ಗೌತಮ್ ಅದಾನಿಗೆ 1ರೂ.ನಂತೆ 1,000 ಎಕರೆ ಭೂಮಿ ಹಂಚಿಕೆ; ಅದಾನಿಗೆ ಮೋದಿ ಸರ್ಕಾರ ಗಿಫ್ಟ್:‌ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Most read

ನವದೆಹಲಿ: ವಿದ್ಯುತ್ ಯೋಜನೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಸ್ನೇಹಿತ ಗೌತಮ್ ಅದಾನಿಗೆ ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಸರ್ಕಾರವು ಒಂದು ಎಕರೆಗೆ 1ರೂ.ರಂತೆ 1,050 ಎಕರೆ ಭೂಮಿಯನ್ನು 33 ವರ್ಷಗಳಿಗೆ ಗುತ್ತಿಗೆ ನೀಡಲು ಮುಂದಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ವಿವರ ಹಂಚಿಕೊಂಡ ಪಕ್ಷದ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, ಈ ಭೂಮಿ ಹಂಚಿಕೆ ಮೂಲಕ ಬಿಹಾರದ ನಾಗರೀಕರಿಗೆ ಪ್ರತಿ ಯೂನಿಟ್‌ಗೆ ರೂ.6.75ರಂತೆ ವಿದ್ಯುತ್ ಮಾರಾಟ ಮಾಡಲು ಅವಕಾಶ ನೀಡುತ್ತಿದೆ. ಇದು ನಿಜಕ್ಕೂ ಡಬಲ್ ಲೂಟಿ ಆಗಿದೆ ಎಂದು ವಾಗ್ದಾಳಿ ನಡಸಿದರು.

ಪ್ರಧಾನಿ ಮೋದಿ ಅವರು ತಮ್ಮ ಪರಮಾಪ್ತನಿಗೆ ರೂ. 21,400 ಕೋಟಿ ವೆಚ್ಚದ 2,400 ಮೆಗಾವ್ಯಾಟ್ ವಿದ್ಯುತ್ ಯೋಜನೆಗಾಗಿ ಅದಾನಿ ಅವರಿಗೆ 1,050 ಎಕರೆ ಭೂಮಿ ಮತ್ತು ಒಂದು ವರ್ಷಕ್ಕೆ ಒಂದು ರೂ.ನಂತೆ 10 ಲಕ್ಷ ಮರಗಳನ್ನು 33 ವರ್ಷ ಗುತ್ತಿಗೆ ನೀಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಖೇರಾ ಟೀಕಿಸಿದರು.

ಈ ಸ್ಥಾವರವನ್ನು ಸರ್ಕಾರದ ವತಿಯಿಂದಲೇ ಸ್ಥಾಪಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಇದೀಗ ಈ ಯೋಜನೆಯನ್ನು ಅದಾನಿ ಸಮೂಹಕ್ಕೆ ಧಾರೆ ಎರೆದಿದೆ. ಬಿಹಾರದಲ್ಲಿ ರೈತರನ್ನು ಹೆದರಿಸಿ ಬೆದರಿಸಿ ಬಲವಂತವಾಗಿ ಕಿತ್ತುಕೊಳ್ಳಲಾಗುತ್ತಿದೆ. ಬಿಹಾರದ ರೈತರ ಭೂಮಿ, ಹಣ, ಕಲ್ಲಿದ್ದಲನ್ನು ಬಳಿಸಿಕೊಂಡು ಉತ್ಪಾದಿಸುವ ವಿದ್ಯುತ್ ಅನ್ನು ಮತ್ತೆ ಅದೇ ರೈತರಿಗೆ ಪ್ರತಿ ಯೂನಿಟ್‌ಗೆ ರೂ.6.75 ನಂತೆ ಮಾರಾಟ ಮಾಡಲಾಗುತ್ತದೆ. ಇದು ಬಿಜೆಪಿ ಮಾಡುತ್ತಿರುವ ಡಬಲ್ ಲೂಟಿ ಎಂದು ಆಪಾದಿಸಿದರು.

More articles

Latest article