ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ; ಅಮಿತ್‌ ಶಾ ಜೈಲಿಗೆ ಹೋಗಿದ್ದನ್ನು ನೆನಪಿಸಿ ತಿರುಗೇಟು ನೀಡಿದ  ವಿಪಕ್ಷಗಳು

Most read

ನವದೆಹಲಿ: ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯಗಳ ಸಚಿವರು 30 ದಿನಗಳ ಕಾಲ ಬಂಧನದಲ್ಲಿದ್ದರೆ ಅಥವಾ ಅಥವಾ ಕನಿಷ್ಠ 5 ವರ್ಷ ಜೈಲು ಶಿಕ್ಷೆಗೊಳಗಾಗಿದ್ದರೆ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮೂರು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸುವ ಸಂದರ್ಭದಲ್ಲಿ  ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಬಾರಿ ಕೋಲಾಹಲ ನಡೆಯಿತು.

ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರ ಪದಚ್ಯುತಿಗೆ ಅವಕಾಶ ಕಲ್ಪಿಸುವ ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025 ಅನ್ನು ಜಾರಿಗೊಳಿಸಲು ಕೇಂದ್ರ ಸಜ್ಜಾಗಿದೆ. ಈ ತಿದ್ದುಪಡಿಯ ಮಸೂದೆಯನ್ನು  ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ರವಾನಿಸುವ ಗೊತ್ತುವಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಂಡಿಸಲಾರಂಭಿಸುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಹಲವು ಸದಸ್ಯರು ಸದನದ ಬಾವಿಗೆ ಇಳಿದು ಮಸೂದೆಯ ಪ್ರತಿಯನ್ನು ಹರಿದು ಅಕ್ರೋಶ ಹೊರಹಾಕಿದರು. ಆಗ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಟಿಎಂಸಿ ಸಂಸದರು ಕಲ್ಯಾಣ್‌ ಬ್ಯಾನರ್ಜಿ ನೇತೃತ್ವದಲ್ಲಿ  ಶಾ ಅವರ ಆಸನದತ್ತ ಆಗಮಿಸಿ ಮಸೂದೆಯ ಪ್ರತಿಗಳನ್ನು ಹರಿದು ಬಿಸಾಡಿದರು.

ಈ ಮಸೂದೆಯು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿವೆ. ಕೇಂದ್ರ ಸರ್ಕಾರವು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಅಧಿಕಾರ ಕಿತ್ತುಕೊಳ್ಳಲು ಈ ಮಸೂದೆ ಜಾರಿಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು. ಪ್ರತಿಪಕ್ಷಗಳ ಸಂಸದರಾದ ಕಾಂಗ್ರೆಸ್‌ ನ ಕೆ.ಸಿ. ವೇಣುಗೋಪಾಲ್‌, ಮನೀಷ್‌ ತಿವಾರಿ, ಎಐಎಂಐಎಂ ಪಕ್ಷದ ಅಸಾದುದ್ದೀನ್‌ ಓವೈಸಿ, ಆರ್‌ ಎಸ್‌ ಪಿ ಪಕ್ಷದ  ಎನ್‌.ಕೆ. ಪ್ರೇಮಚಂದ್ರನ್‌ ಅವರು ಮಸೂದೆ ಮಂಡನೆಗೆ ವಿರೋದ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ  ವೇಣುಗೋಪಾಲ್‌ ಅವರು,  2002ರಲ್ಲಿ ಗುಜರಾತ್‌ನಲ್ಲಿ ಗಲಭೆ ನಡೆದ ಸಂದರ್ಭದಲ್ಲಿ ಆಗ ರಾಜ್ಯ ಗೃಹ ಸಚಿವರಾಗಿದ್ದ ಅಮಿತ್‌ ಶಾ ಅವರನ್ನು ಬಂಧಿಸಿದ್ದನ್ನು ಪ್ರಶ್ನಿಸಿದರು. ಅಮಿತ್‌ ಶಾ ಪ್ರತಿಕ್ರಿಯಿಸಿ, ಅದೊಂದು ಸುಳ್ಳು ಪ್ರಕರಣವಾಗಿತ್ತು. ಆದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೆ ಎಂದು ಉತ್ತರಿಸಿದರು.

ಮಸೂದೆಯಲ್ಲಿ ಏನಿದೆ?

ಈ ಉದ್ದೇಶಿತ ಮಸೂದೆಯಲ್ಲಿ 30 ದಿನಗಳ ಅವಧಿಗೆ ಬಂಧನದಲ್ಲಿದ್ದರೆ 31ನೇ ದಿನ ಅವರನ್ನು ಪದಚ್ಯುತಗೊಳಿಸಲು ಅವಕಾಶ ಇರುತ್ತದೆ. ಆದರೆ, ಬಂಧನದಿಂದ ಬಿಡುಗಡೆ ಆದವರು ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರಾಗಿ ನೇಮಕಗೊಳ್ಳಲು ಯಾವುದೇ ನಿರ್ಬಂಧ ಇರುವುದಿಲ್ಲ.

ಈ ಮಸೂದೆಗಳನ್ನುಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಲಿದ್ದು ನಂತರ ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಒಪ್ಪಿಸಲಾಗುತ್ತದೆ.

ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಅಥವಾ ರಾಜ್ಯಗಳ ಸಚಿವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದ್ದರೆ  ಅಂಥಹವರನ್ನು ಹುದ್ದೆಗಳಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಕಾನೂನು ಚೌಕಟ್ಟು ವಿಧಿಸಲು ಈ ಮಸೂದೆಗಳನ್ನು ರೂಪಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಪ್ರಧಾನಿಯು 30 ದಿನಗಳ ಕಾಲ ಬಂಧನದಲ್ಲಿದ್ದರೆ 31ನೇ ದಿನ ಅವರು ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅವರು ರಾಜೀನಾಮೆ ನೀಡದೇ ಇದ್ದರೂ ಅವರು ಪದಚ್ಯುತರಾಗುತ್ತಾರೆ. 30 ದಿನಗಳ ಅವಧಿಗೆ ಬಂಧನದಲ್ಲಿದ್ದರೆ  ಅಥವಾ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಯು 31ನೇ ದಿನದಂದು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಬಹುದಾಗಿದೆ. ಒಂದು ವೇಳೆ ಶಿಫಾರಸು ಮಾಡದಿದ್ದರೂ ಅವರು ಸ್ವಾಭಾವಿಕವಾಗಿ 31ನೇ ದಿನದಂದು ಅಧಿಕಾರ ಕಳೆದುಕೊಳ್ಳಲಿದ್ದಾರೆ.

ರಾಜ್ಯಗಳ ಮುಖ್ಯಮಂತ್ರಿ ಮತ್ತು ಸಚಿವರಿಗೂ ಇದೇ ಮಾದರಿ ಅನ್ವಯವಾಗಲಿದೆ. ರಾಜ್ಯಗಳಲ್ಲಿ ಪದಚ್ಯುತಗೊಳಿಸುವ ಅಧಿಕಾರ ರಾಜ್ಯಪಾಲರು ಹೊಂದಿರುತ್ತಾರೆ.

More articles

Latest article