ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಕಳೆದ 15 ವರ್ಷಗಳಿಂದಲೂ ಹಿಂದಿ ದಿವಸ್ ಕಾರ್ಯಕ್ರಮಗಳನ್ನು ವಿರೋಧಿಸುತ್ತಲೇ ಬಂದಿದೆ. ಕರವೇ ಹೋರಾಟದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರತಿ ಸೆಪ್ಟೆಂಬರ್ 14ರಂದು ಒಕ್ಕೂಟ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಹಿಂದಿ ದಿವಸ ಆಚರಣೆಗೆ ಕಡಿವಾಣ ಬಿದ್ದಿತ್ತು. ಆದರೆ ನಿನ್ನೆ ರೈಲ್ವೆ ಇಲಾಖೆ ಬೆಂಗಳೂರಿನ ಗಾಂಧಿನಗರದ ಖಾಸಗಿ ಹೋಟೆಲ್ ಒಂದರಲ್ಲಿ ಕದ್ದುಮುಚ್ಚಿ ಹಿಂದಿ ದಿವಸ್ ಆಚರಣೆಗೆ ಮುಂದಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ನಮ್ಮ ಕರವೇ ಮಹಿಳಾ ಘಟಕದ ಮುಖಂಡರು, ಕಾರ್ಯಕರ್ತೆಯರು ಅಲ್ಲಿಗೆ ಧಾವಿಸಿ ಪೋಸ್ಟರ್ ಗಳನ್ನು ಹರಿದೆಸೆದು ಕಾರ್ಯಕ್ರಮವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ದುರಂತೆವೆಂದರೆ ಈ ಅನ್ಯಾಯದ, ಕನ್ನಡಿಗರ ಮೇಲಿನ ಆಕ್ರಮಣದ ಕಾರ್ಯಕ್ರಮವನ್ನು ನಿಲ್ಲಿಸಿದಕ್ಕಾಗಿ ಕರವೇ ಕಾರ್ಯಕರ್ತೆಯರ ಮೇಲೆ ಉಪ್ಪಾರಪೇಟೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಪ್ರತಿಪಾದಿಸಿದರೆ ನಮ್ಮ ಮೇಲೆ ಎಫ್ ಐ ಆರ್ ಗಳು ದಾಖಲಾಗುತ್ತವೆ. ನಮ್ಮ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ತಮ್ಮನ್ನು ತಾವು ಕನ್ನಡಪ್ರೇಮಿಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ಕನ್ನಡ ಕಾರ್ಯಕರ್ತರ ಮೇಲೆ ಮನಸಿಗೆ ಬಂದಂತೆ ಮೊಕದ್ದಮೆಗಳನ್ನು ದಾಖಲಿಸಲಾಗುತ್ತದೆ. ಇದಕ್ಕೆ ನಾವು ಅಂಜುವುದಿಲ್ಲ. ಇಂಥ ಸಾವಿರ ಎಫ್ ಐಆರ್ ಹಾಕಿದರೂ ಬೆದರುವ ಪ್ರಶ್ನೆಯೇ ಇಲ್ಲ. ಹಿಂದಿ ಹೇರಿಕೆ ವಿರುದ್ಧ ನಮ್ಮ ಹೋರಾಟವನ್ನು ನಾವು ನಿರಂತರವಾಗಿ ಮುಂದುವರೆಸುತ್ತೇವೆ ಎಂದು ಗೌಡರು ಗುಡುಗಿದ್ದಾರೆ.
