿಯಾಗಿದ್ದಾರೆ.