ಬೆಂಗಳೂರು: ಬಿಜೆಪಿ ಪಕ್ಷದವರು ಸದಾ ಪರಿಶಿಷ್ಟ ಸಮುದಾಯ ಹಾಗೂ ಬಡವರ ವಿರೋಧಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಒಂದು ವೇಳೆ ಬಡವರು ಪರಿಶಿಷ್ಟ ಸಮುದಾಯದ ಮೇಲೆ ಕಾಳಜಿ ಇದ್ದರೆ ಇದುವರೆಗೂ ಏಕೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತರಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಧನವಿನಿಯೋಗ ಮಸೂದೆಯನ್ನು ಮಂಡಿಸಿ ನಂತರ ಮಾತನಾಡಿದರು. 3,351.96 ಕೋಟಿ ರೂ.ಗಳ ಮೊದಲ ಮೊದಲ ಪೂರಕ ಅಂದಾಜಿಗೆ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಬಿಜೆಪಿ ಸದಸ್ಯರ ಆಕ್ಷೇಪಗಳಿಗೆ ಉತ್ತರಿಸತ್ತಾ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಪರಿಶಿಷ್ಟ ಜಾತಿ ಉಪಯೋಜನೆ (ಎಸ್ ಸಿ, ಎಸ್ ಪಿ) ಹಾಗೂ ಗಿರಿಜನ ಉಪ ಯೋಜನೆಯಡಿ (ಟಿಎಸ್ ಪಿ) ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡಿರುವುದು ನಿಜ. 2013ರಲ್ಲಿ ನಾನು ಮೊದಲು ಮುಖ್ಯಮಂತ್ರಿಯಾದಾಗ ಎಸ್ ಸಿ,ಎಸ್ ಪಿ-ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹಣ ಬಳಕೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಾಗಿರಬಹುದು. ಇಲ್ಲ ಎಂದು ವಾದಿಸುವುದಿಲ್ಲ. ಆದರೆ, ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲೂ ಇಂತಹ ಕಾಯ್ದೆಯನ್ನು ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿ ಸಾಮಾನ್ಯವಾಗಿ ಪೂರಕ ಅಂದಾಜು ಮಂಡಿಸಿದ ಮೇಲೆ ಚರ್ಚೆ ನಡೆಯುವುದಿಲ್ಲ. ಬಿಜೆಪಿ ಸದಸ್ಯರು ರಾಜಕೀಯಕ್ಕಾಗಿ ಚರ್ಚೆ ಮಾಡಿ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮುಂದುವರೆದು ಮಾತನಾಡಿದ ಮುಖ್ಯಮಂತ್ರಿಗಳು, ಸಾಲ ಮಾಡದೆ ಬಜೆಟ್ ಮಂಡಿಸುವುದು ಯಾವುದೇ ಸರ್ಕಾರಕ್ಕೂ ಅಸಾಧ್ಯ. ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ರಾಜ್ಯಗಳೂ ಸಾಲ ಮಾಡುತ್ತವೆ.. ಕರ್ನಾಟಕ ಸರ್ಕಾರ ಹಣಕಾಸು ನೀತಿಯ ಮಿತಿಯಲ್ಲಿಯೇ ಸಾಲ ಮಾಡಿದೆ. ಕೇಂದ್ರ ಸರ್ಕಾರ ರೂ.200 ಲಕ್ಷ ಕೋಟಿ ಸಾಲ ಮಾಡಿದೆ. ಬಿಜೆಪಿಯವರು ಯಾವತ್ತೂ ಪರಿಶಿಷ್ಟರ ವಿರೋಧಿ ನೀತಿಯನ್ನೇ ಅನುಸರಿಸುತ್ತಾ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಆಪಾದಿಸಿದರು.