ಚಾವಟಿಯಿಂದ ಹೊಡೆದುಕೊಂಡು ಪ್ರತ್ಯೇಕ ಮೀಸಲಾತಿಗೆ ಪ್ರತಿಭಟಿಸಿದ ಅಲೆಮಾರಿಗಳು

Most read

ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ  ಪ್ರತ್ಯೇಕವಾಗಿ ಶೇ. 1ರಷ್ಟು ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಅಲೆಮಾರಿ ಸಮುದಾಯಗಳು ನಡೆಸುತ್ತಿರುವ ಹೋರಾಟ ವಾರದ ಗಡಿ ದಾಟಿದೆ. ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಅಲೆಮಾರಿ ಸಮುದಾಯದ ಕಲಾವಿದರು ಚಾವಟಿ ಏಟು ಬಾರಿಸಿಕೊಂಡು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಇವರ ಪ್ರತಿಭಟನೆ ಇಂದೂ ಮುಂದುವರೆದಿದೆ.

ನಗರದ ಫ್ರೀಡಂ ಪಾರ್ಕ್‌ ನಲ್ಲಿ ಪರಿಶಿಷ್ಟ ಜಾತಿಯ 59 ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿ ಆಶ್ರಯದಲ್ಲಿ ಈ ಧರಣಿ ನಡೆಯುತ್ತಿದೆ. ಧರಣಿಗೆ ಸಂಘರ್ಷ ಸಮಿತಿ ಹಾಗೂ ಅರುಂತತಿಯಾರ್ ಮೊದಲಾದ ಸಮುದಾಯಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿವೆ. 

ಸುಡುಗಾಡು ಸಿದ್ದ, ಶಿಳ್ಳೆಕ್ಯಾತ, ಮಾಲ ದಾಸರಿ, ಜೋಗಿ ಮಸಣ, ಬಂಡಿ, ಮುಕ್ರಿ ಸೇರಿದಂತೆ ವಿವಿಧ ಅಲೆಮಾರಿ ಸಮುದಾಯದ ಜನರು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಶಂಖ, ಜಾಗಟೆ, ತಂಬೂರಿ ಬಾರಿಸುವ ಮೂಲಕ ಆಕ್ರೋಶ ಹೊರಹಾಕಿದರು. ಕೆಲವರು ಚಾವಟಿಗಳ ಮೂಲಕ ಮೈಮೇಲೆ ಹೊಡೆದುಕೊಳ್ಳುವ ಮೂಲಕ ನ್ಯಾಯ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.

ಅಲೆಮಾರಿ ಸಮುದಾಯಗಳಿಗೆ ಯಾವುದೇ ರೀತಿಯ ಭದ್ರತೆ ಇಲ್ಲ. ಇವತ್ತಿಗೂ ತುತ್ತು ಅನ್ನಕ್ಕೆ ಪರದಾಡುತ್ತಿತ್ತಿದ್ದಾರೆ. ದೈನಂದಿನ ಜೀವನ ನಡೆಸಲೂ ಪರದಾಡುತ್ತಿದ್ದಾರೆ. ಈ ಸಮುದಾಯಗಳ ಜನರಿಗೆ ಸ್ವಂತ ಊರು, ಮನೆ ಎರಡೂ ಇಲ್ಲ. ಯಾರ ಯಾರದ್ದೋ ಜಮೀನುಗಳಲ್ಲಿ ಟೆಂಟ್‌ ಅಥವಾ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಂದಿ ಸಾಕಣೆ, ಭಿಕ್ಷಾಟನೆ, ಕೂದಲು ಮಾರಾಟ ಇವರ ಮೂಲ ಕಸುಬು. ಆದರೆ ಆದಾಯ ಮಾತ್ರ ಕಡಿಮೆ. ಈಗಿನ ವ್ಯವಸ್ಥೆಯಲ್ಲಿ ಅಲೆಮಾರಿ ಸಮುದಾಯಗಳು ಮೀಸಲಾತಿ ಪಡೆಯಲು ಸಾಧ್ಯವೇ ಎಂದು ಅಲೆಮಾರಿಗಳ ಮುಖಂಡರು ಪ್ರಶ್ನಿಸುತ್ತಾರೆ.

ಅಲೆಮಾರಿ ಸಮುದಾಯದ ಮುಖಂಡರಾದ ಬಿ.ಎಲ್.ಹನುಮಂತಪ್ಪ, ಅಂಬಣ್ಣ ಅರೋಲಿಕರ್, ಸಣ್ಣ ಮಾರಪ್ಪ, ಚಾವಡೆ ಲೋಕೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಹಣಕಾಸಿನ ಕೊರತೆಯಿಂದಾಗಿ ಧರಣಿ ನಡೆಸಲು ಹಾಕಲಾಗಿದ್ದ ಸ್ಥಳದಿಂದ ಶಾಮಿಯಾನವನ್ನು ಮಾಲೀಕರು ತೆರವುಗೊಳಿಸಿದ್ದಾರೆ. ಅಲೆಮಾರಿಗಳು ಟೆಂಟ್‌ ಹಾಕಿಕೊಂಡು ಧರಣಿ ಮುಂದುವರೆಸಿದ್ದಾರೆ.

More articles

Latest article