ಜಿಎಸ್‌ಟಿ ತೆರಿಗೆ ಇಳಿಕೆ; ರಾಜ್ಯಗಳ ನಷ್ಟ ಭರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲು ಕರ್ನಾಟಕ ಸೇರಿ ಹಲವು ರಾಜ್ಯಗಳ ನಿರ್ಧಾರ

Most read

ನವದೆಹಲಿ: ಜಿಎಸ್‌ಟಿ ತೆರಿಗೆ ದರದ ತರ್ಕಬದ್ದಗೊಳಿಸುವಿಕೆಗೆ ಸಂಬಂಧಿಸಿದಂತೆ ನಡೆದ ಸಮಾಲೋಚನಾ ಸಭೆಯಲ್ಲಿ,  ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಈ ಎಂಟು ರಾಜ್ಯಗಳ ಮಂತ್ರಿಗಳು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಹಾಜರಿದ್ದ ಎಲ್ಲಾ ಮಂತ್ರಿಗಳು ಮತ್ತು ಪ್ರತಿನಿಧಿಗಳು, ಕೇಂದ್ರ ಸರ್ಕಾರದ ಪ್ರಸ್ತುತ ಪ್ರಸ್ತಾವನೆಯಿಂದ ರಾಜ್ಯಗಳಿಗೆ ಉಂಟಾಗಬಹುದಾದ ಗಣನೀಯ ಪ್ರಮಾಣದ ರಾಜಸ್ವ ನಷ್ಟದ ಬಗ್ಗೆ ತೀವ್ರ ಕಳಕಳಿಯನ್ನು ವ್ಯಕ್ತಪಡಿಸಿದರು.

ನಂತರ ಸಭೆಯಲ್ಲಿ ಹಾಜರಿದ್ದ ಎಂಟು ರಾಜ್ಯ ಸರ್ಕಾರಗಳ ಕರಡು ಪ್ರಸ್ತಾವನೆಯ ಕುರಿತು ವಿವರವಾದ ಚರ್ಚೆ ನಡೆಯಿತು. ಚರ್ಚೆಯ ನಂತರ, ರಾಜ್ಯಗಳ ರಾಜಸ್ವದ ಹಿತಾಸಕ್ತಿಗಳನ್ನು ಕಾಪಾಡುವ ಜೊತೆಗೆ ಜಿಎಸ್‌ಟಿ ದರ ತರ್ಕಬದ್ದಗೊಳಿಸುವಿಕೆಯನ್ನು ಸಾಧಿಸಲು ಈ ಕರಡು ಪ್ರಸ್ತಾವನೆಯು ಸಹಾಯಕವಾಗುತ್ತದೆ ಎಂಬ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು.

ಜಿಎಸ್‌ಟಿ ದರ ತರ್ಕಬದ್ದಗೊಳಿಸುವಿಕೆ ಪ್ರಕ್ರಿಯೆಯಿಂದ ಎಲ್ಲಾ ಭಾಗೀದಾರರಿಗೆ ಪರಸ್ಪರ ಅನುಕೂಲಕರ ಪರಿಣಾಮ ಉಂಟಾಗುವ ದೃಷ್ಟಿಯಿಂದ, ಈ ಎಂಟು ರಾಜ್ಯಗಳು ಕೇಂದ್ರ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಗಳೊಂದಿಗೆ ಸಹಕರಿಸಲು ಉತ್ಸುಕವಾಗಿವೆ.

ಸದರಿ  ವಿಷಯವನ್ನು ಮುಂಬರುವ ಜಿಎಸ್‌ಟಿ ಮಂಡಳಿಯ ಸಭೆಯ ಕಾರ್ಯಕಲಾಪದಲ್ಲಿ ಸೇರಿಸಲು ಮತ್ತು ಇತರೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಗೆ ಬೆಂಬಲ ನೀಡುವಂತೆ ಕೋರಲು ಸಭೆಯಲ್ಲಿ ಜಂಟಿಯಾಗಿ ತೀರ್ಮಾನಿಸಲಾಯಿತು.

