ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರಿಗೆ ಅಹ್ವಾನ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ.
ಅರ್ಜಿದಾರ ಗಿರೀಶ್ ಕುಮಾರ್ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮೆಮೋ ಸಲ್ಲಿಸಿದರು ಮತ್ತು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿಕೊಂಡರು.ಈ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನ್ಯಾಯಪೀಠ ಅರ್ಜಿಗಳ ಸಾಮಾನ್ಯ ಸರದಿಯಂತೆ ನಾಲ್ಕು ದಿನಗಳಲ್ಲಿ ವಿಚಾರಣೆಗೆ ನಿಗದಿಯಾಗಲಿದೆ ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.
ಬಾನು ಮುಷ್ತಾಕ್ ಸೂಕ್ತ ಆಯ್ಕೆ; ನಾವೆದ್ದು ನಿಲ್ಲದಿದ್ದರೆ- ಕರ್ನಾಟಕ ಬೆಂಬಲ:
ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಸರಿಯಾದ ಕ್ರಮವಾಗಿದ್ದು, ಮತೀಯ ಮೂಲಭೂತವಾದಿಗಳು ಮಾತ್ರ ಅವರನ್ನು ವಿರೋಧಿಸುತ್ತಿದ್ದಾರೆ ಎಂದು ನಾವೆದ್ದು ನಿಲ್ಲದಿದ್ದರೆ- ಕರ್ನಾಟಕ ಸಂಘಟನೆ ತಿಳಿಸಿದೆ.
ಸಂಘಟನೆಯ ಪರವಾಗಿ ಲೇಖಕಿಯರಾದ ಸುನಂದಮ್ಮ, ವಸುಂಧರಾ ಭೂಪತಿ, ಅಕೈ ಪದ್ಮಶಾಲಿ, ಆರ್. ಪೂರ್ಣಿಮಾ, ಗೌರಮ್ಮ, ಮಮತಾ ಯಜಮಾನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಾನು ಮುಸ್ತಾಕ್ ಅವರು ತಾನು ಮುಸ್ಲಿಂ ಮತ್ತು ಮಹಿಳೆ ಎಂಬ ಕಾರಣಕ್ಕಾಗಿ ಎರಡು ರೀತಿಯ ಹಿಂಸೆಯನ್ನು ಅನುಭವಿಸಬೇಕಾಗಿದೆ. ಅವರು ಕನ್ನಡಕ್ಕೆ ಬೂಕರ್ ಪ್ರಶಸ್ತಿಯನ್ನು ತಂದು ಕೊಟ್ಟ ಮಹಾನ್ ಸಾಹಿತಿ. ಕನ್ನಡ ಸಾರಸ್ವತ ಲೋಕಕ್ಕೆ ಅವರ ಅವರ ಕೊಡುಗೆ ಅಪಾರ. ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಇಂತಹ ಮಹಾನ್ ದಿಟ್ಟ ಹೆಣ್ಣು ಮಗಳು ದಸರಾ ಉದ್ಘಾಟಿಸಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದು ಹಾಸ್ಯಾಸ್ಪದ ಎಂದರು.