ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡಲು ಕೈಗೊಂಡಿರುವ ಸರ್ಕಾರದ ಹೊಸ ನಿರ್ಧಾರಕ್ಕೆ ಅಲೆಮಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯದ ಎಸಗಲಾಗುತ್ತಿದ್ದು, ಅಲೆಮಾರಿಗಳಿಗೆ ಶೇ.1 ಮೀಸಲಾತಿ ಕಲ್ಪಿಸದೆ ಅನ್ಯಾಯ ಮಾಡಲಾಗುತ್ತಿದೆ. ನ್ಯಾ. ಸದಾಶಿವ ಮತ್ತು ನ್ಯಾ. ನಾಗಮೋಹನ್ ದಾಸ್ ವರೆಗಿನ ಎಲ್ಲ ಆಯೋಗಗಳು ಅಲೆಮಾರಿಗಳಿಗೆ ಶೇ.1 ಮೀಸಲಾತಿ ಕಲ್ಪಿಸಬೇಕು ಎಂದು ಶಿಫಾರಸು ಮಾಡುತ್ತಾ ಬರಲಾಗಿದ್ದರೂ ಸರ್ಕಾರ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಇಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.
ಬಲಾಢ್ಯರು ಅಲೆಮಾರಿಗಳ ಪಾಲು ಕಸಿದಿದ್ದಾರೆ. ಇದುವರೆಗೆ ಹೆಚ್ಚು ಮೀಸಲಾತಿ ಅನುಭಿಸಿದ ಸಚಿವರು ಬಹಿರಂಗ ಚರ್ಚೆಗೆ ಬರುವಂತೆ ಅಲೆಮಾರಿ ಸಮುದಾಯ ಸವಾಲು ಹಾಕಿದೆ.
ಹಂದಿ ಜೋಗಿ ಸಂಘದ ಮುಖಂಡರೊಬ್ಬರು ಮಾತನಾಡಿ ಇವತ್ತಿಗೂ ಅಲೆಮಾರಿ ಸಮುದಾಯ ತುತ್ತು ಅನ್ನಕ್ಕೆ ಪರದಾಡುತ್ತಿದೆ. ಅವರಿಗೆ ನಿರ್ದಿಷ್ಟ ಊರು, ಕೇರಿ, ಮನೆ ಇಲ್ಲ. ಪರರ ಜಮೀನುಗಳಲ್ಲಿ ಹಾಕಿಕೊಂಡ ಗುಡಿಸಲುಗಳೇ ಅವರಿಗೆ ವಾಸಸ್ಥಳ. ಹಂದಿ ಸಾಕಾಣಿಕೆ, ಭಿಕ್ಷಾಟನೆ, ಕೂದಲು ಮಾರಾಟವೇ ಅವರ ಕಸುಬು. ಇದೇ ವ್ಯಾಪಾರ ನಂಬಿಕೊಂಡು ಊರೂರು ಅಲೆಯುತ್ತಿದ್ದಾರೆ. ಇಂತಹ ಸಮುದಾಯ ಸ್ಪರ್ಶ ಜಾತಿಯ ಜತೆ ಸೇರಿ ಮೀಸಲಾತಿ ಪಡೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ.
ಸರ್ಕಾರ ಎಡಗೈ, ಬಲಗೈ ಸಮುದಾಯಗಳಿಗೆ ತಲಾ ಶೇ. 6, ಸ್ಪರ್ಶ, ಅಲೆಮಾರಿಗಳಿಗೆ ಶೇ .5ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದೆ. ಇದು ಅಲೆಮಾರಿಗಳ ಪಾಲಿಗೆ ಮರಣ ಶಾಸನವಾಗಲಿದ್ದು, ನೆಲೆಯೇ ಇಲ್ಲದ ಅಲೆಮಾರಿಗಳಿಗೆ ಸ್ಪರ್ಶ ಸಮುದಾಯದ ಜತೆಗೆ ಸ್ಪರ್ಧೆಗೆ ಇಳಿಯಲು ಸಾಧ್ಯವೇ? ಅವರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ ಎಂದು ಮತ್ತೊಬ್ಬ ಅಲೆಮಾರಿ ಮುಖಂಡರು ಎಂದು ಕಣ್ನೀರು ಹಾಕುತ್ತಾರೆ.
ನ್ಯಾ.ನಾಗಮೋಹನದಾಸ್ ವರದಿಯಂತೆ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಮೀಸಲಾತಿ ನೀಡಿದರೆ ಮಾತ್ರ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸಿ ಅಲೆಮಾರಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದೂ ಮನವಿ ಮಾಡಿದ್ದಾರೆ.
ಈ ಪ್ರತಿಭಟನೆಯನ್ನು ಕೇವಲ ಒಂದು ದಿನದ ಹೋರಾಟಕ್ಕೆ ಸೀಮಿತಗೊಳಿಸದೆ ಅಲೆಮಾರಿಗಳಿಗೆ ನ್ಯಾಯ ದೊರೆಯುವವರೆಗೂ ಅನಿರ್ದಿಷ್ಟಾವಧಿಯ ಅಹೋರಾತ್ರಿ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಅಲೆಮಾರಿಗಳ ಹೋರಾಟ ಸಮಿತಿ ತಿಳಿಸಿದೆ.