ಕರ್ನಾಟಕದ ಪರವಾಗಿ ಕಂದಾಯ ಸಚಿವ ಸಚಿವ ಕೃಷ್ಣ ಬೈರೇಗೌಡ ಭಾಗವಹಿಸಿದ್ದರು. ಜಿಎಸ್​ಟಿ ದರ ಇಳಿಕೆಯಿಂದ ರಾಜ್ಯಗಳ ಆದಾಯ ಕುಂಠಿತಗೊಳ್ಳಬಹುದು ಎಂದು ಎಲ್ಲರೂ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ರಾಜ್ಯಗಳಿಗೆ ಆಗಬಹುದಾದ ನಷ್ಟವನ್ನು ಕೇಂದ್ರವು ಭರಿಸಬೇಕೆಂದು ಇವು ಒತ್ತಾಯಿಸಿವೆ.

ಸಭೆಯ  ತೀರ್ಮಾನವನ್ನು ಸೆಪ್ಟೆಂಬರ್ 3 ಮತ್ತು 4ರಂದು ನಡೆಯುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪ ಮಾಡಲು ನಿರ್ಧರಿಸಲಾಗಿದೆ.

ಜಿಎಸ್​ಟಿ ದರ ಇಳಿಕೆಯಿಂದ ರಾಜ್ಯಗಳಿಗೆ 2 ಲಕ್ಷ ಕೋಟಿ ರೂ ನಷ್ಟ?

ಕೇಂದ್ರ ಸರ್ಕಾರ ಈಗಿರುವ ಶೇ. 5, ಶೇ. 12, ಶೇ. 18 ಮತ್ತು ಶೇ. 28ರ ಜಿಎಸ್​ಟಿ ಸ್ಲ್ಯಾಬ್ ​ಗಳ ಬದಲು ಶೇ. 5 ಮತ್ತು ಶೇ. 18 ಈ ಎರಡು ಸ್ಲ್ಯಾಬ್ ​ಗಳನ್ನಷ್ಟೇ ಮುಂದುವರೆಸಲು ನಿರ್ಧರಿಸಿದೆ. ಶೇ. 12ರ ಸ್ಲ್ಯಾಬ್​ನಲ್ಲಿದ್ದ ಸರಕುಗಳಿಗೆ ಶೇ. 5 ಜಿಎಸ್​ಟಿ ಮತ್ತು ಶೇ. 28ರ ಸ್ಲ್ಯಾಬ್ ​ನಲ್ಲಿದ ಸರಕುಗಳಿಗೆ ಶೇ. 18 ರಷ್ಟು ಜಿಎಸ್‌ ಟಿ ವಿಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಈ ಜಿಎಸ್​ಟಿ ದರ ಇಳಿಕೆಯಿಂದ ರಾಜ್ಯ ಸರ್ಕಾರಗಳಿಗೆ ಒಂದೂವರೆಯಿಂದ ಎರಡು ಲಕ್ಷ ಕೋಟಿ ರೂನಷ್ಟು ಆದಾಯನಷ್ಟ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ರಾಜ್ಯಗಳಿಗೆ ಆಗಲಿರುವ ಈ ಸಂಭವನೀಯ ಆದಾಯ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ.

ಜಿಎಸ್​ಟಿ ದರ ಇಳಿಕೆಯಿಂದ ರಾಜ್ಯಗಳ ಆದಾಯ ಶೇ. 15ರಿಂದ 20ರಷ್ಟು ಕುಸಿಯಬಹದು. ರಾಜ್ಯಗಳಿಗೆ ಈ ಪ್ರಮಾಣದ  ನಷ್ಟವಾದರೆ ಸರ್ಕಾರದ ಹಣಕಾಸು ಸ್ಥಿರತೆಗೆ ಹೊಡೆತ ಬೀಳುತ್ತದೆ. ಆದ್ದರಿಂದ ಜಿಎಸ್​ಟಿ ಇಳಿಕೆಯು ರಾಜ್ಯಗಳ ಆದಾಯವನ್ನು ಕಡಿತಗೊಳಿಸಬಾರದು ಎಂದು ಎಂಟು ರಾಜ್ಯಗಳು ಆತಂಕ ವ್ಯಕ್ತಪಡಿಸಿವೆ.

More articles

Latest article