ಬೆಂಗಳೂರು: ಎಸ್‌ಸಿ, ಎಸ್‌ಟಿ ವಸತಿ ನಿಲಯಗಳು ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಆಹಾರ ಸಾಮಗ್ರಿಗಳ ಟೆಂಡರ್ ಪ್ರಕ್ರಿಯೆ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ಆರಂಭಿಸಿ ಆಹಾರ ಪೂರೈಕೆ ಸುಗಮವಾಗಿ ನಡೆಸಲು ಕ್ರಮ ವಹಿಸಬೇಕು ಎಂದು ಎಸ್ ಸಿ, ಎಸ್ ಟಿ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.
ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ವರದಿಯನ್ನು ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಿದರು.
ಸಮಿತಿಯ ಇತರ ಶಿಫಾರಸುಗಳು:
ರೂ.2 ಕೋಟಿಯೊಳಗಿನ ಕಾಮಗಾರಿಗಳನ್ನು ಪ್ಯಾಕೇಜ್ ಪದ್ದತಿಗೆ ಅಳವಡಿಸದೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಎಸ್ ಸಿ, ಎಸ್ ಟಿ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.
ಇಲಾಖೆಗಳಲ್ಲಿ ದಶಕಗಳ ಹಿಂದಿನ ಯೋಜನೆಗಳೇ ಅಭಿವೃದ್ಧಿ ನಿಗಮಗಳಲ್ಲಿ ಮುಂದುವರೆದಿದ್ದು, ಇವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಕಾಲಕಾಲಕ್ಕೆ ಪರಿಷ್ಕರಣೆ ಮಾಡಬೇಕು.
ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ವಸತಿ ನಿಲಯಗಳ ವಾರ್ಡನ್ ಗಳ ಕೊರತೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಶೈಕ್ಷಣಿಕ ಹಾಗೂ ವಸತಿ ವ್ಯವಸ್ಥೆಗೆ ಅನನುಕೂಲವಾಗುತ್ತಿದ್ದು, ಈ ವ್ಯವಸ್ಥೆಯಲ್ಲು ಸರಿಪಡಿಸಬೇಕು.
ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಅಧೀನದಲ್ಲಿರುವ ಅಭಿವೃದ್ಧಿ ನಿಗಮಗಳ ಅನುದಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನಸಂಖ್ಯೆಗೆ ಪೂರಕವಾಗಿ ಹಂಚಿಕೆ ಆಗಿಲ್ಲ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ನೇಮಕಾತಿ, ಪದೋನ್ನತಿ, ಬ್ಯಾಕ್ ಲಾಗ್, ರೋಸ್ಟರ್ ಗೆ ಸಂಬಂಧಿಸಿದ ವಿಷಯದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆದೇಶಗಳು, ಮಾರ್ಗಸೂಚಿಗಳು, ಸುತ್ತೋಲೆಗಳು ಪರಿಣಾಮಕಾರಿಯಾಗಿಲ್ಲದೇ ಇರುವುದರಿಂದ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಈ ಲೋಪಗಳಿಗೆ ಯಾವುದೇ ಶಿಸ್ತು ಕ್ರಮ ಜರುಗಿಸಿರುವುದಿಲ್ಲ ಎಂದೂ ಅಸಮಧಾನ ವ್ಯಕ್ತಪಡಿಸಿದೆ.