ನವದೆಹಲಿ: ಇಂಡಿಯಾ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಕುರಿತು ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ನಿವೃತ್ತ ನ್ಯಾಯಾಧೀಶರ ತಂಡ ‘ದುರದೃಷ್ಟಕರ’ ಮತ್ತು ‘ಪೂರ್ವಾಗ್ರಹ ಪೀಡಿತ’ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಮದನ್ ಬಿ. ಲೋಕೂರ್ ಮತ್ತು ಜೆ. ಚೆಲಮೇಶ್ವರ್ ಸೇರಿದಂತೆ 18 ಮಂದಿ ನಿವೃತ್ತ ನ್ಯಾಯಮೂರ್ತಿಗಳು ಪ್ರಕಟಣೆ ನೀಡಿದ್ದಾರೆ.
ಕೇಂದ್ರ ಸಚಿವರೊಬ್ಬರ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಕುರಿತು ತಪ್ಪು ವ್ಯಾಖ್ಯಾನ ಮಾಡಿರುವುದು ನ್ಯಾಯಾಲಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಅವರು ಸಾಲ್ವಾ ಜುಡುಮ್ ತೀರ್ಪನ್ನು ಉಲ್ಲೇಖಿಸಿ ಸುದರ್ಶನ್ ರೆಡ್ಡಿ ಅವರು ಮಾವೋವಾದವನ್ನು ಬೆಂಬಲಿಸುತ್ತಾರೆ ಎಂದು ಆರೋಪಿಸಿದ್ದರು. ಒಂದು ವೇಳೆ ಸುಪ್ರೀಂ ಕೋರ್ಟ್ ನ ಸಾಲ್ವಾ ಜುಡುಮ್ ತೀರ್ಪು ಜಾರಿಯಾಗದಿದ್ದರೆ ನಕ್ಸಲೀಯ ಚಟುವಟಿಕೆಗಳು 2020ರ ವೇಳೆಗೆ ಅಂತ್ಯಗೊಳ್ಳುತ್ತಿದ್ದವು ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ನ್ಯಾಯಮೂರ್ತಿಗಳು ಸಾಲ್ವಾ ಜುಡುಮ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ತೀರ್ಪು ಎಲ್ಲಿಯೂ, ಸ್ಪಷ್ಟವಾಗಿ ಅಥವಾ ಅದರ ಪಠ್ಯದ ಪರಿಣಾಮಗಳ ಮೂಲಕ, ನಕ್ಸಲ್ ವಾದ ಅಥವಾ ಅದರ ಸಿದ್ಧಾಂತವನ್ನು ಅನುಮೋದಿಸುವುದಿಲ್ಲ ಎಂದು 18 ಮಾಜಿ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.