ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಆರ್ ಎಸ್ ಎಸ್ ಪ್ರಾರ್ಥನಾ ಗೀತೆ ಹಾಡಿದ್ದಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನಸ್ಸಿಗೆ ನೋವುಂಟಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನನ್ನ ನಿಷ್ಠೆ ಅಚಲ ಎಂದೂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂಡಿಯಾ ಒಕ್ಕೂಟಕ್ಕೂ ಕ್ಷಮೆ ಕೇಳುತ್ತೇನೆ. ಕ್ಷಮೆ ಕೇಳುವುದರಿಂದ ಗೌರವ ಕಡಿಮೆ ಆಗುವುದಿಲ್ಲ ಎಂದರು.
ಗಾಂಧಿ ಕುಟುಂಬದಿಂದ ರಾಜಕಾರಣ ಆರಂಭಿಸಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಬೆಳೆದಿದ್ದೇನೆ. ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗಲೂ ನಾನು ಹೆದರಲಿಲ್ಲ ಎಂದರು.
ನಾನು ಹುಟ್ಟಾ ಕಾಂಗ್ರೆಸ್ಸಿಗ. ನಾನು ಮರಣ ಹೊಂದುವುದೂ ಕಾಂಗ್ರೆಸ್ ಕಾರ್ಯಕರ್ತನಾಗಿಯೇ. ಇದನ್ನು ಪ್ರಶ್ನಿಸುವವರು ಮೂರ್ಖರು. ನನಗೆ ಕ್ರಿಶ್ಚಿಯನ್, ಮುಸ್ಲಿಂ, ಜೈನ ಸೇರಿದಂತೆ ಎಲ್ಲ ಧರ್ಮಗಳ ಬಗ್ಗೆಯೂ ನಂಬಿಕೆಯಿದೆ. ನನ್ನ ಪಾಲಿಗೆ ಎಲ್ಲ ಧರ್ಮಗಳೂ ಒಂದೇ. ನನಗೆ ಪೈಗಂಬರ್ ತತ್ವಗಳ ಬಗ್ಗೆ ನಂಬಿಕೆ ಇದೆ. ಶ್ಲೋಕಗಳನ್ನು ಕಲಿತಿದ್ದೇನೆ. ಈ ವಿಷಯದಲ್ಲಿ ಯಾರೊಬ್ಬರೂ ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿಕೊಂಡರು.