ಬೆಂಗಳೂರು: ಸಂಸ್ಕೃತಿ ವಾಣಿಜ್ಯೀಕರಣಗೊಂಡಿದೆ. ಶತ್ರುಗಳು ಇಂದು ಕೋಮುವಾದ, ಜಾತಿವಾದದ ರೂಪದಲ್ಲಿ ನಮ್ಮೊಳಗೇ ಇದ್ದಾರೆ. ಇವತ್ತಿನ ಸಂದರ್ಭದಲ್ಲಿ ಸಂಕಟಗಳನ್ನು ಅರ್ಥೈಸಿಕೊಂಡು ಎಲ್ಲಾ ಜನ ಚಳವಳಿಯ ಸಂಘಟನೆಗಳು ಒಂದೆಡೆ ಸೇರಿ ಕುಳಿತು ಜತೆ ಜತೆಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಸಮುದಾಯ– 50 ಮನುಷ್ಯತ್ವದೆಡೆಗೆ ಸಮುದಾಯ ಜಾಥಾ ನಾಟಕೋತ್ಸವದ ನಾಲ್ಕನೇಯ ದಿನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಿದ್ದನಗೌಡ ಪಾಟೀಲರು ಮಾತನಾಡಿದರು.
ವರ್ಗ ಶತ್ರು ಮತ್ತು ಸಮಾಜದ ಶತ್ರುಗಳನ್ನು ಗುರುತಿಸಿ ಅವರ ವಿರುದ್ಧ ನಮ್ಮ ಹಾಡು ನಾಟಕ ತಮಟೆ ಎಲ್ಲಾ ಸಿಡಿದೇಳಬೇಕು ಎಂದೂ ಅವರು ಕರೆ ನೀಡಿದರು.
ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ಸಂವಿಧಾನ ವಿರೋಧಿಗಳಿಂದ ಸಂವಿಧಾನ ಉಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ. ಇಂದು ಚಳುವಳಿಗಳನ್ನು ವಿಭಜಿಸುವ, ವಿಘಟಿಸುವ ಕುತಂತ್ರ ನೆಡೆಯುತ್ತಿದೆ. ಇದನ್ನು ಅರ್ಥಮಾಡಿಕೊಂಡು ಹೋರಾಡಬೇಕಾಗಿದೆ. ನಾನೂ ಸಹ ಸಮುದಾಯದ ಭಾಗವಾಗಿದ್ದವನು .ಸಮುದಾಯದ ಜಾಥಾಗಳಲ್ಲಿ ಭಾಗವಹಿಸಿ ಜನಚಳುವಳಿಗೆ ಬಂದವನು ಎMದು ನೆನಪಿಸಿಕೊಂಡ ಅವರು ಇಂದು ಎಲ್ಲಾ ಜನಚಳವಳಿಗಳು ಸಮುದಾಯದ ಜತೆ ನಿಂತಿವೆ ಎಂದರು.
ಕವಯತ್ರಿ ಕೆ ಶರೀಫಾ, ಶಿವಮೊಗ್ಗ ಸಮುದಾಯದ ಲಕ್ಷ್ಮಿ ನಾರಾಯಣ, ರಂಗ ನಿರ್ದೇಶಕ ಸುರೇಶ್ ಅನಗಳ್ಳಿ, ಸ್ಪಂದನ ತಂಡದ ರಮೇಶ್ ಸಾಲುಗುಂದಿ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉಪಸ್ಥಿತರಿದ್ದರು. ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಗುಂಡಣ್ಣ ಚಿಕ್ಕಮಗಳೂರು ಈ ಸಮುದಾಯ 50 ಕಾರ್ಯಕ್ರಮಕ್ಕೆ ಸಹಕರಿಸಿದ ಶ್ರಮಿಸಿದ ಎಲ್ಲರಿಗೂ ವಂದನೆ ಸಲ್ಲಿಸಿದರು.