ಪಾಕಿಸ್ತಾನ, ಮುಸ್ಲಿಂ ಬಿಟ್ಟು ಮಾತನಾಡಿ; ಬಿಜೆಪಿಗೆ ಸಚಿವ ಸಂತೋಷ್‌ ಲಾಡ್‌ ಸವಾಲು

Most read

ಬೆಂಗಳೂರು: ಪಾಕಿಸ್ತಾನ, ಮುಸ್ಲಿಂ ಎರಡು ವಿಷಯ ಬಿಟ್ಟರೆ ಬಿಜೆಪಿಯವರಿಗೆ ಮಾತನಾಡಲು ಮತ್ತು ರಾಜಕೀಯ ಮಾಡಲು ಬೇರೆ ವಿಷಯಗಳೇ ಇಲ್ಲ ಎಂದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್‌ ದಾಳಿ ನಡೆದಾಗ ಪ್ರಧಾನಿ ಮೋದಿ ಅವರು ನೀರು ಮತ್ತು ರಕ್ತ ಏಕಾಕಾಲಕ್ಕೆ ಹರಿಯಲು ಸಾಧ್ಯವಿಲ್ಲ ಎಂದು ಭಾಷಣ ಮಾಡಿದ್ದರು. ಈಗ ಪಾಕಿಸ್ತಾನದ ಜೊತೆ ಕ್ರಿಕೆಟ್‌ ಆಡುತ್ತಿದ್ದಾರೆ. ಈ ವಿಷಯ ಕುರಿತು ಮೋದಿ ಅವರನ್ನು ಪ್ರಶ್ನಿಸುವ ಧೈರ್ಯ ಇದೆಯೇ ಎಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದರು.

ಪಾಕಿಸ್ತಾನದ ಜತೆಗಿನ ಎಲ್ಲಾ ವ್ಯಾಪಾರ ವಹಿವಾಟು ನಿಲ್ಲಿಸಿಬಿಡುತ್ತೇವೆ, ಪಾಕಿಸ್ತಾನವನ್ನು ಮುಗಿಸಿಯೇ ಬಿಡುತ್ತೇವೆ ಎಂದು ಭಾಷಣ ಮಾಡಿದ ಅವರು ಈಗ ಏನು ಮಾಡುತ್ತಿದ್ದಾರೆ? ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರ ಪುತ್ರ ಜೈ ಷಾ ಅವರ ಅಧ್ಯಕ್ಷತೆಯಲ್ಲಿರುವ ಭಾರತೀಯ ಕ್ರಿಕೆಟ್‌ ಮಂಡಳಿ ಪಾಕಿಸ್ತಾನದ ಜೊತೆ ನಮ್ಮ ತಂಡ ಆಟವಾಡಲು ಅವಕಾಶ ನೀಡಿದೆ. ಇದನ್ನು ವಿರೋಧಿಸಲು ಬಿಜೆಪಿಯವರು ಶಕ್ತಿ ಇಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಏನೂ ಮಾಡಿದರೂ ಸರಿ, ಕಾಂಗ್ರೆಸ್‌ ಒಳ್ಳೆಯದನ್ನು ಮಾಡಿದರೂ ಕೆಟ್ಟದ್ದು ಎಂಬ ಪರಿಸ್ಥಿತಿ ಇದೆ.ಕಾಂಗ್ರೆಸ್‌ ನ ಪ್ರತಿಯೊಂದು ಕೆಲಸದಲ್ಲೂ ಮುಸಲ್ಮಾನ, ಪಾಕಿಸ್ತಾನ ಎಂಬ ಹುಳುಕನ್ನು ಹುಡುಕಿ ಟೀಕೆ ಮಾಡುತ್ತಾರೆ. ಇದೇ ಬಿಜೆಪಿಯವರ ಜೀವಾಳ. ಇದನ್ನು ಬಿಟ್ಟರೆ ಅವರಿಗೆ ಬದುಕಿಲ್ಲ ಎಂದು ಕಿಡಿ ಕಾರಿದರು.

More articles

Latest article