ಮಾಲೂರು: ತಾಲ್ಲೂಕಿನ ಮಾಸ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕ್ಷೇತ್ರನಹಳ್ಳಿ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕಿಗೆ ಅದೇ ಗ್ರಾಮದ ಚೌಡಪ್ಪ ಎಂಬಾತ ಹಲ್ಲೆ ನಡೆಸಿದ್ದಾನೆ. ಈತ ನೇರವಾಗಿ ಶಾಲೆಗೆ ಪ್ರವೇಶಿಸಿ ಪಾಠ ಮಾಡುತ್ತಿದ್ದ ಶಿಕ್ಷಕಿ ಮಂಜುಳಾ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೌಡಪ್ಪನ ಮಗ ರಕ್ಷಿತ್ ಕಳೆದೆರಡು ದಿನಗಳಿಂದ ಶಾಲೆಗೆ ಗೈರು ಹಾಜರಾಗಿದ್ದ. ಮಂಜುಳಾ ಅವರು ರಕ್ಷಿತ್ ಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಕೆರಳಿದ ಚೌಡಪ್ಪ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಕೂಡಲೇ ಮಾಸ್ತಿ ಪೋಲೀಸರು ಆಗಮಿಸಿದರಾದರೂ ಆ ವೇಳೆಗೆ ಚೌಡಪ್ಪ ಪರಾರಿಯಾಗಿದ್ದ. ಆತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮಂಜುಳಾ ಅವರನ್ನು ಚಿಕಿತ್ಸೆಗಾಗಿ ಮಾಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.