ಒಂದು ಭಾಷೆಯಾಗಿ ಹಿಂದಿ ಕುರಿತು ನಮ್ಮ ದ್ವೇಷ, ಅಸಹನೆ, ಕೋಪ ಯಾವುದೂ ಇಲ್ಲ. ಅದೂ ಕೂಡ ಕನ್ನಡ, ತಮಿಳು, ತೆಲುಗು, ಬಂಗಾಳಿಯಂತೆ ಒಂದು ಭಾರತೀಯ ಭಾಷೆ ಅಷ್ಟೇ. ಆದರೆ ಅದನ್ನು ದೇಶದ ಎಲ್ಲ ಭಾಷಿಕರ ಮೇಲೆ ಹೇರುವುದು ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಯ ಪ್ರತೀಕ. ಇದನ್ನು ನಾವು ಯಾವತ್ತೂ ಸಹಿಸಿಕೊಂಡಿಲ್ಲ, ಮುಂದೆಯೂ ಸಹಿಸಿಕೊಳ್ಳುವುದಿಲ್ಲ. ಹಿಂದಿ ಹೇರಿಕೆಯಿಂದಾಗಿ ದೇಶದ ಬಹುತ್ವಕ್ಕೆ ಧಕ್ಕೆಯಾಗುತ್ತಿದೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಒಂದು ಭಾಷೆಯನ್ನು ಹೇರುವ ಮೂಲಕ ದೇಶವನ್ನು ಒಡೆಯುವ ಸಂಚನ್ನು ನಾವು ಸಹಿಸುವುದಿಲ್ಲ.
ಹಿಂದಿ ಹೇರಿಕೆ ವಿರುದ್ಧ ಸತತ ಅಭಿಯಾನಗಳನ್ನು ನಡೆಸುತ್ತ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾದ ಚಳವಳಿಯನ್ನು ಹಮ್ಮಿಕೊಳ್ಳಲಿದೆ. ಹಿಂದಿ ಹೇರಿಕೆಯಿಂದ ಬಾಧಿತರಾದ ದೇಶದ ಇನ್ನಿತರ ಭಾಷೆಗಳನ್ನು ಮಾತನಾಡುವ ಜನರನ್ನು ಒಗ್ಗೂಡಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಇದಕ್ಕಾಗಿ ಬೆಂಗಳೂರಿನಲ್ಲಿ ಹಿಂದಿಯೇತರ ಭಾಷಿಕ ಹೋರಾಟಗಾರರ ಸಮಾವೇಶವನ್ನು ಸದ್ಯದಲ್ಲೇ ಆಯೋಜಿಸಲಿದ್ದೇವೆ. ಒಕ್ಕೂಟ ಸರ್ಕಾರ ಹಿಂದಿಹೇರಿಕೆಯನ್ನು ಕೂಡಲೇ ನಿಲ್ಲಿಸದಿದ್ದರೆ ಈ ಚಳವಳಿ ಯಾವ ಸ್ವರೂಪಕ್ಕಾದರೂ ತಿರುಗಬಹುದು. ಈ ಎಚ್ಚರಿಕೆಯನ್ನು ನಾವು ನೀಡಬಯಸುತ್ತೇವೆ.
ಭಾರತ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ಪರಿಚ್ಛೇದ 8ರಲ್ಲಿ ಗುರುತಿಸಲಾಗಿರುವ ಎಲ್ಲ ಭಾಷೆಗಳನ್ನೂ ಒಕ್ಕೂಟ ಸರ್ಕಾರದ ಆಡಳಿತ ಭಾಷೆಗಳನ್ನಾಗಿ ಘೋಷಿಸಬೇಕು. ಕೇವಲ ಹಿಂದಿ ಮತ್ತು ಇಂಗ್ಲಿಷ್ ನುಡಿಗಳಿಗೆ ನೀಡಿರುವ ಈ ಸ್ಥಾನಮಾನವನ್ನು ಕನ್ನಡವೂ ಸೇರಿದಂತೆ ದೇಶದ ಎಲ್ಲ ನುಡಿಗಳಿಗೂ ವಿಸ್ತರಿಸಬೇಕು. ಹಿಂದಿ ಭಾಷೆಗೆ ನೀಡಿರುವ ಹೆಚ್ಚುಗಾರಿಕೆಯನ್ನು ಕೂಡಲೇ ಕಿತ್ತುಹಾಕಬೇಕು. ಇದು ನಮ್ಮ ಅಂತಿಮ ಗುರಿ. ಇದು ಆಗುವವರೆಗೂ ನಮ್ಮ ಚಳವಳಿ ನಡೆಯಲಿದೆ ಎಂದು ನಾರಾಯಣಗೌಡರು ತಿಳಿಸಿದ್ದಾರೆ.