ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಮಹಜರು ನಡೆಸುವ ಸಂದರ್ಭದಲ್ಲಿ ಲಭ್ಯವಾದ ಮೂಳೆ ಮತ್ತಿತರ ಅವಶೇಷಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಂಗ್ಕೆ ಗುಡ್ಡದ ಬಳಿ ಲಬ್ಯವಾದ ಅವಶೇಷಗಳನ್ನು ಬೆಂಗಳೂರಿನ ಎಫ್ ಎಸ್ ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಧರ್ಮಸ್ಥಳ ಗಾಮದ ನೇತ್ರಾವತಿ ನದಿ ಸಮೀಪದ ಬಂಗಲೆ ಗುಡ್ಡದ ಹತ್ತಿರದಿಂದ ವಿಠಲ್ ಗೌಡ ಎಂಬುವರು ಈ ತಲೆ ಬುರುಡೆಯನ್ನು ತಂದಿದ್ದರು ಎಂಬುದನ್ನು ಎಸ್ ಐಟಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಚಿನ್ನಯ್ಯನಿಗೆ ವಿಠಲ್ ಗೌಡ ಅವರು ತಲೆಬುರುಡೆಯನ್ನು ತಂದುಕೊಟ್ಟಿರುವುದು ನಿಜ. ಆರಂಭದಲ್ಲಿ ವಿಠಲ್ ಗೌಡ ಭೂಮಿಯನ್ನು ಅಗೆದು ತಲೆ ಬುರುಡೆಯನ್ನು ಹೊರತೆಗೆದು ತಂದಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಈ ಮಾಹಿತಿ ಸತ್ಯ ಅಲ್ಲ ಎಂದು ತಿಳಿದು ಬಂದಿದೆ. ವಿಠಲ್ ಯಾವುದೇ ಭೂಮಿಯನ್ನು ಅಗೆಯದೆ ಸ್ವಯಂಪ್ರೇರಣೆಯಿಂದ ಹುಡುಕಾಟ ನಡೆಸಿದಾಗ ಅಲ್ಲಿ ಸಿಕ್ಕ ತಲೆ ಬುರುಡೆಯನ್ನು ತಂದುಕೊಟ್ಟಿದ್ದಾರೆ. ಭೂಮಿಯನ್ನು ಅಗೆಯದೆ ಭೂಮಿ ಮೇಲ್ಬಾಗದಲ್ಲಿ ಸಿಕ್ಕ ತಲೆಬುರುಡೆಯನ್ನು ತಂದುಕೊಟ್ಟಿರುವುದರಿಂದ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ವಿಠಲ್ ಅವರನ್ನು ಬಂಧಿಸಲು ಸಾಧ್ಯವಿಲ್ಲ.
ಬಂಗ್ಲೆ ಗುಡ್ಡದಲ್ಲಿ ಮಹಜರು ನಡೆಸಿದಾಗ ಇಬ್ಬರು ವ್ಯಕ್ತಿಗಳ ಅವಶೇಷಗಳು ಪತ್ತೆಯಾಗಿವೆ. ಭೂಮಿ ಮೇಲ್ಗಡೆಯೇ ಅವಶೇಷಗಳು ಸಿಕ್ಕಿರುವುದರಿಂದ ಮಹಜರು ನಡೆಸಲು ಸ್ಥಳೀಯ ತಹಶೀಲ್ದಾರ್ ಅವರ ಉಪಸ್ಥಿತಿ ಬೇಕಿರುವುದಿಲ್ಲ.
ಈ ತಲೆ ಬುರುಡೆ ಕುರಿತು ಎಸ್ ಐಟಿ ಅಧಿಕಾರಿಗಳು ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಮತ್ತು ಯೂಟ್ಯೂಬರ್ ಗಲಾದ ಅಭಿಷೇಕ್ ಹಾಗೂ ಮುನಾಫ್ ಅವರನ್ನು ಪ್ರಶ್ನಿಸುತ್ತಿದೆ.
ಇನ್ನು ಈ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯನನ್ನು ಆಗಸ್ಟ್ 23ರಂದು ಎಸ್ ಐಟಿ ಬಂಧಿಸಿ ತನ್ನ ವಶಕ್ಕೆ ಪಡೆದಿತ್ತು. ಚಿನ್ನಯ್ಯ ಜುಲೈ19 ರಂದು ಶವಗಳನ್ನು ತನ್ನಿಂದ ಬಲವಂತವಾಗಿ ಹೂತು ಹಾಕಿಸಲಾಗಿದೆ ಎಂದು ದೂರು ದಾಖಲಿಸಿದ್ದ. ನಂತರ ಎಸ್ ಐಟಿ ಚಿನ್ನಯ್ಯ ಹೇಳಿದ ಅನೇಕ ಸ್ಥಳಗಳಲ್ಲಿ ಭೂಮಿ ಅಗೆದಿತ್ತು. ಲಭ್ಯವಾದ ಅವಶೇಷಗಳನ್ನು ಎಫ್ ಎಸ್ ಎಲ್ ವರದಿಗಾಗಿ ಕಳುಹಿಸಲಾಗಿದ್ದು ವರದಿ ಏನಿರಬಹುದು ಎಂದು ಕುತೂಹಲ ಮೂಡಿಸಿದೆ.