ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳನ್ನು ಕುರಿತು ತನ್ನ ದೂತ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ವರದಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಸಮೀರ್ ಗೆ ಮಂಗಳೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಪೊಲೀಸರು ಬಂಧಿಸಬಹುದು ಎಂಬ ಮುನ್ಸೂಚನೆ ಅರಿತ ಸಮೀರ್ ಬೆಳ್ತಂಗಡಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಬೆಳ್ತಂಗಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸುತ್ತಿದ್ದಂತೆ ಸಮೀರ್ ಗೆ ಬಂಧನ ಭೀತಿ ಎದುರಾಗಿತ್ತು. ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್ ಮನೆಯನ್ನು ಪೊಲೀಸರು ಸುತ್ತುವರಿದಿದ್ದರು. ಅವರನ್ನು ಬಂಧಿಸಲು ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆನಂದ್ ಎನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.
ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿ ವಿಡಿಯೊ ಮಾಡಿರುತ್ತಾರೆ ಮತ್ತು ಕೋಮು ವೈಷಮ್ಯ ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ಸಮೀರ್ ವಿರುದ್ಧ ಹಲವಾರು ಪ್ರಕಣಗಳನ್ನು ದಾಖಲಿಸಲಾಗಿತ್ತು.
ಸಮೀರ್ ಯಾರು?
ಸಮೀರ್ ಎಂ.ಡಿ. ಎಂಜಿನಿಯರಿಂಗ್ ಪದವೀಧರರು. ಬಳ್ಳಾರಿ ಜಿಲ್ಲೆಯ ಇವರು ʼದೂತʼ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಸೌಜನ್ಯಾ ಅತ್ಯಚಾರ ಮತ್ತು ಕೊಲೆ ಪ್ರಕರಣ ಕುರಿತು ಇವರು ಮಾಡಿದ್ದ ಎಐ ವಿಡಿಯೊವನ್ನು ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ಸಮೀರ್ ಪರಾರಿಯಾಗಿಲ್ಲ, ಸ್ಪಷ್ಟನೆ:
ಮಾಧ್ಯಮಗಳಲ್ಲಿ ಸಮೀರ್ ಪರಾರಿಯಾಗಿದ್ದಾರೆ ಎಂಬ ಕಪೋಲಕಲ್ಪಿತ ಸುದ್ದಿಗಳು ಪ್ರಕಟವಾಗುತ್ತಿದ್ದವು. ಸಮೀರ್ ಆಪ್ತರು ಸ್ಪಷ್ಟನೆ ನೀಡಿ ವಿಚಾರಣೆಗೆ ಹಾಜರಾಗಲು ಪೊಲೀಸರಿಗೆ ಲಿಖಿತವಾಗಿ ಸಮಾಯಾವಕಾಶವನ್ನು ಕೇಳಿದ್ದರು. 15 ದಿನಗಳ ಕಾಲಾವಕಾಶವನ್ನು ಪೊಲೀಸರು ನೀಡಿದ್ದರು. ಆದರೆ ಇಂದು ಮಧ್ಯಾಹ್ನ ಪೊಲೀಸರು ಏಕಾಏಕಿ ಸಮೀರ್ ಮನೆಗೆ ಸರ್ಚ್ ವಾರೆಂಟ್ ಇಲ್ಲದೆ ತಪಾಸಣೆಗೆ ಆಗಮಿಸಿದ್ದರು. ಸತ್ಯವನ್ನು ಜನರಿಗೆ ಹೇಳಿದವರನ್ನು ಪೊಲೀಸರು ಬೇಟೆಯಾಡುತ್ತಿದ್ದಾರೆ. ಸಮೀರ್ ತಮ್ಮ ವಕೀಲರ ಜೊತೆ ನ್ಯಾಯಾಲಯದಲ್ಲಿದ್ದಾರೆ. ಎಲ್ಲಿಗೂ ಓಡಿ ಹೋಗಿಲ್ಲ ಎಂದು ತಿಳಿಸಿದ್ದರು.