ಅಕ್ರಮ ಗಣಿಗಾರಿಕೆ, ರಫ್ತಿನಿಂದ 80 ಸಾವಿರ ಕೋಟಿ ರೂ. ನಷ್ಟ; ವಸೂಲಿಗೆ ವಸೂಲಿ ಆಯುಕ್ತರ ನೇಮಕ: ಎಚ್.ಕೆ.ಪಾಟೀಲ್‌

Most read

ಬೆಂಗಳೂರು:  ರಾಜ್ಯದಲ್ಲಿ 2006 ರಿಂದ 2012 ರವರೆಗೆ ನಡೆದಿರುವ ಅಕ್ರಮ ಗಣಿಗಾರಿಕೆ ಮತ್ತು ವಿದೇಶಗಳಿಗೆ ಕಾನೂನು ಬಾಹಿರವಾಗಿ ಕಬ್ಬಿಣ ಅದಿರು ರಫ್ತು ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ 80 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ಕರ್ನಾಟಕ ಅಕ್ರಮ ಗಣಿಗಾರಿಕೆಯ ಆಸ್ತಿ ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕ ಮಸೂದೆ- 2005 ಅನ್ನು ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಮಂಡಿಸಿ ವಿವರಣೆ ನೀಡಿದರು.

2006 ರಿಂದ2012 ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಗಣಿಗಾರಿಕೆ ನಡೆಸಲಾಗಿದೆ. ಒಟ್ಟು 80 ಸಾವಿರ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಚೀನಾ, ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ರಫ್ತು ಮಾಡಿದ ಪರಿಣಾಮ 80 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದರು.

ವಿದೇಶಗಳಿಗೆ ರಫ್ತು ಮಾಡಿದ ಪ್ರತಿ ಮೆಟ್ರಿಕ್‌ ಟನ್‌ ಅದಿರಿಗೆ 4,300 ಕೋಟಿ ರೂ.ನಂತೆ ಒಟ್ಟು 80 ಸಾವಿರ ಮೆಟ್ರಿಕ್‌ ಟನ್‌ ಅದಿರು ರಫ್ತು ಮಾಡಲಾಗಿದೆ. ಇದನ್ನು ವಶಪಡಿಸಿಕೊಳ್ಳುವುದು ಒಂದು ಜವಾಬ್ದಾರಿಯುತ ಸರ್ಕಾರದ ಆದ್ಯ ಕರ್ತವ್ಯ. ಈ ಅವಧಿಯಲ್ಲಿ ಗಣಿ ಉದ್ಯಮಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ರಾಜ್ಯಪಾಲರು ಪ್ರಯಾಣಿಸುತ್ತಿರುವಾಗಲೂ ಅದಿರು ಹೊತ್ತ ಲಾರಿಗಳು ಸಾಗಿರುವ ನಿದರ್ಶನವೂ ನಮ್ಮ ಕಣ್ಣ ಮುಂದಿದೆ ಎಂದು ಹೇಳಿದರು.

ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ವಂಚನೆ ಮಾಡಿದ ಹರ್ಷದ್‌ ಮೆಹ್ತಾ ವಿರುದ್ಧ ತನಿಖೆ ನಡೆಸಿ ಆತನಿಂದ 7 ಸಾವಿರ ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ಮಾದರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವವರ ಮೇಲೂ ಕಾನೂನು ಪ್ರಕಾರ ಕ್ರಮ ಕೈಗೊಂಡು ನಷ್ಟವನ್ನು ವಶಪಡಿಸಿಕೊಳ್ಳಬೇಕು ಎಂದ ಎಚ್‌.ಕೆ.ಪಾಟೀಲ್‌ ಇದಕ್ಕಾಗಿ ಈ ವಿಧೇಯಕವನ್ನು ಜಾರಿಗೆ ತಂದಿದ್ದೇವೆ ಎಂದರು.

 ಅಂತಿಮವಾಗಿ ಅಕ್ರಮ ಗಣಿಗಾರಿಕೆ ಮತ್ತು ನಷ್ಟದ ಜಪ್ತಿಗಾಗಿ ವಸೂಲಿ ಆಯುಕ್ತರನ್ನು ನೇಮಿಸುವ ಸಂಬಂಧಪಟ್ಟ ವಿಧೇಯಕಕ್ಕೆ ವಿಧಾನಪರಿಷತ್‌ ಅನುಮೋದನೆ ನೀಡಿತು.

ವಸೂಲಾತಿ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಯನ್ನು ವಸೂಲಾತಿ ಆಯುಕ್ತರನ್ನಾಗಿ ನೇಮಿಸಲಾಗುತ್ತದೆ. ವಸೂಲಾತಿ ಆಯುಕ್ತರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದವರ ಚರ ಮತ್ತು ಸ್ಥಿರಾಸ್ತಿಗಳ ಜಪ್ತಿ ಅಥವಾ ಮುಟ್ಟುಗೋಲು ಮತ್ತು ವಸಲಾತಿ ಕಾರ್ಯಾಚರಣೆಗಳ ಮೇಲೆ ಒಟ್ಟಾರೆ ಮೇಲ್ವಿಚಾರಣಾ ಅಧಿಕಾರವನ್ನು ಹೊಂದಿರುತ್ತಾರೆ. ಅದರ ಜತೆಗೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಬರುವ ದೂರುಗಳನ್ನು ಪರಿಶೀಲಿಸಲಿದ್ದಾರೆ.



More articles

Latest article